Kannada NewsKarnataka NewsNationalPolitics

*ಗೈರುಹಾಜರಿ ಮುಷ್ಕರ ಆರಂಭಿಸುವ ಎಚ್ಚರಿಕೆ ನೀಡಿದ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ*

ಪ್ರಗತಿವಾಹಿನಿ ಸುದ್ದಿ: ಜುಲೈ ಕೊನೆಯ ವಾರದೊಳಗೆ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಗೈರುಹಾಜರಿ ಮುಷ್ಕರ ಆರಂಭಿಸುತ್ತೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌ ಷಡಕ್ಷರಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯೋಗವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಶಿಫಾರಸ್ಸು ವರದಿಯಲ್ಲಿನ ಫಿಟ್‌ಮೆಂಟ್ ಸೌಲಭ್ಯವನ್ನು ಜಾರಿ ಮಾಡಬೇಕು, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಮರುಚಾಲನೆ ನೀಡಬೇಕು. ನೌಕರರ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈ ಕೂಡಲೇ ಅನುಷ್ಠಾನಕ್ಕೆ ತರುವಂತೆ ಆಗ್ರಹಿಸಿದ್ದಾರೆ.‌

ರಾಜ್ಯ 7ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿ ಆದೇಶ ಹೊರಡಿಸಬೇಕು. ಎನ್‌ಪಿಎಸ್ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದೆ. ಅದೇ ರೀತಿ ಈ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಹೋರಾಟದ ಮೊದಲ ಹಂತವಾಗಿ ಜುಲೈ 14ರವರೆಗೆ ಶಾಸಕರು, ಸಚಿವರು, ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್‌ಗೆ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳ ಕುರಿತು ಆಯಾ ತಾಲೂಕು, ಜಿಲ್ಲಾ ಶಾಖೆಗಳು ನೌಕರರು ಪದಾಧಿಕಾರಿಗಳು, ವೃಂದ ಸಂಘಗಳೊಂದಿಗೆ ಮನವಿ ಪತ್ರ ಸಲ್ಲಿಸುತ್ತೇವೆ ಎಂದಿದ್ದಾರೆ

ಎರಡನೇ ಹಂತವಾಗಿ ಜುಲೈ 3ನೇ ವಾರದಲ್ಲಿ ರಾಜ್ಯ ಕಾರ್ಯಕಾರಿ ಹಾಗೂ ಎಲ್ಲಾ ಇಲಾಖೆಗಳ ವೃಂದ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳ ಸಭೆಯನ್ನು ಕರೆದು ಹೋರಾಟದ ಅಂತಿಮ ನಿರ್ಣಯ ಕೈಗೊಳ್ಳಲಾಗುತ್ತದೆ. ಜುಲೈ 28ರೊಳಗೆ ಸಂಘದ ಪ್ರಮುಖ 3 ಬೇಡಿಕೆಗಳನ್ನು ಸರ್ಕಾರ ಈಡೇರಿಸದೇ ಇದ್ದಲ್ಲಿ ಅನಿವಾರ್ಯವಾಗಿ ಮೂರನೇ ಹಂತವಾಗಿ ಜುಲೈ ಕೊನೆಯ ವಾರದಿಂದ ಅನಿರ್ದಿಷ್ಟಾವಧಿ ಕರ್ತವ್ಯಕ್ಕೆ ಗೈರುಹಾಜರಾಗುವ ಮೂಲಕ ಹೋರಾಟ ನಡೆಸಲಾಗುತ್ತದೆ ಎಂದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button