ಮತದಾನದ ಗೌಪ್ಯತೆ ಕಾಪಾಡಲು ಮಾಡಿದ ಉಪಾಯಕ್ಕೆ ಮೆಚ್ಚುಗೆ
ಪ್ರಗತಿ ವಾಹಿನಿ ಸುದ್ದಿ ಅಮೃತ್‌ಸರ – ದೇಶದ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಂಜಾಬ್ ಚುನಾವಣೆಯಲ್ಲಿ ಸಯಾಮಿ ಅವಳಿಗಳು ಮತದಾನ ಮಾಡಿದ್ದಾರೆ. ಅಲ್ಲದೇ ದೇಹ ಒಂದೇ ಆದರೂ ಮನಸ್ಸು ಬೇರೆ ಬೇರೆಯಾಗಿರುವ ಕಾರಣ ಇವರಿಬ್ಬರ ನಡುವೆಯೂ ಮತದಾನದ ಗೌಪ್ಯತೆ ಕಾಪಾಡಲಾಗಿದೆ !
ದೇಹದ ಭಾಗಗಳು ಒಂದಕ್ಕೊಂದು ಅಂಟಿಕೊಂಡಿರುವವರನ್ನು ಸಯಾಮಿ ಅವಳಿಗಳು ಎಂದು ಕರೆಯಲಾಗುತ್ತದೆ. ಹತ್ತು ಲಕ್ಷದಲ್ಲಿ ಒಂದು ಇಂಥಹ ಜನನವಾಗುತ್ತದೆ. ಹೆಚ್ಚಿನ ಸಯಾಮಿಗಳು ಬಹಳ ವರ್ಷ ಬದುಕಿದ ಇತಿಹಾಸವಿಲ್ಲ. ಶಸ್ತ್ರ ಚಿಕಿತ್ಸೆಯ ಮೂಲಕ ದೇಹಗಳನ್ನು ಬೇರ್ಪಡಿಸುವ ಪ್ರಯತ್ನ ಕೆಲವೆಡೆ ನಡೆದಿತ್ತಾದರೂ ದೇಹದೊಳಗಿನ ಯಕೃತ್ತು ಕಿಡ್ನಿ ಮೊದಲಾಗಿ ಕೆಲ ಅಂಗಗಳು ಇಬ್ಬರದ್ದೂ ಒಂದೇ ಆಗಿದ್ದರೆ ಇಂಥಹ ಶಸ್ತ್ರ ಚಿಕಿತ್ಸೆಯೂ ಫಲಕಾರಿಯಾಗುವುದು ಅಪರೂಪ.
ಅದೆಲ್ಲಕ್ಕಿಂತ ನೈಸರ್ಗಿಕ ಕ್ರಿಯೆಗಳಿಗೆ, ದಿನ ನಿತ್ಯದ ಜೀವನಕ್ಕೆ ಮತ್ತು ಬೇಕು ಬೇಡಗಳಿಗೆ ಇಬ್ಬರ ದೇಹವೂ ಒಂದೇ ಕಡೆ ತೆರಳಬೇಕಿರುವ ಹಿನ್ನೆಲೆಯಲ್ಲಿ ಇಂಥಹ ಸಯಾಮಿ ಅವಳಿಗಳ ಬದುಕನ್ನು ಸಾಮಾನ್ಯರು ಕಲ್ಪಿಸಿಕೊಳ್ಳುವುದೂ ಕಷ್ಟವಾಗುತ್ತದೆ.
ಆದರೆ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸಯಾಮಿ ಅವಳಿಗಳಾದ ಸೋಹ್ನಾ ಸಿಂಗ್ ಮತ್ತು ಮೋಹ್ನಾ ಸಿಂಗ್ ಸಹೋದರರು ಮತದಾನವನ್ನು ಮಾಡಿ ಅಚ್ಚರಿ ಮೂಡಿಸಿದ್ದಾರೆ. ಅಮೃತ್‌ಸರದ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದ ಇವರು, ದೇಹದ ಸಮಸ್ಯೆ ಏನೇ ಇದ್ದರೂ ಜೀವನೋತ್ಸಾಹದಲ್ಲಿ ಯಾರಿಗೂ ಕಮ್ಮಿ ಇಲ್ಲ ಎಂದು ತೋರಿಸಿದ್ದಾರೆ.
ಅದೆಲ್ಲಕ್ಕಿಂತ ಹೆಚ್ಚಾಗಿ ಆರೋಗ್ಯ ಅಷ್ಟೈಶ್ವರ್ಯ ಉದ್ಯೋಗ ಎಲ್ಲ ಇದ್ದೂ ಪ್ರಜಾ ಪ್ರಭುತ್ವದಲ್ಲಿ ಪ್ರತಿ ಪ್ರಜೆಯ ಕರ್ತವ್ಯವವಾದ ಮತದಾನವನ್ನೇ ಮಾಡದ ಎಷ್ಟೋ ಜನರು ಈ ಸಯಾಮಿ ಅವಳಿಗಳು ಪರೋಕ್ಷವಾಗಿ ಮತದಾನದ ಮಹತ್ವದ ಪಾಠ ಹೇಳಿದ್ದಾರೆ.
ಗೌಪ್ಯತೆಯನ್ನೂ ಕಾಪಾಡಲಾಯಿತು !
ಪ್ರಜಾಪ್ರಭುತ್ವದ ದೇಶವಾದ ಭಾರತದಲ್ಲಿ ಗುಪ್ತ ಮತದಾನ ಪದ್ಧತಿ ಇದೆ. ಮತ ಹಾಕಿದ್ದು ಯಾರಿಗೆ ಎಂಬುದು ಇತರರಿಗೆ ಗೊತ್ತಾಗಬಾರದು, ಗೊತ್ತಾದರೆ ಸಾಮಾಜಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಇದರ ಉದ್ದೇಶ.
ಆದರೆ ಒಂದೇ ದೇಹ ಹೊಂದಿರುವ ಸೋಹ್ನಾ ಸಿಂಗ್ ಮತ್ತು ಮೋಹ್ನಾ ಸಿಂಗ್ ವ್ಯಕ್ತಿಗಳಾಗಿ ಪರಸ್ಪರ ಬೇರೆ, ಹಾಗಾಗಿ ಇವರಲ್ಲಿ ಒಬ್ಬರು ಮತದಾನ ಮಾಡಿದ್ದನ್ನು ಇನ್ನೊಬ್ಬರು ನೋಡದಂತೆ ತಡೆಯುವುದು ಚುನಾವಣಾ ಅಧಿಕಾರಿಗಳಿಗೆ ಸವಾಲಾಗಿತ್ತು. ಇದಕ್ಕೊಂದು ಉಪಾಯ ಕಂಡು ಹಿಡಿದ ಚುನಾವಣಾ ಅಧಿಕಾರಿಗಳು ಒಬ್ಬರು ಮತದಾನ ಮಾಡುವಾಗ ಇನ್ನೊಬ್ಬರ ಕಣ್ಣಿಗೆ ಕಪ್ಪು ಕನ್ನಡಕ ಹಾಕಿದ್ದಾರೆ. ಇದರಿಂದ ಕಡೇ ಪಕ್ಷ ಔಪಚಾರಿಕವಾಗಿಯಾದರೂ ಮತದಾನದ ಗೌಪ್ಯತೆ ಕಾಪಾಡಲ್ಪಟ್ಟಿದೆ. ಈ ವಿದ್ಯಮಾನದ ಮೂಲಕ ಸಯಾಮಿ ಅವಳಿಗಳು ಮತ್ತು ಅವರಿಗೆ ಮತದಾನ ಮಾಡಲು ಸಹಕರಿಸಿದ ಚುನಾವಣಾ ಅಧಿಕಾರಿಗಳು ಭಾರತದ ಪ್ರಭುತ್ವದ ಘನತೆಯನ್ನು ಎತ್ತಿ ಹಿಡಿದಿದ್ದಾರೆ ಎಂಬ ಶ್ಲಾಘನೆ ವ್ಯಕ್ತವಾಗಿದೆ.
ಅಶ್ವಿನಿ ಪುನೀತ್ ರಾಜ್ ಕುಮಾರ್ ಗೆ ಮತ್ತೊಂದು ಆಘಾತ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ