ಮುಖ್ಯಮಂತ್ರಿಗಳೇ ಎಲ್ಲವನ್ನು ಮಾಡುವುದಾದರೇ ಮಂತ್ರಿಗಳು ಯಾಕೆ ಬೇಕು?: ಸತೀಶ ಜಾರಕಿಹೊಳಿ ಪ್ರಶ್ನೆ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬಿಮ್ಸ್ ನಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಲು ಸ್ವತಃ ಮುಖ್ಯಮಂತ್ರಿಗಳೇ ಬೆಳಗಾವಿಗೆ ಬರುತ್ತೇನೆ ಎಂದಿದ್ದಾರೆ. ಮುಖ್ಯಮಂತ್ರಿಗಳೇ ಎಲ್ಲವನ್ನು ಮಾಡುವುದಾದರೇ, ಜಿಲ್ಲೆಯಲ್ಲಿರುವ ನಾಲ್ವರು ಮಂತ್ರಿಗಳು ಯಾಕೆ ಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಯಿಂದ ನೂತನವಾಗಿ ಆರಂಭಿಸಿರುವ ಕೋವಿಡ್-19 ಹೆಲ್ಪ್ ಲೈನ್ ಸರ್ವೀಸ್ ಸೆಂಟರ್ ಗೆ ಚಾಲನೆ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೋವಿಡ್ ಸೋಂಕಿತರಿಗೆ ಸಲಹೆ, ಸೂಚನೆಗಳನ್ನು ನೀಡುವುದು, ಔಷಧಿ ವಿತರಣೆ, ಸೋಂಕಿತರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುವುದು, ಆಸ್ಪತ್ರೆಯಿಂದ ಮನೆಗೆ ಕೊಂಡೊಯ್ಯುವುದು, ಮೃತಪಟ್ಟ ಸೋಂಕಿತರ ಶವಗಳನ್ನು ಸ್ಮಶಾನಕ್ಕೆ ಸಾಗಿಸುವುದು ಸೇರಿ ಇನ್ನಿತರೇ ಸೌಕರ್ಯಗಳನ್ನು ಕೋವಿಡ್ ಹೆಲ್ಪ್ ಲೈನ್ ಸೆಂಟರ್ ಮೂಲಕ ಒದಗಿಸಲಾಗುವುದು. ಜಿಲ್ಲೆಯ ಜನರು ಇದರ ಸದುಪಯೋಗ ಪಡೆಯಬೇಕು ಎಂದರು.
ಇದೇ ವೇಳೆ ಜಿಲ್ಲೆಯಲ್ಲಿರುವ ಮಂತ್ರಿಗಳು ಬಿಮ್ಸ್ ಗೆ ತೆರಳಿ ಸಭೆ ನಡೆಸಿ, ಸಮಸ್ಯೆಗಳನ್ನು ಬಗೆಹರಿಸಬೇಕಿತ್ತು. ಮುಖ್ಯಮಂತ್ರಿಗಳೇ ಎಲ್ಲವನ್ನು ಮಾಡಲು ಆಗುವುದಿಲ್ಲ ಎಂದರು.
ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ, ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಿಯರೇ ಆಗಿರಬೇಕು ಎಂದು ನಾನು ಈ ಹಿಂದೆಯೇ ಹೇಳಿದ್ದೇನೆ. ಸ್ಥಳೀಯರಿಗೆ ಅಲ್ಲಿನ ಸಮಸ್ಯೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿರುತ್ತದೆ. ಅನುಭವವೂ ಇರುತ್ತದೆ. ಹೀಗಾಗಿ, ಜಿಲ್ಲೆಯಲ್ಲಿರುವ ನಾಲ್ವರು ಸಚಿವರಲ್ಲಿ ಒಬ್ಬರು ಜಿಲ್ಲಾ ಉಸ್ತುವಾರಿ ಸಚಿವರಾಗಬೇಕಿತ್ತು” ಎಂದು ಹೇಳಿದರು.
2023ರ ಮೇ ನಲ್ಲಿ ಸಿಗಲಿದೆ ಉತ್ತರ:
ಬಿಜೆಪಿಯಲ್ಲಿ ಭುಗಿಲೆದ್ದಿರುವ ಮುಖ್ಯಮಂತ್ರಿಗಳ ಬದಲಾವಣೆಯ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ, “2023ರ ಮೇ ನಲ್ಲಿ ಅದಕ್ಕೆ ಉತ್ತರ ಸಿಗಲಿದೆ ಎಂದು ಹೇಳುವ ಮೂಲಕ ಮಾರ್ಮಿಕವಾಗಿ ಉತ್ತರ ನೀಡಿದರು.
ಇದೇ ವೇಳೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಪ್ರಕರಣದ ಕುರಿತು ತನಿಖಾ ತಂಡ ಹಾಗೂ ನ್ಯಾಯಾಲಯದಿಂದಲೇ ಸತ್ಯಾಸತ್ಯತೆ ಹೊರಬರಬೇಕು. ಈ ಬಗ್ಗೆ ನಮ್ಮ ಪಕ್ಷದ ವರಿಷ್ಠರು ಈಗಾಗಲೇ ಪತ್ರಿಕಾಗೋಷ್ಠಿ ನಡೆಸಿ, ಸರ್ಕಾರಕ್ಕೆ ತಮ್ಮ ಅಭಿಪ್ರಾಯ ಮತ್ತು ಆಗ್ರಹವನ್ನು ತಿಳಿಸಿದ್ದಾರೆ ಎಂದು ಹೇಳಿದರು.
ಅಂತಿಮ ವರದಿ ಬರಲಿ, ಸತ್ಯಾಸತ್ಯತೆ ತಿಳಿಯಲಿ ಅಲ್ಲಿಯವರೆಗೆ ಕ್ಲೀನ್ ಚಿಟ್, ಮುಂದಿನ ಹೋರಾಟದ ಬಗ್ಗೆಯಾಗಲಿ ಮಾತನಾಡಲು ಆಗುವುದಿಲ್ಲ ಎಂದು ಹೇಳಿದರು.
ಪ್ರೂವ್ ಮಾಡಿದರೆ ಕಾಂಗ್ರೆಸ್ ನಿಂದ ಸನ್ಮಾನ:
ಹೋಮ, ಹವನ ಮಾಡುವುದು ಬಿಜೆಪಿಯವರಿಗೆ ಹೊಸದೇನಲ್ಲ. ಹೋಮದಿಂದ ಕೊರೊನಾ ಹೋಗುತ್ತದೆ ಎನ್ನುವುದಾದರೆ ವೈದ್ಯರು, ಆಸ್ಪತ್ರೆ ಏಕೆ ಬೇಕು? ಪೂಜೆ ಹಾಗೂ ಹೋಮದಿಂದ ಕೊರೊನಾ ಹೋಗುತ್ತದೆ ಎಂದರೆ ಮಾಡಲಿ, ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಅದನ್ನು ವೈಜ್ಞಾನಿಕವಾಗಿ ಎಲ್ಲರ ಮುಂದೆ ಪ್ರೂವ್ ಮಾಡಲಿ. ಪ್ರೂವ್ ಮಾಡಿದರೇ ಕಾಂಗ್ರೆಸ್ ನಿಂದ ಅಂತವರಿಗೆ ಸನ್ಮಾನ ಮಾಡಲಾಗುವುದು ಎಂದರು.
7ನೇ ತಾರೀಖಿನ ನಂತರ ಡಿಸಿ ಭೇಟಿ:
ಜಿಲ್ಲೆಯಲ್ಲಿನ ಕೊರೊನಾ ನಿಯಂತ್ರಣ ಹಾಗೂ ಇನ್ನಿತರ ವಿಷಯಗಳ ಕುರಿತು ಕಾಂಗ್ರೆಸ್ ನಿಯೋಗದೊಂದಿಗೆ ಜೂನ್ 7 ನೇ ತಾರೀಖಿನ ನಂತರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲಾಗುವುದು ಎಂದು ತಿಳಿಸಿದರು.
ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ್, ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಅಶೋಕ ಪಟ್ಟಣ, ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಇದ್ದರು.
ಅನಾಥಾಶ್ರಮದಲ್ಲಿ ಕೊರೊನಾ ಸ್ಫೋಟ; 210 ಜನರಲ್ಲಿ ಸೋಂಕು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ