Latest

ಸತತ ಐದನೇ ವರ್ಷವೂ ಶಾಂತಿನಿಕೇತನ ಶಾಲೆಗೆ ಶೇ.100 ಫಲಿತಾಂಶ

ಪ್ರಗತಿವಾಹಿನಿ ಸುದ್ದಿ, ಖಾನಾಪುರ:
ಪಟ್ಟಣದ ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮೀ ಗ್ರುಪ್ ಶಿಕ್ಷಣ ಸಂಸ್ಥೆಯ
ಶಾಂತಿನಿಕೇತನ ಪಬ್ಲಿಕ್ ಶಾಲೆಯ 10ನೇ ತರಗತಿಯ ಫಲಿತಾಂಶ ಈಚೆಗೆ ಪ್ರಕಟಗೊಂಡಿದ್ದು,
ಶಾಲೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಸತತ ಐದನೇ ವರ್ಷವೂ ಶಾಲೆಗೆ ನೂರಕ್ಕೆ
ನೂರರಷ್ಟು ಫಲಿತಾಂಶ ಲಭಿಸಿದೆ ಎಂದು ಶಾಲೆಯ ಸಂಸ್ಥಾಪಕ ವಿಠ್ಠಲ ಹಲಗೇಕರ ಹೇಳಿದರು.
ಶಾಲೆಯ ಸಭಾಗೃಹದಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ
ಅವರು, ಈ ವರ್ಷ ಶಾಲೆಯ ಒಟ್ಟು 69 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದು,
ಎಲ್ಲ ವಿದ್ಯಾರ್ಥಿಗಳೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಶಾಲೆಯ ನೂರಕ್ಕೆ
ನೂರರಷ್ಟು ಫಲಿತಾಂಶದ ಪರ್ವವನ್ನು ಮುಂದುವರೆಸಿದ್ದಾರೆ. ಶ್ರೇಯಾ ಪಾಟೀಲ 9.58
ಸಿಪಿಜಿಎ ಅಂಕದೊಂದಿಗೆ ಪ್ರಥಮ, ನಿಸರ್ಗಾ ಗಡಾದ 9.8 ಸಿಜಿಪಿಎ ಅಂಕಗಳೊಂದಿಗೆ
ದ್ವಿತೀಯ, ಧನಂಜಯ ಬೆಳಗಾಂವಕರ 9.16 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ.
ಪರೀಕ್ಷೆ ಎದುರಿಸಿದ್ದ 69 ವಿದ್ಯಾರ್ಥಿಗಳ ಪೈಕಿ 9ಕ್ಕೂ ಹೆಚ್ಚು ಸಿಜಿಪಿಎ ಅಂಕಗಳನ್ನು
6 ವಿದ್ಯಾರ್ಥಿಗಳು ಮತ್ತು 8ಕ್ಕೂ ಹೆಚ್ಚು ಸಿಜಿಪಿಎ ಅಂಕಗಳನ್ನು 20 ವಿದ್ಯಾರ್ಥಿಗಳು
ಪಡೆದು ವಿಶೇಷ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 43 ವಿದ್ಯಾರ್ಥಿಗಳು ಪ್ರಥಮ
ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಶಾಂತಿನಿಕೇತನ ಶಾಲೆಯಲ್ಲಿ ನರ್ಸರಿಯಿಂದ ದ್ವಿತೀಯ ಪಿಯು ವರೆಗೆ ತರಗತಿಗಳು
ನಡೆಯುತ್ತಿದ್ದು, ಪ್ರಸ್ತುತ 1500 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇವರಲ್ಲಿ
ಬಹುತೇಕ ಮಕ್ಕಳು ಭಾರತೀಯ ಸೈನ್ಯದಲ್ಲಿ ಸೇವೆಯಲ್ಲಿರುವ ಸೈನಿಕರ ಮತ್ತು ಗ್ರಾಮೀಣ ಭಾಗದ
ರೈತರ ಮಕ್ಕಳಾಗಿರುವುದು ವಿಶೇಷ. ಶಾಲೆಯಲ್ಲಿ ಮಕ್ಕಳಿಗೆ ಪಠ್ಯ, ಪಠ್ಯೇತರ, ಕ್ರೀಡೆ
ಮತ್ತು ಸಾಂಸ್ಕೃತಿಕ ಚಟುವಟಿಕೆಗಳು, ಸೈನ್ಸ್ ಮತ್ತು ಕಂಪ್ಯೂಟರ್ ಲ್ಯಾಬ್, ಸುಸಜ್ಜಿತ
ವಾಚನಾಲಯ ಮತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತಿದೆ. ನುರಿತ ಶಿಕ್ಷಕರ ಸಹಯೋಗದಲ್ಲಿ
ಮಕ್ಕಳ ಸರ್ವಾಂಗೀಣ ವಿಕಸನಕ್ಕೆ ವಿಶೇಷ ಗಮನ ಹರಿಸಲಾಗುತ್ತದೆ. ಇದರ ಪರಿಣಾಮ ವರ್ಷದಿಂದ
ವರ್ಷಕ್ಕೆ ಶಾಲೆಯ ಫಲಿತಾಂಶ ಅಗ್ರಶ್ರೇಣಿಯತ್ತ ಸಾಗುತ್ತಿದೆ. ಇದೇ ಶೈಕ್ಷಣಿಕ
ವರ್ಷದಿಂದ ಶಾಂತಿನಿಕೇತನ ಪದವಿ ಕಾಲೇಜು ಸಹ (ವಾಣಿಜ್ಯ ಮತ್ತು ವಿಜ್ಞಾನ)
ಪ್ರಾರಂಭಗೊಳ್ಳಲಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಲೆಯ ಗವರ್ನಿಂಗ್ ಸಮಿತಿ ಅಧ್ಯಕ್ಷ ಭರತ ತೋಪಿನಕಟ್ಟಿ,
ಕಾರ್ಯದರ್ಶಿ ಆರ್.ಎಸ್ ಪಾಟೀಲ, ಮುಖ್ಯಾಧ್ಯಾಪಕಿ ಸ್ವಾತಿಕಮಲ ವಾಳ್ವೆ, ಸಾರ್ವಜನಿಕ
ಸಂಪರ್ಕಾಧಿಕಾರಿ ಮನೀಷಾ ಹಲಗೇಕರ ಮತ್ತಿತರರು ಇದ್ದರು.

Related Articles

Back to top button