Latest

200ಕ್ಕೂ ಹೆಚ್ಚು ಕಡಲಾಮೆ ಮರಿಗಳ ನಾಶ ?

 

 

ಅನುಮಾನ ಹುಟ್ಟಿಸಿದೆ ಬೂಟುಗಾಲಿನ ಗುರುತು

 

ಪ್ರಗತಿವಾಹಿನಿ ಸುದ್ದಿ ಹೊನ್ನಾವರ – ಇಲ್ಲಿನ ಕಾಸರಕೋಡ ಟೊಂಕದ ಕಡಲತೀರದ ಉದ್ದೇಶಿತ ವಾಣಿಜ್ಯ ಬಂದರು ಪ್ರದೇಶದಲ್ಲಿ ರಿಡ್ಲೆ ಜಾತಿಯ ಕಡಲಾಮೆಯೊಂದು ೫೦ ದಿವಸಗಳ ಹಿಂದೆ ಇಟ್ಟಿರುವ ಸುಮಾರು ೨೫೦ಕ್ಕೂ ಹೆಚ್ಚು ಸಂಖ್ಯೆಯ ಮೊಟ್ಟೆಗಳು ಭಾನುವಾರ ತಡರಾತ್ರಿ ಮರಿಯಾಗಿದ್ದರೂ ಕೇವಲ ಒಂದು ಮರಿ ಮಾತ್ರ ಉಳಿದುಕೊಂಡಿದೆ.

ಉಳಿದ ಕಡಲಾಮೆ ಮರಿಗಳು ಗೂಡಿನ ಸುತ್ತ ಸಂಚರಿಸಿದ ಕುರುಹುಗಳು ಇವೆಯಾದರೂ ಕಡಲಿಗೆ ಸೇರಿಕೊಂಡ ಕುರುಹುಗಳು ಇಲ್ಲದ ಕಾರಣ ಹಲವು ಅನುಮಾನಗಳು ಮೂಡುವಂತಾಗಿದೆ.

ಸಮುದ್ರ ಪರಿಸರದ ದೃಷ್ಟಿಯಿಂದ ಕಡಲಾಮೆಗಳ ಸಂರಕ್ಷಣೆ ಮಾಡುವುದು ಮಹತ್ವದ್ದಾಗಿದೆ. ಆದರೆ ಇಲ್ಲಿನ ಕಾಸರಕೋಡ ಟೊಂಕದ ಕಡಲ ತೀರದಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಉದ್ದೇಶಿಸಿರುವ ಪ್ರದೇಶ ಕಡಲಾಮೆಗಳು ಸಹಸ್ರಾರು ಸಂಖ್ಯೆಯಲ್ಲಿ ಮೊಟ್ಟೆ ಇಡುವ ಪ್ರದೇಶವಾಗಿರುವ ಕಾರಣ ಇಲ್ಲಿ ಬಂದರು ನಿರ್ಮಾಣ ಸಾಗರ ಪರಿಸರಕ್ಕೆ ಧಕ್ಕೆ ತರಲಿದೆ ಎಂದು ಕಡಲ ಜೀವಶಾಸ್ತ್ರಜ್ಞರು ಆರೋಪಿಸುತ್ತಲೇ ಬಂದಿದ್ದಾರೆ.

ಈ ನಡುವೆ  ೫೦ ದಿನಗಳ ಹಿಂದೆ ಕಡಲಾಮೆಯೊಂದು ಉದ್ದೇಶಿತ ಬಂದರು ನಿರ್ಮಾಣ ಸ್ಥಳದಲ್ಲಿ ೨೫೦ ಮೊಟ್ಟೆಗಳನ್ನು ಇಟ್ಟಿತ್ತು. ಆದರೆ ಭಾನುವಾರ ತಡರಾತ್ರಿ ಈ ಎಲ್ಲ ಮೊಟ್ಟೆಗಳು ಮರಿಯಾದರೂ ಕೇವಲ ಒಂದು ಮರಿ ಮಾತ್ರ ಸ್ಥಳೀಯರಿಗೆ ಕಂಡು ಬಂದಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಅದನ್ನು ರಕ್ಷಿಸಿ ಕಡಲಿಗೆ ಬಿಟ್ಟಿದ್ದಾರೆ.

ಬೂಟುಗಾಲಿನ ಗುರುತು

ಉಳಿದ ಕಡಲಾಮೆ ಮರಿಗಳು ಗೂಡಿನ ಸೂತ್ತಲು ಚಲಿಸಿದ ಕುರುಹುಗಳು ಇದೆಯಾದರೂ ಕಡಲಿಗೆ ಚಲಿಸಿರುವ ಯಾವುದೇ ಕುರುಹುಗಳು ಸ್ಥಳದಲ್ಲಿ ಲಭ್ಯವಾಗದೇ ಇರುವದು ಅನುಮಾನಕ್ಕೆ ಕಾರಣವಾಗಿದೆ. ಕಡಲಾಮೆ ಮರಿಗಳು ಗೂಡಿನ ಸುತ್ತ ಓಡಾಡಿದ ಕುರುಹುಗಳು ಕಂಡುಬಂದಿವೆಯಾದರೂ ಅದರ ಮೇಲೆ ಬೂಟುಕಾಲಿನ ಗುರುತುಗಳು ಮೂಡಿರುವದು ಹಲವು ರೀತಿಯ ಸಂಸಯವನ್ನು ಹುಟ್ಟು ಹಾಕಿದೆ. ಕಡಲಾಮೆ ಮರಿಗಳನ್ನು ಯಾರೋ ಉದ್ದೇಶಪೂರ್ವಕವಾಗಿ ನಾಶಮಾಡಿರುವ ಸಾಧ್ಯತೆ ಇದ್ದು ಈ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ವಾಣಿಜ್ಯ ಬಂದರು ವಿರೋಧಿ ಹೋರಾಟ ಸಮಿತಿಯು ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.

ಘಟನೆಯ ಕುರಿತು ಹೋರಾಟ ಸಮಿತಿಯ ಅಧ್ಯಕ್ಷ ರಾಜೇಶ್ ಗೋವಿಂದ ತಾಂಡೇಲ ಪ್ರಕಟಣೆ ನೀಡಿದ್ದು, ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಅರಣ್ಯ ಇಲಾಖೆಯು ಇಲ್ಲಿನ ಕಡಲತೀರದಲ್ಲಿ ಕಡಲಾಮೆಗಳು ಇಟ್ಟಿರುವ ಮೊಟ್ಟೆಗಳನ್ನು ಸಂರಕ್ಷಣೆ ಮಾಡುವ ಕೆಲಸವನ್ನು ಸ್ಥಳೀಯರ ಸಹಕಾರದಿಂದ ನಡೆಸುತ್ತ ಬಂದಿದೆ. ಈ ಒಂದು ತಿಂಗಳ ಅವಧಿಯಲ್ಲಿ ಈ ಭಾಗದಲ್ಲಿ ೧೧ಕ್ಕೂ ಹೆಚ್ಚು ಕಡಲಾಮೆಗಳು ಇಟ್ಟಿರುವ ಸುಮಾರು೨೫೦೦ಕ್ಕೂ ಹೆಚ್ಚು ಮೊಟ್ಟೆಗಳ ಸಂರಕ್ಷಣೆಗೆ ಸ್ಥಳೀಯ ಅರಣ್ಯ ಇಲಾಖೆ ಕ್ರಮ ಕೈಗೊಂಡು ದಾಖಲೀಕರಣಕ್ಕೂ ವ್ಯವಸ್ಥೆ ಮಾಡುತ್ತಬಂದಿದೆ. ರಿಡ್ಲೆ ಜಾತಿಯ ಆಮೆಗಳ ಮೊಟ್ಟೆಗಳು ಇತ್ತೀಚೆಗೆ ಪೋಲೀಸ್ ಬಂದೋಬಸ್ತ್ ನಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲ್ಲೂ ಸಹ ಪತ್ತೆಯಾಗಿದ್ದವು.ಇತ್ತೀಚಿನ ಒಂದು ತಿಂಗಳ ಅವಧಿಯಲ್ಲಿ ಮೂರಕ್ಕೂ ಹೆಚ್ಚು ರಿಡ್ಲೆ ಜಾತಿಯ ಕಡಲಾಮೆಗಳು ರಕ್ತಸಿಕ್ತ ಅವಸ್ಥೆಯಲ್ಲಿ ಇಲ್ಲಿನ ಕಡಲತೀರದಲ್ಲಿ ಸಾವನ್ನಪ್ಪಿದ್ದವು. ಈ ಎಲ್ಲ ಬೆಳವಣಿಗೆಗಳ ನಡುವೆ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ವಾಣಿಜ್ಯ ಬಂದರು ಯೋಜನೆಗಾಗಿ ಸಿಆರ್ ಝೆಡ್ ನಿಯಮಗಳನ್ನು ಉಲ್ಲಂಘಿಸಿ ಇಲ್ಲಿನ ಕಡಲತೀರದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು. ಕಡಲಾಮೆಗಳು ಮೊಟ್ಟೆ ಇಡುವ ಕಡಲತೀರದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಬಂದರು ಒಳನಾಡು ಜಲ ಸಾರಿಗೆ ಇಲಾಖೆ ಮತ್ತು ರಾಜ್ಯಸರಕಾರವನ್ನು ಇತ್ತೀಚೆಗೆ ಆಗ್ರಹ ಪಡಿಸಿದ್ದರು.ಈ ನಡುವೆ ಉದ್ದೇಶಿತ ವಾಣಿಜ್ಯ ಬಂದರು ಯೋಜನಾ ಪ್ರದೇಶದಲ್ಲಿಯೇ ಇದ್ದಕ್ಕಿದ್ದಂತೆ ೨೫೦ಕ್ಕೂ ಹೆಚ್ಚು ಕಡಲಾಮೆ ಮರಿಗಳು ನಾಪತ್ತೆ ಪ್ರಕರಣ ನಡೆದಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ ಎಂದು ರಾಜೇಶ ತಾಂಡೇಲ ಆರೋಪಿಸಿದ್ದಾರೆ.

ಅಪರೂಪದ ರಿಡ್ಲೆ ಕಡಲಾಮೆ ಮೊಟ್ಟೆ ಇಡುವ ದೃಶ್ಯ (ವೀಡಿಯೋ ನೋಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button