Belagavi NewsBelgaum NewsKannada NewsKarnataka News

ಸವದತ್ತಿ ತಾಲ್ಲೂಕನ್ನು ರಾಜ್ಯದಲ್ಲೇ ಮಾದರಿಯಾಗಿ ಅಭಿವೃದ್ಧಿಪಡಿಸಲಾಗುವುದು – ಸತೀಶ್ ಜಾರಕಿಹೊಳಿ


ಪ್ರಗತಿವಾಹಿನಿ ಸುದ್ದಿ, ಉಗರಗೋಳ: ಸಹಕಾರ ರಂಗದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಸಹಕಾರ ಸಂಘ ಶತಮಾನದ ಅವಧಿ ಯಶಸ್ವಿಯಾಗಿ ಪೂರೈಸಬೇಕಾದರೆ, ಅದರ ಹಿಂದೆ ಸಾಕಷ್ಟು ಜನರ ಶ್ರಮವಿರುತ್ತದೆ. ರಾಮನಗೌಡ ತಿಪರಾಶಿ ನೇತೃತ್ವದಲ್ಲಿ ಈ ಸಂಘವು ಉತ್ತಮವಾಗಿ ಕೆಲಸ ಮಾಡಿ, ಮಾದರಿ ಬ್ಯಾಂಕ್ ಆಗಿ ಹೊರಹೊಮ್ಮಿದೆ. ಜಿಲ್ಲೆಯಲ್ಲಿರುವ ೧೦-೨೦ ಮಾದರಿ ಸಹಕಾರಿ ಸಂಘಗಳಲ್ಲಿ ಇದು ಒಂದಾಗಿದೆ ಎಂದು ಪ್ರಶಂಸಿಸಿದರು.

ಸವದತ್ತಿ ತಾಲ್ಲೂಕನ್ನು ರಾಜ್ಯದಲ್ಲೇ ಮಾದರಿಯಾಗಿ ಅಭಿವೃದ್ಧಿಪಡಿಸಲಾಗುವುದು. ತಾಲ್ಲೂಕು ವ್ಯಾಪ್ತಿಯಲ್ಲಿರುವ ರಾಜ್ಯ ಮುಖ್ಯರಸ್ತೆ, ಜಿಲ್ಲಾಮುಖ್ಯರಸ್ತೆಯನ್ನು ೩ ವರ್ಷದೊಳಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಸುಧಾರಣೆ ಮಾಡಲಾಗುವುದು. ನಮ್ಮ ಇಲಾಖೆಯಿಂದಲೇ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು. ನೂತನ ತಾಲ್ಲೂಕು ಯರಗಟ್ಟಿಯಲ್ಲಿ ಎಲ್ಲ ಇಲಾಖೆಗಳ ಕಚೇರಿಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.

ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಗೋವಿಂದಗೌಡ ತಿಪರಾಶಿಯವರು ಹುಟ್ಟುಹಾಕಿದ ಈ ಸಂಘ ೧೧೪ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಎಲ್ಲರ ವಿಶ್ವಾಸ ಗಳಿಸಿ ಮುನ್ನಡೆಯುತ್ತಿರುವ ಈ ಸಂಘ ಮುಂದಿನ ದಿನಗಳಲ್ಲಿ ಉತ್ತರೋತ್ತರವಾಗಿ ಬೆಳೆಯಲಿ ಎಂದು ಆಶಿಸಿದರು.

ಸಂಘದ ಅಧ್ಯಕ್ಷ ರಾಮನಗೌಡ ತಿಪರಾಶಿ, ೧೯೧೪ರಲ್ಲಿ ಸ್ಥಾಪನೆಯಾದ ಸಂಘ ಈ ಭಾಗದ ಬಡವರು, ರೈತರ ಸಂಕಷ್ಟಕ್ಕೆ ಮಿಡಿದಿದೆ. ಈಗ ವಾರ್ಷಿಕ ೬೮ ಲಕ್ಷ ರೂ. ಲಾಭ ಗಳಿಸುತ್ತಿದೆ. ಅದನ್ನು ವಾರ್ಷಿಕವಾಗಿ ೧ ಕೋಟಿ ರೂ. ಲಾಭ ಗಳಿಸುವ ಮಟ್ಟಕ್ಕೆ ಬೆಳೆಸುವುದೇ ನಮ್ಮ ಗುರಿ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.

ಉಗರಗೋಳದ ರಾಮಾರೂಢ ಮಠದ ಬ್ರಹ್ಮಾರೂಢ ಸ್ವಾಮೀಜಿ, ನಿರ್ವಾಣೇಶ್ವರ ಮಠದ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಆರ್.ವಿ.ಪಾಟೀಲ, ಕಾಂಗ್ರೆಸ್ ಮುಖಂಡರಾದ ಪಂಚನಗೌಡ ದ್ಯಾಮನಗೌಡ್ರ, ಡಾ.ಗಿರೀಶ ಸೋನವಾಲಕರ, ರವೀಂದ್ರ ಯಲಿಗಾರ, ಕೆ.ಕೆ.ಪುಣೇದ, ಸಂಘದ ಉಪಾಧ್ಯಕ್ಷ ರಾಮನಗೌಡ ಪಾಟೀಲ, ಡಿ.ಎಸ್.ಬಡಗಿಗೌಡ್ರ, ಬಸನಗೌಡ ಪಾಟೀಲ, ವಿನಯಕುಮಾರ ದೇಸಾಯಿ, ಸಾಹಿತಿ ರವಿ ಕೋಟಾರಗಸ್ತಿ, ಎಂ.ಬಿ.ಸವದತ್ತಿ, ಮಹಾರಾಜಗೌಡ ಪಾಟೀಲ, ಮಲ್ಲು ಜಕಾತಿ, ನಿರ್ದೇಶಕರು, ಸಿಬ್ಬಂದಿ ಹಾಗೂ ಸವದತ್ತಿ ತಾಲ್ಲೂಕಿನ ವಿವಿಧ ಪಿಕೆಪಿಎಸ್‌ಗಳ ಆಡಳಿತ ಮಂಡಳಿಯವರು ಪಾಲ್ಗೊಂಡಿದ್ದರು.

ಇದೇವೇಳೆ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಖ್ಯಾತ ಹಿನ್ನೆಲೆ ಗಾಯಕಿ ಸಂಗೀತಾ ಕಟ್ಟಿ ಮತ್ತು ಅವರ ಸಂಗಡಿಗರು ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮನ ಗೀತೆಗಳನ್ನು ಹಾಡಿ, ಜನರನ್ನು ಮಂತ್ರಮುಗ್ಧರನ್ನಾಗಿಸಿದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button