Kannada NewsKarnataka NewsLatest

ಹೊಸ ವರ್ಷಾಚರಣೆ ಯೋಜಿಸುವ ಮುನ್ನ ಬೆಳಗಾವಿ ಪೊಲೀಸರ ವಾರ್ನಿಂಗ್ ನೋಡಿ; ಹೊಟೆಲ್ ಮಾಲಿಕರಿಗೂ ಮಾರ್ಗದರ್ಶಿ ಸೂತ್ರ

ಹೊಟೆಲ್ ಮಾಲಿಕರಿಗೂ ಮಾರ್ಗದರ್ಶಿ ಸೂತ್ರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ಹೊಸ ವರ್ಷಾಚರಣೆ ಮಾಡಲು ನೀವು ಯೋಚಿಸುತ್ತಿದ್ದರೆ ಪ್ಲ್ಯಾನ್ ಮಾಡುವ ಮುನ್ನ ಪೊಲೀಸರು ನೀಡಿರುವ ಎಚ್ಚರಿಕೆಯನ್ನೊಮ್ಮೆ ನೋಡಿಬಿಡಿ.

ಹಾಗೆಯೇ, ಹೊಟೆಲ್ ಮಾಲಿಕರೂ ಇದನ್ನೊಮ್ಮೆ ಓದಿಕೊಂಡರೆ ನಿಮಗೆ ವಿಧಿಸಲಾಗಿರುವ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಲು ಅನುಕೂಲವಾಗುತ್ತದೆ.

ಬೆಳಗಾವಿ ಪೊಲೀಸ್ ಉಪಾಯುಕ್ತ ವಿಕ್ರಂ ಅಮಟೆ ಹೊಟೆಲ್ ಮತ್ತು ಸಾರ್ವನಿಕರು ಪಾಲಿಸಬೇಕಾದ ನಿಯಮಗಳ ಕುರಿತು ಮಾಹಿತಿ ನೀಡಿದ್ದಾರೆ.

ಹೊಸ ವರ್ಷಾಚರಣೆಯ ನೆಪದಲ್ಲಿ ಹೊಟೇಲ್, ರೆಸ್ಟೋರೆಂಟ್, ಪಬ್ ಮೊದಲಾದೆಡೆ ಕೋವಿಡ್ ನಿಯಮ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಅಂಥಹ ಹೊಟೇಲ್‌ಗಳ ಲೈಸೆನ್ಸ್ ರದ್ದು ಮಾಡುವ  ಎಚ್ಚರಿಕೆ ನೀಡಿದ್ದಾರೆ.

ಹೊಸ ವರ್ಷಾಚರಣೆಗೆ ವಿಶೇಷ ನಿಯಮಗಳು ಡಿ.೩೦ರಿಂದ ೨೦೨೨ರ ಜನೇವರಿ ೨ರವರೆಗೆ ಜಾರಿಯಲ್ಲಿರುತ್ತದೆ. ನಿಯಮಾವಳಿ ಉಲ್ಲಂಘಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಂಥಹ ಹೊಟೇಲ್‌ನವರ ಲೈಸೆನ್ಸ್ ರದ್ದು ಮಾಡಲು ಕ್ರಮ ಕೈಗೊಳ್ಳುವ ಬಗ್ಗೆಯೂ ಮಹಾನಗರಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.

ಸರಕಾರ ಹೊಸ ವರ್ಷಾಚರಣೆಗೆ ಈಗಾಗಲೇ ರಾಜ್ಯ ಸರಕಾರದಿಂದ ಹೊರಡಿಸಲಾಗಿರುವ ಕೋವಿಡ್ ಮಾರ್ಗದರ್ಶಿ ನಿಯಮಗಳ ಬಗ್ಗೆ ಹೊಟೇಲ್‌ಗಳು, ರೆಸ್ಟೋರೆಂಟ್, ಪಬ್‌ಗಳಿಗೆ ತಿಳುವಳಿಕೆ ನೀಡುವ ಕಾರ್ಯವನ್ನು ಇಲಾಖೆಯಿಂದಈಗಾಗಲೇ ಕೈಗೊಳ್ಳಲಾಗುತ್ತಿದೆ.

ರೆಸ್ಟೋರೆಂಟ್, ಹೊಟೇಲ್‌ಗಳಲ್ಲಿ ಕೆಲಸ ಮಾಡುವವರು ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು ಮತ್ತು ಕಡ್ಡಾಯವಾಗಿ ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು. ಕೋವಿಡ್ ನಿಮಯ ಅನುಷ್ಠಾನಕ್ಕೆ ನಿಯೋಜಿಸಿರುವ ಅಧಿಕಾರಿಗಳು ಹೊಟೇಲ್‌ಗಳಿಗೆ ಬಂದು ಪರಿಶೀಲನೆ ನಡೆಸಿದಾಗ ನಿಯಮ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುತ್ತದೆ.

ಹೊಸ ವರ್ಷಾಚರಣೆಯ ಕೋವಿಡ್ ನಿಯಮಗಳಲ್ಲಿ ಮುಖ್ಯವಾಗಿ ಹೊಟೇಲ್, ರೆಸ್ಟಾರೆಂಟ್‌ಗಳು ತಮ್ಮ ಆಸನ ಸಾಮರ್ಥ್ಯದ ಶೇ.೫೦ರಷ್ಟು ಜನರಿಗೆ ಮಾತ್ರ ಅವಕಾಶ ನೀಡಬಹುದಾಗಿದೆ.

ಹೊಟೇಲ್‌ಗಳಿಗೆ ಬರುವ ಗ್ರಾಹಕರು ಕೋವಿಡ್ ನಿಯಮಗಳಾದ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್‌ನಿಂದ ಕೈ ಸ್ವಚ್ಛಗೊಳಿಸಿಕೊಳ್ಳುವುದನ್ನು ಕಡ್ಡಾಯವಾಗಿ ಪಾಲಿಸುವಂತೆ ನೋಡಿಕೊಳ್ಳುವುದು ಹೊಟೇಲ್‌ನವರ ಹೊಣೆಗಾರಿಕೆಯಾಗಿದೆ.

ಡಿ.೩೦ರಿಂದ ಜ.೨ರ ಒಳಗೆ ನಡೆಯುವ ಮದುವೆ ಮತ್ತಿತರ ಸಮಾರಂಭಗಳಿಗೆ ೩೦೦ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ.

ಸರಕಾರ ಹೊಸ ವರ್ಷಾಚರಣೆ ನಿಮಿತ್ತ ಹೊರಡಿಸಿರುವ ಕೋವಿಡ್ ನಿಯಮಾವಳಿಗಳನ್ನು ಬೆಳಗಾವಿ ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ಜಾರಿಗೆ ತರುತ್ತದೆ, ಬಸ್, ರೈಲ್ವೇ ಮತ್ತು ವಿಮಾನಯಾನ ಸಂಚಾರ ಎಂದಿನಂತಿರುತ್ತದೆ. ಆದರೆ ತುರ್ತು ಅಗತ್ಯಗಳು, ಸೂಕ್ತ ಕಾರಣಗಳಿಲ್ಲದೇ ಅನಗತ್ಯವಾಗಿ ಸಂಚರಿಸುವಂತಿಲ್ಲ ಎಂದರು.

ಇನ್ನು ಮಹಾರಾಷ್ಟ್ರದ ಗಡಿ ದಾಟಿ ಜಿಲ್ಲೆಗೆ ಬರುವವರು ಸಹ ಕಡ್ಡಾಯವಾಗಿ ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದಿದ್ದು ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು ಎಂದರು.

ನೈಟ್ ಕರ್ಫ್ಯೂ ಉಲ್ಲಂಘಿಸಿದರೆ ಎಫ್ ಐಆರ್ ದಾಖಲು

ಹೊಸ ವರ್ಷಾಚರಣೆ- ಕ್ರಿಸ್ ಮಸ್ ಹಬ್ಬಕ್ಕೆ ಹೊಸ ಮಾರ್ಗಸೂಚಿ ಪ್ರಕಟ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button