ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಸೋಮವಾರದಿಂದ ಹತ್ತು ದಿನಗಳ ಕಾಲ ವಿಧಾನಮಂಡಲದ ಅಧಿವೇಶನ ನಡೆಯಲಿದ್ದು , ಸದನ ಕಲಾಪಗಳ ಸಂದರ್ಭದಲ್ಲಿ ಸಚಿವರು ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಸೂಚನೆ ನೀಡುವಂತೆ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಕೋರಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಧಾನ ಮಂಡಲದ ಅಧಿವೇಶನ ಬಹು ಮುಖ್ಯವಾಗಿದ್ದು ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಹಾಗೂ ಸರ‍್ವಜನಿಕರ ಸಂಕಷ್ಟಗಳ ಕುರಿತು ರ‍್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಅಧಿವೇಶನ ಸೂಕ್ತ ವೇದಿಕೆಯಾಗಿದೆ. ಹೀಗಾಗಿ ಶಾಸನ ಸಭೆಯ ಕಲಾಪಗಳು ನಡೆಯುವಾಗ ಸಚಿವರು ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಸೂಚನೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಸಭಾಪತಿ ಕೋರಿದ್ದಾರೆ.
ಈ ಹಿಂದೆ ನಡೆದಿರುವ ಅಧಿವೇಶನಗಳ ಸಂರ‍್ಭದಲ್ಲಿ ಹಲವು ಸಚಿವರು,
ತಮ್ಮ ಕ್ಷೇತ್ರಕ್ಕೆ ಸಂಬಂಧಿತ ಕರ‍್ಯಗಳ ಕಾರಣದ ಮೇಲೆ ಸದನಕ್ಕೆ ಗೈರುಹಾಜರಾಗುವ ಕುರಿತು ಅನುಮತಿ ಕೋರುತ್ತಿದ್ದುದ್ದು ಸರ‍್ವೇಸಾಮಾನ್ಯವಾಗಿದೆ. ಸದಸ್ಯರು ಸಾರ‍್ವಜನಿಕ ಮಹತ್ವದ ವಿಚಾರಗಳ ಬಗ್ಗೆ ಸದನದಲ್ಲಿ ಕೇಳುವ ಪ್ರಶ್ನೆಗಳಿಗೆ ಸಂಬಂಧಿತ ಸಚಿವರು ಉತ್ತರ ನೀಡಬೇಕಾಗಿರುವುದು ಅವರ ಕರ‍್ತವ್ಯ ಹಾಗೂ ಜವಾಬ್ದಾರಿ ಆದರೆ ಚರ‍್ಚೆಯ ವೇಳೆ ಸಚಿವರು ಸದನದಲ್ಲಿ ಇಲ್ಲದೇ ಇರುವುದರಿಂದ ಸಂಬಂಧಪಟ್ಟ ಪ್ರಶ್ನೆಗೆ ಸಮರ‍್ಪಕ ಉತ್ತರ ದೊರೆಯದೇ ಸಮಸ್ಯೆಗೆ ಸೂಕ್ತ ಪರಿಹಾರ ಸಿಗುವುದಿಲ್ಲ. ಸಚಿವರ ಗೈರಿನಿಂದಾಗಿ ಕಲಾಪ ನಡೆಸುವ ಉದ್ದೇಶ ಸಾಫಲ್ಯಗೊಳ್ಳುವುದಿಲ್ಲ ಎಂದು ಸಭಾಪತಿ ಅಭಿಪ್ರಾಯಪಟ್ಟಿದ್ದಾರೆ.
ಸಚಿವರ ಅನುಪಸ್ಥಿತಿಯು , ಆಡಳಿತಾರೂಢ ಸರಕಾರದಿಂದ ಉತ್ತರ ಪಡೆಯುವ ಸದಸ್ಯರ ಹಕ್ಕು ಮತ್ತು ಅವಕಾಶವನ್ನು ವಂಚಿಸಿದಂತಾಗುತ್ತದೆ, ಕಾರಣ ಸಚಿವರು ಸದನದಲ್ಲಿ ಹಾಜರಿರುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹಪೂರ‍್ವಕವಾಗಿ ಕೋರಿದ್ದಾರೆ.
ಮಂತ್ರಿಮಂಡಲದ ಎಲ್ಲಾ ಸದಸ್ಯರು ಸಹ ಸ್ಯಯಂಪ್ರೇರಿತರಾಗಿ ಕಡ್ಡಾಯವಾಗಿ ಸದನದ ಕಾರ‍್ಯ ಕಲಾಪಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಜವಾಬ್ದಾರಿ ನರ‍್ವಹಿಸುವಂತೆ ಸೂಚಿಸಿರುವ ಸಭಾಪತಿ ಬಸವರಾಜ ಹೊರಟ್ಟಿ, ಅಧಿವೇಶನದ ವೇಳೆ ತಮ್ಮ ಕ್ಷೇತ್ರಗಳ ಕಾರ‍್ಯಕ್ರಮಗಳನ್ನು ಉಲ್ಲೇಖಿಸಿ ಸದನ ಕಲಾಪದಿಂದ ವಿನಾಯಿತಿ ಕೋರಿ ಮನವಿ ಸಲ್ಲಿಸದಂತೆ ಎಲ್ಲಾ ಸಚಿವರಿಗೆ ತಿಳಿಸಿದ್ದಾರೆ.
ಅಧಿವೇಶನದ ಯಶಸ್ವಿಯಲ್ಲಿ ಕೇವಲ ಸಚಿವರ ಹಾಗೂ ಶಾಸಕರುಗಳ ಪಾತ್ರವಿರದೇ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಪಾಲ್ಗೊಳ್ಳುವಿಕೆಯೂ ಅಷ್ಟೇ ಪ್ರಮುಖವಾಗಿದೆ. ಹೀಗಾಗಿ
ಚರ‍್ಚೆಯ ವೇಳೆ ಸದನದಲ್ಲಿ ಅಧಿಕಾರಿಗಳ ಉಪಸ್ಥಿತಿ ಕುರಿತು ಮುಖ್ಯಕಾರ‍್ಯದರ‍್ಶಿಗಳು ಗಮನಹರಿಸಬೇಕೆಂದು ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದ್ದಾರೆ.
ವಿಧಾನ ಪರಿಷತ್ತಿನ ಅಧಿವೇಶನದ ಕಲಾಪದಲ್ಲಿ ಆಯಾ ದಿನದಲ್ಲಿ ಹಾಜರಾಗುವ ಸಚಿವರ ಹಾಗೂ ಅಧಿಕಾರಿಗಳ ಹೆಸರನ್ನು ಆಯಾ ದಿನದ ಸದನ ಆರಂಭಗೊಳ್ಳುವಾಗಲೇ ಪ್ರಕಟಿಸಲಾಗುವುದು ಹಾಗೂ ಗೈರು ಹಾಜರಾದವರ ಮಾಹಿತಿಯನ್ನು ಸಂಬಂಧಿಸಿದವರಿಗೆ ಕಳುಹಿಸಿ ಕ್ರಮಕ್ಕೆ ಸೂಚಿಸಲಾಗುವುದೆಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಈ ಅಧಿವೇಶನ ಬಸವರಾಜ ಬೊಮ್ಮಾಯಿ ಸರಕಾರಕ್ಕೆ ಮೊದಲ ಅಧಿವೇಶನವಾಗಿದೆ. ಪ್ರವಾಹ ಪರಿಹಾರ, ಕೊರೋನಾ, ಪಾಲಿಕೆ ಚುನಾವಣೆ, ಬೆಲೆ ಏರಿಕೆ ಸೇರಿದಂತೆ ಹಲವಾರು ವಿಷಯಗಳ ಮೇಲೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ