ಪ್ರಗತಿ ವಾಹಿನಿ ಸುದ್ದಿ, ಬೈಲಹೊಂಗಲ: ಪ್ರತಿವರ್ಷದಂತೆ ಜನವರಿ 12 ಹಾಗೂ 13 ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ಅವರು ಪ್ರಕಟಿಸಿದರು.
ಸಂಗೊಳ್ಳಿ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮಾರಕ ಸಭಾಭವನದಲ್ಲಿ ಸೋಮವಾರ (ಜ.2) ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ಕಾರಣಕ್ಜೆ ಎರಡು ವರ್ಷಗಳಿಂದ ಸರಳ ರೀತಿಯಲ್ಲಿ ಆಚರಿಸಲಾಗಿದೆ. ಆದರೆ ಈ ಬಾರಿ ಗ್ರಾಮಸ್ಥರ ಒಕ್ಕೊರಲಿನ ಒತ್ತಾಯದಂತೆ ಉತ್ಸವವನ್ನು ಸಡಗರದಿಂದ ಆಚರಿಸಲಾಗುವುದು. ಉತ್ಸವಕ್ಕಾಗಿ ಒಂದು ಕೋಟಿ ರೂಪಾಯಿ ಅನುದಾನ ಒದಗಿಸುವಂತೆ ಪ್ರಸ್ತಾವನೆ ಈಗಾಗಲೇ ಕಳಿಸಲಾಗಿದೆ.
ಆದರೆ ಸರಕಾರದಿಂದ ಇನ್ನೂ ಯಾವುದೇ ಹಣಕಾಸು ಬಿಡುಗಡೆಯಾಗಿಲ್ಲ. ಒಂದು ಕೋಟಿ ರೂಪಾಯಿ ಬಿಡುಗಡೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ.
ಐವತ್ತು ಲಕ್ಷ ರೂಪಾಯಿ ಬಿಡುಗಡೆಗೆ ಮುಖ್ಯಮಂತ್ರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ. ಒಂದು ವಾರದಲ್ಲಿ ಅನುದಾನ ಬಿಡುಗಡೆಯಾಗಲಿದೆ ಎಂದು ಶಾಸಕ ಕೌಜಲಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮದ ಜನರು ಪೂರ್ವಭಾವಿ ಸಭೆಯಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಯಾವುದೇ ಕಾರ್ಯಕ್ರಮ ಅಥವಾ ಉತ್ಸವ ಬರೀ ಸರಕಾರಿ ಉತ್ಸವ ಆಗಬಾರದು. ಸಂಗೊಳ್ಳಿ ಉತ್ಸವ ಬರೀ ಸಂಗೊಳ್ಳಿಗೆ ಸೀಮಿತವಾಗಬಾರದು ಇಡೀ ಜಿಲ್ಲೆ ಹಾಗೂ ರಾಜ್ಯದಾದ್ಯಂತ ಪಸರಿಸಬೇಕು ಎಂದರು.
ಪ್ರತಿವರ್ಷ ಜನವರಿ 12 ಹಾಗೂ 13 ರಂದು ಆಚರಿಸಲಾಗುತ್ತಿದ್ದು, ಈ ಬಾರಿ ಜನವರಿ ಅಂತ್ಯದಲ್ಲಿ ಆಚರಿಸುವ ಬಗ್ಗೆ ಆರಂಭದಲ್ಲಿ ಇಂಗಿತ ವ್ಯಕ್ತಪಡಿಸಿದರು.
ಈ ಬಗ್ಗೆ ಗ್ರಾಮಸ್ಥರು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬಹುದು ಎಂದರು. ಆದರೆ ಗ್ರಾಮಸ್ಥರ ಆಶಯದಂತೆ ಜನವರಿ 12 ಹಾಗೂ 13 ರಂದು ಉತ್ಸವ ನಡೆಸುವುದಾಗಿ ಪ್ರಕಟಿಸಿದರು.
ಮುಂದಿನ ವರ್ಷದಿಂದ ಜ್ಯೋತಿಯಾತ್ರೆಯನ್ನು ಕೂಡ ರಾಜ್ಯದಾದ್ಯಂತ ಸಂಚರಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಒತ್ತಾಯಿಸಲಾಗುವುದು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಈ ಬಾರಿ ಕುಸ್ತಿ ಸ್ಪರ್ಧೆಗಳನ್ನು ಕೂಡ ಆಯೋಜಿಸಲಾಗುವುದು. ಉತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ರಚಿಸಲಾಗಿರುವ ಎಲ್ಲ ಸಮಿತಿಗಳು ತಮಗೆ ವಹಿಸಲಾಗಿರುವ ಕೆಲಸಗಳನ್ನು ಆರಂಭಿಸಬೇಕು ಎಂದು ಸೂಚನೆ ನೀಡಿದರು.
ಉತ್ಸವಕ್ಜೆ ಅನುದಾನ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ನಾಲ್ಕೈದು ತಿಂಗಳಿನಿಂದ ಪ್ರಯತ್ನ ನಡೆಸಲಾಗುತ್ತಿದೆ. ಈಗ ಮತ್ತೊಮ್ಮೆ ಪ್ರಯತ್ನಿಸಿ ಶೀಘ್ರ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ಶಾಸಕರು ಭರವಸೆಯನ್ನು ನೀಡಿದರು.
ಇದೇ ವೇಳೆ ಮಾತನಾಡಿದ ಉಪ ವಿಭಾಗಾಧಿಕಾರಿ ಶಶಿಧರ್ ಬಗಲಿ ಅವರು, “ಉತ್ಸವ ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಗ್ರಾಮಸ್ಥರನ್ನು ಒಳಗೊಂಡ 13 ವಿವಿಧ ಉಪ ಸಮಿತಿ ರಚಿಸಲಾಗುವುದು” ಎಂದರು.
ಸ್ವಾಗತ, ವಸತಿ, ಸಾಂಸ್ಕೃತಿಕ, ಪ್ರಚಾರ, ವೇದಿಕೆ, ವಿಚಾರಸಂಕಿರಣ, ವಸ್ತುಪ್ರದರ್ಶನ ಮತ್ತಿತರ ಉಪ ಸಮಿತಿಗಳು ಕೆಲಸ ಮಾಡಲಿವೆ ಎಂದು ಹೇಳಿದರು.
ಸಂಗೊಳ್ಳಿ ಉತ್ಸವ; ಜನರ ಸಲಹೆಗಳು:
ಪ್ರತಿವರ್ಷದಂತೆ ಜನವರಿ 12 ಹಾಗೂ 13 ರಂದು ಉತ್ಸವ ನಡೆಸಲು ಗ್ರಾಮಸ್ಥರು ಮನವಿ ಮಾಡಿಕೊಂಡರು.
ಉತ್ಸವ ಅದ್ಧೂರಿಯಾಗಿ ಆಚರಿಸಬೇಕು; ಪಂಚಾಯಿತಿಗೆ ಅನುದಾನ ಒದಗಿಸಿ ಅಭಿವೃದ್ಧಿ ಕೆಲಸ ಕೈಗೊಳ್ಳಬೇಕು;
ರಾಜ್ಯಮಟ್ಟದ ಉತ್ಸವವಾಗಿ ಆಚರಿಸಬೇಕು; ಹೆಚ್ಚಿನ ಕಲಾತಂಡಗಳನ್ನು ನಿಯೋಜಿಸಬೇಕು; ರಾಜ್ಯ-ರಾಷ್ಟ್ರಮಟ್ಟದ ಕುಸ್ತಿ, ಕಬಡ್ಡಿ, ಕೊಕ್ಕೊ ಕ್ರೀಡಾಕೂಟ ಆಯೋಜಿಸಬೇಕು.
ಸಂಗೊಳ್ಳಿ ಉತ್ಸವದ ಅಂಗವಾಗಿ ರಾಜ್ಯದಾದ್ಯಂತ ಜ್ಯೋತಿ ಸಂಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡರು.
ಸಂಪಗಾಂವ ಜೈಲು ಸುಟ್ಟಿರುವುದನ್ನು ಹಾಗೂ ಜೋಳದರಾಶಿ ಕುರಿತು ಯುವಸಮುದಾಯಕ್ಕೆ ತಿಳಿಸಿಕೊಡುವ ನಿಟ್ಟಿನಲ್ಲಿ ಧ್ವನಿಬೆಳಕು ಕಾರ್ಯಕ್ರಮ ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಇಮಾಮ್ ಸಾಬ್, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಶಾಲಾಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜ ನಾಲತವಾಡ,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಸವರಾಜ, ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಜ್ಞಾನೇಶ್ವರ, ತಹಶೀಲ್ದಾರ ಬಸವರಾಜ ನಾಗರಾಳ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಭಾಗವಹಿಸಿದ್ದ ಸಂಗೊಳ್ಳಿ ಗ್ರಾಮದ ಅನೇಕ ಹಿರಿಯರು ಹಾಗೂ ಯುವಕರು ಉತ್ಸವದ ಯಶಸ್ಸಿಗೆ ಸಲಹೆಗಳನ್ನು ನೀಡಿದರು.
https://pragati.taskdun.com/boothvijaya-abhiyanbjpcm-basavaraj-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ