ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಲಾಕ್ ಡೌನ್ ನಿಂದಾಗಿ ಇಡೀ ಚಿತ್ರರಂಗವೇ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕಿದೆ. ಕನ್ನಡ ಚಿತ್ರರಂಗವನ್ನು ಒಂದು ಮಾದರಿ ಚಿತ್ರರಂಗವನ್ನಾಗಿ ಮಾಡಬೇಕಿದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಿಳಿಸಿದ್ದಾರೆ.
ಕೊರೊನಾದಿಂದಾಗಿ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ನಟ ಶಿವರಾಜ್ ಕುಮಾರ್ ಅವರ ಮನೆಯಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಅದರ ಸಂಸ್ಥೆಗಳು ಹಾಗೂ ಅದರ ಅಂಗ ಸಂಸ್ಥೆಗಳ ಪದಾಧಿಕಾರಿಗಳು ಹಿರಿಯ ಕಲಾವಿದರು ಸೇರಿ ಸಭೆ ನಡೆಸಿದರು.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ಚಿತ್ರರಂಗದ ಎಲ್ಲ ವಿಭಾಗಗಳಿಂದ ಒಗ್ಗಟ್ಟಾಗಿ ಬಂದು ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. ಕೊರೊನಾದಂತಹ ಈ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಿರುವುದು ನಿಜ. ಈ ವೇಳೆ ನಾವೆಲ್ಲರೂ ಒಗ್ಗಟ್ಟಾಗಿ ಸಾಗಬೇಕಾಗಿದೆ. ಚಿತ್ರರಂಗದ ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ರಾಜ್ಯ ಸರ್ಕರದ ಜತೆ ಚರ್ಚಿಸಬೇಕಿದೆ ಎಂದರು.
ಸರ್ಕಾರದ ಮುಂದೆ ಹೋಗುವುದಕ್ಕಿಂತ ಮೊದಲು ಚಿತ್ರರಂಗದವರಾದ ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೇಗೆ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸಿದ್ದೇವೆ. ನಾವು ಏನು ಮಾಡಿದ್ದೇವೆ ಎಂಬುದು ಮುಖ್ಯ. ಈಗಾಗಲೇ ಚಿತ್ರರಂಗದ ಹಲವರು ಹಲವರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಅದೇ ರೀತಿ ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಏನು ಮಾಡಬೇಕು ಎಂಬುದನ್ನು ತೀರ್ಮಾನಿಸಬೇಕು. ಮೂರು, ನಾಲ್ಕು ದಿನಗಳಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಸೇರಿ, ಅದರಲ್ಲಿ ರಾಜ್ಯ ಸರ್ಕಾರಕ್ಕೆ ಯಾವ ರೀತಿ ಮನವಿ ಸಲ್ಲಿಸಬೇಕು ಎಂಬುದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು
ನನಗೆ ಯಾವ ನಾಯಕತ್ವವೂ ಮುಖ್ಯವಲ್ಲ, ಆದರೆ ಎಲ್ಲರೂ ಒಟ್ಟಾಗಿ ಬಂದು ಮುಂದಾಳತ್ವ ವಹಿಸುವಂತೆ ಕೇಳಿದ್ದಾರೆ. ಹೀಗಾಗಿ ಎಲ್ಲರೂ ಜತೆಯಾಗಿ ಸಾಗೋಣ. ಒಟ್ಟಾಗಿ ಸರ್ಕಾರದ ಬಳಿ ಹೋಗಿ ಮನವಿ ಮಾಡೋದು ಎಂದು ತೀರ್ಮಾನಿಸಿದ್ದೇವೆ. ಇನ್ನು ಚಿತ್ರರಂಗದ ಕಾರ್ಮಿಕರು ಯಾರೂ ಧೈರ್ಯ ಕಳೆದುಕೊಳ್ಳಬೇಡಿ. ತಕ್ಷಣವೇ ಎಲ್ಲವೂ ಸರಿ ಹೋಗುತ್ತೆ ಅಂತ ಹೇಳಲು ಆಗುವುದಿಲ್ಲ. ಅದಕ್ಕೆ ಸಮಯ ಬೇಕು, ನಿಮ್ಮ ಜೊತೆ ನಾನಿದ್ದೇನೆ. ಎಲ್ಲರಿಗೂ ಸೂಕ್ತ ಪರಿಹಾರ ನೀಡುವ ಬಗ್ಗೆ ಯೋಚಿಸಲಾಗುವುದು ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ