ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಇಲ್ಲಿಯ ಜಿಲ್ಲಾ ಆಸ್ಪತ್ರೆಗೆ ಹಠಾತ್ ಭೇಟಿ ನೀಡಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ಅಲ್ಲಿನ ಅವ್ಯವಸ್ಥೆಗಳ ನಿಜದರ್ಶನ ಪಡೆದರು.
ಬೆಳಗ್ಗೆ ಆಸ್ಪತ್ರೆಗೆ ತೆರಳಿ ಪ್ರತಿಯೊಂದು ವಿಭಾಗಗಳನ್ನು ಪರಿಶೀಲಿಸಿದ ಶಂಕರಗೌಡ, ಸ್ವಚ್ಛತೆ ಇಲ್ಲದಿರುವುದು, ರೋಗಿಗಳಿಗೆ ಕುಳಿತುಕೊಳ್ಳಲು ಸ್ಥಳೀವಕಾಶವಿರದಿರುವುದು, ಗರ್ಭಿಣಿಯರು 2-3 ಗಂಟೆ ಸಾಲು ಹಚ್ಚಿ ನಿಂತುಕೊಳ್ಳಬೇಕಾದ ಪರಿಸ್ಥಿತಿ, ಸರಕಾರ ಒದಗಿಸಿರುವ ಯಂತ್ರಗಳನ್ನು ಬಳಸದಿರುವುದು ಮೊದಲಾದ ಅವ್ಯವಸ್ಥೆಗಳನ್ನು ಕಂಡು ಕೆಂಡಾಮಂಡಲರಾದರು.
ರೋಗಿಗಳನ್ನು ಮಾತನಾಡಿಸಿ ಸೌಲಭ್ಯಗಳು ಮತ್ತು ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಪ್ರತಿಯೊಂದು ವಾರ್ಡ್ ಪರಿಶೀಲಿಸಿ ಅಲ್ಲಿನ ಸಿಬ್ಬಂದಿಯನ್ನು ಪ್ರಶ್ನಿಸಿದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಕಳಸದ ಅವರಿಗೆ ಫೋನ್ ಮಾಡಿ ತರಾಟೆಗೆ ತೆಗೆದುಕೊಂಡರು. ಇಂತಹ ಆಸ್ಪತ್ರೆಗೆ ರೋಗಿಗಳು ಹೇಗೆ ಬರಬೇಕು? ಸರಕಾರ ನೀಡುವ ಸೌಲಭ್ಯಗಳನ್ನು ಜನರಿಗೆ ತಲುಪಿಸಲು ಏನು ಸಮಸ್ಯೆ ಎಂದು ಪ್ರಶ್ನಿಸಿದರು.
ರೋಗಿಗಳಿಗೆ ನೀಡುವ ಆಹಾರದ ಗುಣಮಟ್ಟದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಶಂಕರಗೌಡ ಪಾಟೀಲ, ಶೌಚಾಲಯಗಳಿಗೆ ಬೇಟಿ ನೀಡಿ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮೇಯರ್ ವಿಜಯ ಮೋರೆ ಹಾಗೂ ಕಾರ್ಯಕರ್ತರು ಶಂಕರಗೌಡ ಪಾಟೀಲ ಅವರಿಗೆ ಸಾಥ್ ನೀಡಿದರು. ಆಸ್ಪತ್ರೆಯಲ್ಲಿ ಮಹಿಳೆಯರು ನೆಲದ ಮೇಲೆ ಮಲಗುತ್ತಾರೆ. ಕುಡಿಯಲು ನೀರಿನ ವ್ಯವಸ್ಥೆ ಇಲ್ಲ. ಸರಕಾರ ನೀಡಿರುವ ಎಂಆರ್ ಐ ಮಶಿನ್ ನ್ನು ಇನ್ನೂ ಬಳಕೆ ಮಾಡುತ್ತಿಲ್ಲ ಎಂದು ವಿಜಯ ಮೋರೆ ಮಾಹಿತಿ ನೀಡಿದರು.
ಇದೇ ಅವ್ಯವಸ್ಥೆ ಮುಂದುವರಿದರೆ ಸಹಿಸಲು ಸಾಧ್ಯವಿಲ್ಲ. ತಕ್ಷಣ ಆಸ್ಪತ್ರೆಯ ಆರೋಗ್ಯ ಸುಧಾರಿಸಬೇಕು ಎಂದು ಳಶಂಕರಗೌಡ ಪಾಟೀಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ