ಸಂಜಯ್ ಪಾಟೀಲ ಹೇಳಿಕೆ ಸಮರ್ಥಿಸಲಾಗದೆ ಜಗದೀಶ್ ಶೆಟ್ಟರ್ ಗೆ ಇರಿಸು ಮುರುಸು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಈಗಾಗಲೆ ನಾನು ಮಾಜಿ ಶಾಸಕ ಸಂಜಯ್ ಪಾಟೀಲ್ ಜೊತೆಗೆ ಮಾತನಾಡಿರುವೆ. ಯಾವ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ್ದಾರೆ ಎಂಬ ಬಗ್ಗೆಯೂ ಚರ್ಚೆ ಮಾಡಿರುವೆ. ಈ ಕುರಿತು ಸಂಜಯ್ ಪಾಟೀಲ ಅವರೆ ಸರಿಯಾದ ಸ್ಪಷ್ಟೀಕರಣ ನೀಡುತ್ತಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಮಾಜಿ ಶಾಸಕ ಸಂಜಯ್ ಪಾಟೀಲ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.
ನಗರದ ಡಾ. ಬಾಬಾಸೇಬ್ ಅಂಬೆಡ್ಕರ್ ಉದ್ಯಾನದಲ್ಲಿ ರವಿವಾರ ಮಾದ್ಯಮಗಳ ಜೊತೆ ಮಾತನಾಡಿದ ಅವರು, ನರೇಂದ್ರ ಮೋದಿ ಬಗ್ಗೆ, ಬಿಜೆಪಿ ನಾಯಕರ ಬಗ್ಗೆ ಕಾಂಗ್ರೆಸ್‌ನವರು ಕೀಳಾಗಿ ಮಾತನಾಡಿದ್ದಾರೆ. ಏಕವಚನದಲ್ಲಿ ಸಾಕಷ್ಟು ಸಲ ನಮ್ಮ ನಾಯಕರ ಬಗ್ಗೆ ಕಾಂಗ್ರೆಸ್‌ನವರು ಮಾತನಾಡಿದ್ದು ಇದೆ. ಹೀಗಾಗಿ ಸಂಜಯ್ ಪಾಟೀಲ ಅವರೇ ಈ ಬಗ್ಗೆ ಉತ್ತರ ನೀಡುತ್ತಾರೆ. ಸಂಜಯ್ ಪಾಟೀಲ ಆಡಿರುವ ಮಾತುಗಳು ಬಿಜೆಪಿ ಅಜೆಂಡಾ ಅಲ್ಲವೇ ಅಲ್ಲ. ಸಂಜಯ್ ಪಾಟೀಲ ಜೊತೆಗೆ ಮತ್ತೊಮ್ಮೆ ಸಮಾಲೋಚನೆ ಮಾಡುತ್ತೇನೆ. ನಾನೂ ವೇದಿಕೆ ಮೇಲೆ ಇದ್ದೆ, ಆದರೆ ಸಂಜಯ್ ಪಾಟೀಲ್ ಇದಕ್ಕೆ ಸ್ಪಷ್ಟೀಕರಣ ನೀಡಿದ್ರೆ ಉತ್ತಮ. ನಾವು ಎಲ್ಲ ಕಾರ್ಯಕ್ರಮಗಳಲ್ಲೂ ವೇದಿಕೆ ಮೇಲೆ ಇರುತ್ತೇವೆ. ಎಲ್ಲರ ಭಾಷಣ ಗ್ರಹಿಸಿಕೊಳ್ಳಲು ಸಾಧ್ಯವಾಗಲ್ಲ. ಹೀಗಾಗಿ ಸಂಜಯ್ ಪಾಟೀಲ ಜೊತೆಗೆ ಸಮಾಲೋಚನೆ ಮಾಡಿ ನಿರ್ಧಾರಕ್ಕೆ ಬರುತ್ತೇನೆ ಎಂದು ತಿಳಿಸಿದರು.
ಸಂಜಯ್ ಪಾಟೀಲ ಹೇಳಿಕೆ ಲಿಂಗಾಯತ ಸಮಾಜಕ್ಕೆ ಮಾಡಿದ ಅನ್ಯಾಯ ಎಂಬ ಹೆಬ್ಬಾಳ್ಕರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಎಲ್ಲ ವಿಚಾರಗಳನ್ನು ಸಮಾಜಕ್ಕೆ, ಸಮುದಾಯಕ್ಕೆ ಏಕೆ ತೆಗೆದುಕೊಂಡು ಹೋಗುತ್ತಾರೆ ನನಗೆ ತಿಳಿಯುತ್ತಿಲ್ಲ. ಲಿಂಗಾಯತ ಸಮಾಜಕ್ಕೆ, ಪಾಟೀಲ್ ಹೇಳಿಕೆಗೆ ಏನು ಸಂಬಂಧ? ಹೇಳಿಕೆ ತಪ್ಪಾಗಿದ್ರೆ ತಪ್ಪು ಎಂದು ಹೇಳೋಣ, ಸಮುದಾಯಕ್ಕೆ ಹೋಗಿ ಮುಟ್ಟಿಸುವುದು ಸರಿಯಲ್ಲ ಎಂದು ತಿಳಿಸಿದರು.
10 ವರ್ಷಗಳ ಕಾಲ ಮೋದಿ ಸರ್ಕಾರ ಜನ ಪರ ಯೋಜನೆ ಜಾರಿಗೊಳಿಸಿದೆ. ಆ ಮೂಲಕ ಎಲ್ಲ ವರ್ಗದ ಜನರ ಪ್ರೀತಿಗೆ ನರೇಂದ್ರ ಮೋದಿ ಪಾತ್ರವಾಗಿದ್ದಾರೆ. ಎಲ್ಲ ವರ್ಗಗಳ ಜನರನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ರಚಿಸಲಾಗಿದೆ. ಈ ಹಿಂದೆ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಎಲ್ಲ ಭರವಸೆಗಳನ್ನು ಕೂಡ ನಮ್ಮ ಸರ್ಕಾರ ಈಡೇರಿಸಿದೆ. ಈ ಚುನಾವಣೆಗಾಗಿ ಬಿಡುಗಡೆಗೊಂಡಿರುವ ಪ್ರಣಾಳಿಕೆಯನ್ನು ನಾನು ಸ್ವಾಗತಿಸುವೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ