ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –ಜಾರಕಿಹೊಳಿ ಕುಟುಂಬದ ರಾಜಕೀಯ ಕಲಹ ಮುಂದುವರಿದಿದೆ. ಕುಟುಂಬದ ವಿಷಯ ಬಂದಾಗ ನಾವೆಲ್ಲರೂ ಒಂದೇ. ರಾಜಕೀಯ ವಿಷಯ ಬಂದಾಗ ನಮ್ಮ ನಮ್ಮ ದಾರಿ ನಮಗೆ ಎನ್ನುತ್ತಲೇ ಬಹಿರಂಗವಾಗಿ ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪ ಮಾಡುತ್ತ ಬಂದಿದ್ದಾರೆ.
ಶನಿವಾರ ಬೆಳಗಾವಿಯಲ್ಲಿ ಮಾತನಾಡಿದ ರಮೇಶ ಜಾರಕಿಹೊಳಿ ಮತ್ತೆ ಸತೀಶ್ ಜಾರಕಿಹೊಳಿ ಕುರಿತು ಕಿಡಿಕಾರಿದರು. ಸತೀಶ್ ಜಾರಕಿಹೊಳಿಗೆ ತಲೆ ಸರಿ ಇಲ್ಲ. ಆತ ಧಾರವಾಡಕ್ಕೆ ಹೋಗಿ ಚಿಕಿತ್ಸೆ ಪಡೆದು ಬರಲಿ ಎಂದರು.
ಧಾರವಾಡದ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಅಡ್ಮಿಟ್ ಆಗಿ ಸತೀಶ್ ಚಿಕಿತ್ಸೆ ಪಡೆದುಕೊಳ್ಳಲಿ. ಆತನಿಗೆ ತಲೆ ಸರಿ ಇಲ್ಲ ಎಂದು ರಮೇಶ ಮಾಧ್ಯಮಗಳೆದುರು ಹೇಳಿದರು. ನಾವು ರಾಜಿನಾಮೆ ನೀಡಿದ್ದು ಬಿಜೆಪಿ ಸರಕಾರ ಬರಲಿ ಎಂದಲ್ಲ. ಕುಮಾರಸ್ವಾಮಿ ಸರಕಾರದಲ್ಲಿ ನಮ್ಮನ್ನು ಕಡೆಗಣಿಸಲಾಗಿತ್ತು. ಹಾಗಾಗಿ ರಾಜಿನಾಮೆ ನೀಡಿದ್ದೇವೆ. ನಮ್ಮನ್ನು, ನಮ್ಮ ಕ್ಷೇತ್ರವನ್ನು ಕಡೆಗಣಿಸಲಾಗಿತ್ತು ಎಂದೂ ಅವರು ಹೇಳಿದರು.
ಚುನಾವಣೆಗೆ ನಾವ್ ರೆಡಿ
ಯಾವುದೇ ಕ್ಷಣದಲ್ಲಿ ಉಪಚುನಾವಣೆ ನಡೆದರೂ ನಾವು ಸ್ಪರ್ಧೆ ಮಾಡಲು ಸಿದ್ದರಿದ್ದೇವೆ. ರಮೇಶ್ ಕುಮಾರ ನಮ್ಮ ರಾಜಿನಾಮೆ ಅಂಗೀಕರಿಸದೆ ಅನರ್ಹ ಮಾಡಿದ್ದು ತಪ್ಪು ಎಂದು ಸುಪ್ರಿಂ ಕೋರ್ಟ್ ಗೆ ಹೋಗಿದ್ದೇವೆ. ಯಾವ ಪಕ್ಷ ಸೇರಬೇಕೆಂದು ನಾವು ತೀರ್ಮಾನಿಸಿಲ್ಲ. ಸುಪ್ರಿಂ ಕೋರ್ಟ್ ತೀರ್ಪು ಬಂದನ ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ. ಬಿಜೆಪಿ ಸೇರುತ್ತೇವೆ ಎಂದು ಎಲ್ಲೂ ಹೇಳಿಲ್ಲ ಎಂದು ರಮೇಶ್ ಹೇಳಿದರು.
ಕಾಗವಾಡ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುವುದಿಲ್ಲ. ಕಾಗವಾಡ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ ರಾಜಿನಾಮೆ ನೀಡಿಲ್ಲ. ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದರು. ಅವರನ್ನು ವಿನಾಕಾರಣ ಅನರ್ಹಗೊಳಿಸಲಾಗಿದೆ. ಅದೇ ದಿನ ನಾಗೇಂದ್ರ ಕೂಡ ಆಸ್ಪತ್ರೆ ಸೇರಿದ್ದರು. ಅವರನ್ನು ಬಿಟ್ಟು ಇವರನ್ನು ಮಾತ್ರ ಅನರ್ಹ ಮಾಡಿದ್ದು ಸರಯಲ್ಲ ಎಂದೂ ಅವರು ಹೇಳಿದರು.
ಇದೇ ವೇೆಳೆ ರಮೇಶ್ ಜಾರಕಿಹೊಳಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಜೊತೆಗೆ ಅರ್ಧ ಗಂಟೆಗೂ ಹೆಚ್ಚು ಸಮಯ ಗುಪ್ತವಾಗಿ ಮಾತುಕತೆ ನಡೆಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ