

ಬೆಳಗಾವಿ: ರಾಜ್ಯದಲ್ಲಿ ಈ ಭಾರೀ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಪ್ರಚಾರಕ್ಕಾಗಿ ನೂತನ ವಾಹನ ಸಿದ್ದಪಡಿಸಿದ್ದು, ಈ ವಾಹನ ಬೆಳಗಾವಿ ಜಿಲ್ಲೆಯ 18 ಮತಕ್ಷೇತ್ರದಲ್ಲಿ ಪ್ರಚಾರಕ್ಕಾಗಿ ಬಳಸಲಾಗುವುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದ ಕಾಂಗ್ರೆಸ್ ಭವನದ ಆವರಣದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರು ಸಿದ್ದಪಡಿಸಿದ ನೂತನ ಪ್ರಚಾರದ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ವಾಹನವನ್ನು ಸತೀಶ್ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯಲ್ಲಿ ಪ್ರಚಾರಕ್ಕೆ ಬಳಸಲಿದ್ದಾರೆ. ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಂಕಾ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ನಾನು ಕೂಡ ಈ ವಾಹನವನ್ನು ಬೆಳಗಾವಿಗೆ ಬಂದಗಾ ಪ್ರಚಾರಕ್ಕಾಗಿ ಬಳಸಲಿದ್ದೇನೆ ಎಂದು ತಿಳಿಸಿದರು.
ಕಳೆದ ಚುನಾವಣೆಯಲ್ಲಿ 6 ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಆದರೆ ಈ ಭಾರೀ ಕಾಂಗ್ರೆಸ್ ಪರ ಅಲೆ ಇದೆ. ಹೀಗಾಗಿ ಬೆಳಗಾವಿಯಲ್ಲಿ 15 ಸೀಟು ನಾವು ಗೆಲುವು ಸಾಧಿಸಲಿದ್ದೇವೆ, ಬಿಜೆಪಿ ಮಾಡಿರುವ ಭ್ರಷ್ಟಾಚಾರ, ದುರಾಡಳಿತ, ಜನ ವಿರೋಧಿ ನೀತಿಯಿಂದ ಜನರು ಬೇಸತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಘೋಷಣೆ ಮಾಡಿರುವ ಐದು ಗ್ಯಾರಂಟಿಯಿಂದ ಜನರಿಗೆ ನಂಬಿಕೆ ಬಂದಿದೆ. ಜನರಿಗೆ ಮೊದಲಿನಿಂದಲೂ ಕಾಂಗ್ರೆಸ್ ಪರ ನಂಬಿಕೆ ಇದೆ. ಹಿಂದೆ ನಾವು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ನಾವು ಜನರ ನಂಬಿಕೆ ಉಳಿಸಿಕೊಂಡಿದ್ದೇವು. ನುಡಿದಂತೆ ನಡಿದಿದ್ದೇವೆ. ಮುಂದೆಯೂ ನಡೆಯುತ್ತೇವೆ. ಈ ಬಾರಿ ಕಾಂಗ್ರೆಸ್ ಗೆ ಜನ ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ವಿಷ್ಟುನಾದನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯದರ್ಶಿ ಸುನೀಲ್ ಹಣಮನ್ನವರ್, ಕಾಂಗ್ರೆಸ್ ನಗರ ಅಧ್ಯಕ್ಷ ರಾಜು ಸೇಠ್, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಯುವ ನಾಯಕ ರಾಹುಲ್ ಜಾರಕಿಹೊಳಿ, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ್, ಕೆಪಿಸಿಸಿ ಸದಸ್ಯ ರಾಜೇಂದ್ರ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ.ಜೆ. ಸೇರಿದಂತೆ ಅನೇಕರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ