ಅಂಕಲಿಯಲ್ಲಿ ರಾಣಿ ಚನ್ನಮ್ಮ ಪುತ್ಥಳಿ ಅನಾವರಣ – ಪ್ರಭಾಕರ ಕೋರೆ ಒಬ್ಬ ವ್ಯಕ್ತಿಯಲ್ಲಿ ಶಕ್ತಿ ಎಂದು ಶರದ್ ಪವಾರ್
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ : ದೇಶದ ಜನ ಸ್ವಾಭಿಮಾನದಿಂದ ಬದುಕುವಂತೆ ಮಾಡಿದವರು ಕಿತ್ತೂರು ರಾಣಿ ಚೆನ್ನಮ್ಮ. ಇಂಗ್ಲೀಷರ ವಿರುದ್ಧ ಹೋರಾಡಿದ ಏಕೈಕ ಮಹಿಳೆ ಚೆನ್ನಮ್ಮನ ಶೂರತನ ಮತ್ತು ದೇಶಾಭಿಮಾನ ಇಂದಿನ ಯುವಕರು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸರಕಾರದ ಮಾಜಿ ಕೃಷಿ ಸಚಿವ ಹಾಗೂ ಎನ್ ಸಿಪಿ ರಾಷ್ಟ್ರಾಧ್ಯಕ್ಷ ಶರದ ಪವಾರ ಹೇಳಿದರು.
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ನಡೆದ ವೀರರಾಣಿ ಕಿತ್ತೂರ ಚೆನ್ನಮ್ಮ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯಂತೆ ವೀರ ರಾಣಿ ಕಿತ್ತೂರು ಚನ್ನಮ್ಮಾ ಸೇರಿದಂತೆ ಅನೇಕ ಗಣ್ಯರು ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ್ದಾರೆ, ಅವರ ಕೊಡುಗೆಯಿಂದಾಗಿ ಇಂದು ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಬ್ರಿಟಿಷರ ವಿರುದ್ಧ ಹೋರಾಡಿದ ವೀರರಾಣಿ ಕಿತ್ತೂರು ಚನ್ನಮ್ಮ ಅವರ ಸ್ವಾಭಿಮಾನದಿಂದಲೇ ಇಂದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, ಎಲ್ಲರೂ ಅಸಹಾಯಕತೆಯನ್ನು ಒಪ್ಪಿಕೊಳ್ಳದೆ ಗೌರವದಿಂದ ಬದುಕಬೇಕು ಎನ್ನುವ ಸಂದೇಶವನ್ನು ಅವರು ನೀಡಿದ್ದಾರೆ. ವೀರರಾಣಿ ಕಿತ್ತೂರು ಚನ್ನಮ್ಮನ ಪ್ರತಿಮೆ ಅನಾವರಣ ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಸಂಕೇತವಾಗಿದೆ ಎಂದರು.
ಡಾ.ಪ್ರಭಾಕರ ಕೋರೆ ಅವರೊಬ್ಬ ವ್ಯಕ್ತಿಯಾಗಿರದೇ ಸಮಾಜದ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಕೆಎಲ್ ಇ ಸಂಸ್ಥೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿ ಲಕ್ಷಾಂತರ ಮಕ್ಕಳಿಗೆ ಅಕ್ಷರಾಭ್ಯಾಸ ಒದಗಿಸಿದ್ದಾರೆ. ಈ ಭಾಗಕ್ಕಷ್ಟೇ ಅಲ್ಲದೆ ಇಡೀ ದೇಳಕ್ಕೆ ಅವರ ಕೊಡುಗೆ ಗಣನೀಯವಾಗಿದೆ ಎಂದು ಶರದ್ ಪವಾರ ಹೇಳಿದರು.
ಶರದ್ ಪವಾರ ಕೊಡುಗೆ ಅನನ್ಯ – ಕೋರೆ
ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ಇಂದು ನಾವು ಸ್ಥಾಪಿಸಿರುವ ಸಹಕಾರಿ ಸಂಘಗಳೆಲ್ಲವೂ ಶರದ್ ಪವಾರರ ಆಶೀರ್ವಾದದಿಂದಲೇ ಆಗಿವೆ. ಅವರ ಆಶೀರ್ವಾದದಿಂದ ಇಂದು ಅನೇಕ ಸಂಘಗಳನ್ನು ಸ್ಥಾಪಿಸಿದ್ದಲ್ಲದೆ ಸಕ್ಕರೆ ಉದ್ಯಮದಲ್ಲಿ ಜಿಲ್ಲೆಯ ಪ್ರಮುಖ ಸಹಕಾರಿ ಸಕ್ಕರೆ ಕಾರ್ಖಾನೆಯಾಗಿದೆ. ಶಿಕ್ಷಣ ಸಂಸ್ಥೆಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತರುವಲ್ಲಿ ಅವರ ಕೊಡುಗೆ ಅಮೂಲ್ಯ ಎಂದರು.
ಶರದ್ ಪವಾರ್ ಅವರು ಕೃಷಿ ಸಚಿವರಾಗಿದ್ದಾಗ ಸಕ್ಕರೆ ಉದ್ಯಮವನ್ನು ಜೀವಂತವಾಗಿಡಲು ಮತ್ತು ದೇಶದ ಆಹಾರಧಾನ್ಯ ಉತ್ಪಾದನೆಯನ್ನು ದ್ವಿಗುಣಗೊಳಿಸಲು ಶ್ರಮಿಸಿದ್ದರು. ಅನೇಕ ಬದಲಾವಣೆಗಳನ್ನು ಮಾಡಿ ಕೃಷಿ ಉದ್ಯಮವನ್ನು ಎತ್ತರಕ್ಕೆ ತಂದಿದ್ದಾರೆ. ದೇಶವನ್ನು ಮುನ್ನಡೆಸುತ್ತಲೇ ಕೃಷಿ, ರಕ್ಷಣಾ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತಂದಿದ್ದಾರೆ ಎಂದು ಕೋರೆ ಪ್ರಶಂಸಿಸಿದರು.
ಸಮಾರಂಭದಲ್ಲಿ ರಾಜ್ಯಸಭೆ ಮಾಜಿ ಸದಸ್ಯ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ, ಅರಣ್ಯ ಸಚಿವ ಉಮೇಶ ಕತ್ತಿ, ಮಾಜಿ ಸಚಿವ ಲಕ್ಷ್ಮಣ ಸವದಿ, ಎನ್ ಸಿಪಿ ರಾಜ್ಯಾಧ್ಯಕ್ಷ ಆರ್.ಹರಿ, ಶಾಸಕರಾದ ಗಣೇಶ ಹುಕ್ಕೇರಿ, ದುರ್ಯೋಧನ ಐಹೊಳೆ, ಶಾಸಕ ಅನಿಲ ಬೆನಕೆ, ಮಹಾಂತೇಶ ಕವಟಗಿಮಠ, ಕೃಷ್ಣಾ ರೆಡ್ಡಿ, ಜಗದೀಶ ಕವಟಗಿಮಠ, ಡಾ.ಪ್ರೀತಿ ಕೋರೆ ಇದ್ದರು.
ಎಥೆನಾಲ್ ಘಟಕ ಕಾಮಗಾರಿಗೆ ಚಾಲನೆ
ಚಿಕ್ಕೋಡಿ ಸಿ.ಬಿ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ೨೦೦ ಕೆ.ಎಲ್ ಪಿ.ಡಿ ಇಥೇನಾಲ್/ ಡಿಸ್ಟಿಲರಿ ಘಟಕದ ಅಡಿಗಲ್ಲು ಸಮಾರಂಭಕ್ಕೆ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಪದ್ಮವಿಭೂಷಣ ಪುರಸ್ಕೃತ ಶರದರಾವ ಪವಾರ್ ಚಾಲನೆ ನೀಡಿದರು.
ಸಕ್ಕರೆ ಉತ್ಪಾದನೆ ಜೊತೆಗೆ ಇಥಿನಾಲ್ ಉತ್ಪಾದನೆ ಮಾಡುವುದರಿಂದ ಇಂದನ ಆಮದು ಕಡಿಮೆ ಆಗುತ್ತಿದೆ. ಇದರಿಂದ ರೈತರಿಗೆ ಹೆಚ್ಚಿನ ದರ ಕೊಡಲು ಸಾಧ್ಯವಾಗುತ್ತದೆ ಎಂದರು.
ಕೆ.ಎಲ್.ಇ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ, ಸಚಿವ ಉಮೇಶ ಕತ್ತಿ, ಸಚಿವ ಎಸ್.ಟಿ ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ, ನಿಗಮ ಮಂಡಳಿ ಅಧ್ಯಕ್ಷ ಡಿ.ಎಮ್ ಐಹೊಳೆ, ಶಾಸಕ ಗಣೇಶ ಹುಕ್ಕೇರಿ, ಶಾಸಕ ಅನಿಲ ಬೆನಕೆ, ಬಿ.ಎಚ್ ಕೃಷ್ಣರೆಡ್ಡಿ, ಮಾಜಿ ವಿಧಾನಪರಿಷತ್ ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಜಗದೀಶ ಕವಟಗಿಮಠ , ಚಂದ್ರಕಾಂತ ಕೊಠಿವಾಲೆ, ಅಮರ ಪಾಟೀಲ, ಎನ್.ಸಿ.ಪಿ ನಾಯಕ ಆರ್. ಹರಿ, ರಾಜು ಕಾಗೆ, ಜಗದೀಶ ಪಾಟೀಲ, ಗಣಪತರಾವ ಪಾಟೀಲ ಸೇರಿ ಗಣ್ಯರು ಸಾಥ್ ನೀಡಿದರು. ಸಿ.ಬಿ ಕೋರೆ ಕಾರ್ಖಾನೆ ಅಧ್ಯಕ್ಷ ಭರತ ಬನವಣೆ ಸ್ವಾಗತಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ