
*ಕೆಎಫ್‍ಡಿ ಬಾಧಿತ ಪ್ರದೇಶದಲ್ಲಿ ಜ್ವರ ಪ್ರಕರಣಗಳಿಗೆ ಶೀಘ್ರ ಚಿಕಿತ್ಸೆ ಪಡೆಯಲು ಸಚಿವರ ಮನವಿ*
ಪ್ರಗತಿವಾಹಿನಿ ಸುದ್ದಿ, ಶಿವಮೊಗ್ಗ : ಮಂಗನ ಕಾಯಿಲೆ ಬಾಧಿತ ಪ್ರದೇಶದ ಜನರು ಜ್ವರದಂತಹ ಪ್ರಕರಣಗಳನ್ನು ನಿರ್ಲಕ್ಷ್ಯ ಮಾಡದೇ, ಶೀಘ್ರವಾಗಿ ಚಿಕಿತ್ಸೆ ಪಡೆಯಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ತಿಳಿಸಿದರು.
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಂಗನ ಕಾಯಿಲೆ (ಕೆಎಫ್‍ಡಿ) ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಂಗನ ಕಾಯಿಲೆ ಬಗ್ಗೆ ಗಾಬರಿಯಾಗುವುದು ಬೇಡ. ಆದರೆ ಜ್ವರ, ತಲೆನೋವು, ಸ್ನಾಯುಗಳ ನೋವು ಇತ್ಯಾದಿ ಲಕ್ಷಣ ಕಾಣಿಸಿಕೊಂಡಾಗ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಆರಂಭದಲ್ಲೇ ರೋಗ ಲಕ್ಷಣಗಳಿಗೆ ಚಿಕಿತ್ಸೆ ಪಡೆದಲ್ಲಿ ಸಂಪೂರ್ಣ ಗುಣಮುಖರಾಗಲು ಸಾಧ್ಯ ಎಂದರು.
1960 ರಿಂದ ಕೆಎಫ್‍ಡಿ ಮಲೆನಾಡಿನ ಸಾಗರ, ಹೊಸನಗರ ತೀರ್ಥಹಳ್ಳಿ ಹಾಗೂ ಘಟ್ಟದ ಭಾಗದಲ್ಲಿ ಇದೆ. ಯಾವುದೇ ಸಾವು ನೋವು ಸಂಭವಿಸಬಾರದು. ಆ ರೀತಿ ಕ್ರಮ ವಹಿಸಲು ಸೂಚಿಸಿದ್ದೇನೆ. ಹಾಗೂ ಕೆಎಫ್‍ಡಿ ಶಾಶ್ವತ ಪರಿಹಾರ ಹಾಗೂ ಲಸಿಕೆ ಬಗ್ಗೆ ಚರ್ಚಿಸಲು ಏಪ್ರಿಲ್ 13 ಮತ್ತು 14 ರಂದು ಅಧಿಕಾರಿಗಳು, ತಜ್ಞರ ತಂಡ ಹಾಗೂ ಶಾಸಕರು, ಆರೋಗ್ಯ ಸಚಿವರೊಂದಿಗೆ ಎರಡು ಹಂತದ ಸಭೆಯನ್ನು ನಡೆಸಲಾಗುವುದು ಎಂದರು.
ಇದುವರೆಗೆ ಕೆಎಫ್‍ಡಿಯಿಂದ ಮರಣ ಹೊಂದಿದವರಿಗೆ ಯಾವುದೇ ರೀತಿಯ ಸಹಾಯ/ಪರಿಹಾರ ಇರುವುದಿಲ್ಲ. ಫೆ.12 ರಿಂದ ಆರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ಪರಿಹಾರ ನೀಡುವ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.
ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡಿ, ರಾಜ್ಯದಲ್ಲಿ 70 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲೆ 25 ಪಾಸಿಟಿವ್ ಪ್ರಕರಣಗಳಿವೆ. 1 ಸಾವು ಸಂಭವಿಸಿದೆ. ಕೆಎಫ್‍ಡಿ ನಿಯಂತ್ರಣಕ್ಕೆ ಅಗತ್ಯವಾದ ಎಲ್ಲ ರೀತಿಯ ಕ್ರಮಗಳನ್ನು ಇತರೆ ಇಲಾಖೆಗಳ ಸಮನ್ವಯದೊಂದಿಗೆ ಕೈಗೊಳ್ಳಲಾಗುತ್ತಿದೆ. ಹಾಗೂ ಎಬಿಎಆರ್ ಕೆ ಅಡಿಯಲ್ಲಿ ಎಂಪಾನೆಲ್ ಆದ ಖಾಸಗಿ ಆಸ್ಪತ್ರೆಯಲ್ಲಿ ಕೆಎಫ್‍ಡಿ ಬಾಧಿತರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಹೆಲ್ಪಲೈನ್‍ಗೆ ಕರೆ ಮಾಡಿ:
ಬಾಧಿತ ಪ್ರದೇಶದಲ್ಲಿ ಜನರಿಗೆ ಜ್ವರ ಇತರೆ ಲಕ್ಷಣಗಳು ಕಂಡುಬಂದಲ್ಲಿ ಶೀಘ್ರವಾಗಿ ಆಸ್ಪತ್ರೆಗೆ ಹೋಗಬೇಕು. ಹಾಗೂ ಹೆಚ್ಚಿನ ಸಹಾಯ ಅಗತ್ಯವಿದ್ದಲ್ಲಿ ಡಿಹೆಚ್‍ಓ ಹೆಲ್ಪ್‍ಲೈನ್ ಸಂಖ್ಯೆಗೆ 08182-222382 ಕರೆ ಮಾಡಿ ಆಂಬುಲೆನ್ಸ್, ಚಿಕಿತ್ಸೆ ಸೇರಿದಂತೆ ಅಗತ್ಯ ಸೇವೆ ಪಡೆಯಬಹುದು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಕೇವಲ ಆರೋಗ್ಯ ಇಲಾಖೆ ಮಾತ್ರವಲ್ಲ, ಪಶುಪಾಲನಾ ಇಲಾಖೆ, ಅರಣ್ಯ, ಗ್ರಾಮೀಣಾಭಿವೃದ್ದಿ, ಕಂದಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಕ್ಷಣ ಇಲಾಖೆಗಳು ಸಮನ್ವಯದೊಂದಿಗೆ ಕೆಎಫ್‍ಡಿ ನಿಯಂತ್ರಣದಲ್ಲಿ ಸಕ್ರಿಯವಾಗಿ ಕಾರ್ಯನಿರತರಾಗಬೇಕು. ತಮ್ಮ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕೆಂದರು.
ಸಭೆಯಲ್ಲಿ ಶಾಸಕರಾದ ಆರಗ ಜ್ಞಾನೇಂದ್ರ, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ವಿಡಿಎಲ್ ಅಧಿಕಾರಿ ಡಾ.ಹರ್ಷವರ್ಧನ್, ತಾಲ್ಲೂಕು ವೈದ್ಯಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ