Belagavi NewsBelgaum NewsKarnataka News

*ಹಿರಿಯ ಕಲಾವಿದೆ ಯಮುನಾಬಾಯಿ ಕಲಾಚಂದ್ರ‌ ಅವರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ ಪ್ರದಾನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಾನಪದ ಸಣ್ಣಾಟ ಕ್ಷೇತ್ರದಲ್ಲಿ ಅನುಪಮ‌ ಸೇವೆಯನ್ನು ಸಲ್ಲಿಸಿರುವ ಚಿಕ್ಕೋಡಿ ತಾಲ್ಲೂಕಿನ ಧುಳಗನವಾಡಿ ಗ್ರಾಮದ ಯಮುನಾಬಾಯಿ ಲಕ್ಷ್ಮಣ ಕಲಾಚಂದ್ರ ಅವರಿಗೆ ರಾಜ್ಯ ಸರಕಾರವು 2024 ನೇ ಸಾಲಿನ “ಕರ್ನಾಟಕ ಸಂಭ್ರಮ-50 ಸುವರ್ಣ ಮಹೋತ್ಸವ ಪ್ರಶಸ್ತಿ” ಯನ್ನು ನೀಡಿ ಗೌರವಿಸಿದೆ.

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು, ಶುಕ್ರವಾರ(ಜ.3) ಯಮುನಾಬಾಯಿ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಜಾನಪದ ಕಲಾಕ್ಷೇತ್ರದಲ್ಲಿ ಅನುಪಮ‌ ಸೇವೆಯನ್ನು ಶ್ಲಾಘಿಸಿದ ಸಚಿವರು, ಇವರ ಸೇವೆಯನ್ನು ಗುರುತಿಸಿ ಸರಕಾರವು ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ನೀಡಿದೆ ಎಂದು ಹೇಳಿದರು.

ಅನಿವಾರ್ಯ ಕಾರಣಗಳಿಂದ ನವೆಂಬರ್ 1 ರಂದು ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ‌ ಸಮಾರಂಭದಲ್ಲಿ ಯಮುನಾಬಾಯಿ ಅವರು ಪಾಲ್ಗೊಂಡಿರಲಿಲ್ಲ. ಆದ್ದರಿಂದ ಸಚಿವರು ಇಂದು ಪ್ರಶಸ್ತಿ ಪ್ರದಾನ‌ ಮಾಡಿದರು. ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೂ ಆಗಿರುವ 87 ವರ್ಷದ ಯಮುನಾಬಾಯಿ ಕಲಾಚಂದ್ರ‌ ಅವರು, ಜಾನಪದ ಸಣ್ಣಾಟ ಕಲಾವಿದರಾಗಿದ್ದಾರೆ. ಸಂಗ್ಯಾಬಾಳ್ಯಾ, ರಾಧಾನಾಟಕ ಸಣ್ಣಾಟದಲ್ಲಿ ಸ್ತ್ರೀಪಾತ್ರ, ಭಜನಾಪದ, ಸಂಪ್ರದಾಯ ಪದ ಹಾಡುಗಾರಿಕೆಯಲ್ಲಿ ಮೂರು ದಶಕಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 20 ಅಧಿಕ‌ ಕಲಾತಂಡಗಳಿಗೆ ಸಣ್ಣಾಟ ತರಬೇತಿಯನ್ನು ನೀಡಿರುವ ಇವರು, ಕರ್ನಾಟಕ‌ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಜಾನಪದ‌ ಉತ್ಸವಗಳಲ್ಲಿ ಕಲಾಪ್ರದರ್ಶನ ನೀಡಿರುತ್ತಾರೆ.

2015-16 ನೇ ಸಾಲಿನ ಕರ್ನಾಟಕ ಯಕ್ಷಗಾನ-ಬಯಲಾಟ ಅಕಾಡೆಮಿ ಪ್ರಶಸ್ತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಿಂದ ಗಡಿನಾಡು ಕಲಾರತ್ನ, ಸಣ್ಣಾಟ ರತ್ನ, ದಿ.ಬಾಳಪ್ಪ ಹುಕ್ಕೇರಿ ಪ್ರಶಸ್ತಿ, ಮಾಮವ ಪ್ರಶಸ್ತಿ, ಕನ್ನಡ ಕಲಾಶ್ರೀ ಪ್ರಶಸ್ತಿಗಳನ್ನು ಯಮುನಾಬಾಯಿ ಕಲಾಚಂದ್ರ‌ ಅವರು ಪಡೆದುಕೊಂಡಿರುತ್ತಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ‌ ನಿರ್ದೇಶಕರಾದ ಕೆ.ಎಚ್.ಚನ್ನೂರ, ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಕಲಾವಿದರಾದ ಭರತ್ ಕಲಾಚಂದ್ರ‌, ಮಾರುತಿ ಕಾಮಗೌಡ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button