*ನಿಪ್ಪಾಣಿ ಮತಕ್ಷೇತ್ರಕ್ಕೆ ಅಭಿವೃದ್ದಿಯ ಹೊಳೆ ಹರಿಸಿದ ಶಾಸಕಿ: 11 ಕೋಟಿ 50 ಲಕ್ಷ ರೂ ವೆಚ್ಚದಲ್ಲಿ ಬೆನಾಡಿ-ಕುನ್ನೂರ ರಸ್ತೆ ಕಾಮಗಾರಿಗೆ ಚಾಲನೆ*

ಪ್ರಗತಿವಾಹಿನಿ ಸುದ್ದಿ: ನಿಪ್ಪಾಣಿ ವಿಧಾನಸಭಾ ಕ್ಷೇತ್ರವು ತಮ್ಮ ಮನೆಯ ಮಗಳಾಗಿ ಗೌರವಿಸುವ ಸಂದರ್ಭದಲ್ಲಿ ನಾಯಕತ್ವದ ಅವಕಾಶವನ್ನು ತಮಗೆ ನೀಡಿತು. ಸತತ ಮೂರು ಬಾರಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಸಂದರ್ಭದಲ್ಲಿ ಸಾವಿರಾರು ಕೋಟಿ ರೂ ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಸಂಸ್ಕಾರ, ಸಂಸ್ಕೃತಿ ಮತ್ತು ಅಭಿವೃದ್ಧಿಯ ಮೂಲಕ ನಮ್ಮ ಜನ ಪರ ಸೇವೆ ಮುಂದುವರೆದಿದ್ದು, ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಾಗ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಬೇನಾಡಿ – ಕುನ್ನೂರ ಈ ರಸ್ತೆ ಕಾಮಗಾರಿಗೆ ಈಗಾಗಲೇ ಚಾಲನೆ ದೊರೆತಿದ್ದು, ಈ ರಸ್ತೆ ಕಾಮಗಾರಿಗೆ 11.50 ಕೋಟಿ ರೂ.ಗಳ ಸಾಕಷ್ಟು ಅನುದಾನ ಮಂಜೂರು ಮಾಡಲಾಗಿದ್ದು, ರಸ್ತೆ ಕಾಮಗಾರಿ ಆರಂಭವಾದ ಬಳಿಕ ಉದ್ಘಾಟನಾ ಸಮಾರಂಭ ನಡೆಸಲಾಗುತ್ತಿದೆ. ಉತ್ತಮ ಗುಣಮಟ್ಟ ಹಾಗೂ ಆಧುನಿಕತೆಯನ್ನು ಒಳಗೊಂಡ ಈ ರಸ್ತೆ ಕಾಮಗಾರಿಯು ನಡೆಯಲಿದೆ. ನಿಪ್ಪಾಣಿ ವಿಧಾನಸಭಾ ಕ್ಷೇತ್ರವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವುದು ನಮ್ಮ ಆದ್ಯ ಕರ್ತವ್ಯ ಮತ್ತು ಗುರಿಯಾಗಿದೆ. ಅದನ್ನು ಪ್ರಾಮಾಣಿಕವಾಗಿ ಜೊಲ್ಲೆ ಕುಟುಂಬವು ಮಾಡುತ್ತಿದ್ದೇ ಎಂದು ಶಾಸಕಿ ಶಶಿಕಲಾ ಜೊಲ್ಲೆ ಅಭಿಪ್ರಾಯ ವ್ಯಕ್ತಪಡಿಸಿದರು.
ನಿಪ್ಪಾಣಿ ಮತ ಕ್ಷೇತ್ರದ ವ್ಯಾಪ್ತಿಗೆ ಬರುವ ಬೇನಾಡಿ-ಕುನ್ನೂರು ರಸ್ತೆ ಡಾಂಬರೀಕರಣಕ್ಕೆ ಶಾಸಕಿ ಶಶಿಕಲಾ ಜೊಲ್ಲೆ ಅವರ ಶತ ಪ್ರಯತ್ನದ ಫಲವಾಗಿ 11.50 ಕೋಟಿ ಅನುದಾನ ಮಂಜೂರಾಗಿದೆ. ಪ್ರಾರಂಭದಲ್ಲಿ ಗಣ್ಯ-ಮಾನ್ಯರಿಂದ ಶ್ರೀಫಲ ಪೂಜೆ ನೆರವೇರಿಸಲಾಯಿತು. ಬಳಿಕ ಶಾಸಕಿ ಶಶಿಕಲಾ ಜೊಲ್ಲೆ ಅವರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ರಸ್ತೆ ಕಾಮಗಾರಿಯ ಶುಭ ಕಾರ್ಯಕ್ಕೆಚಾಲನೆ ನೀಡಿದರು. ಬಳಿಕ ವೇದಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮೀಣ ಬಿಜೆಪಿ ಅಧ್ಯಕ್ಷ ಸಿದ್ಧು ನರಾಟೆ ಕ್ಷೇತ್ರದಲ್ಲಿ ಜೊಲ್ಲೆ ದಂಪತಿ ನಾಯಕತ್ವದ ನಂತರ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮೆಲುಕು ಹಾಕಿದರು.
ಶಾಸಕಿ ಶಶಿಕಲಾ ಜೊಲ್ಲೆ ಅವರು ಮುಂದೆ ಮಾತನಾಡುತ್ತಾ , ಈ ಹಿಂದೆ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳಿಗೂ ಈಗ ಮಾಡಿರುವ ಹಾಗೂ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೂ ಇರುವ ವ್ಯತ್ಯಾಸವನ್ನು ಜನತೆ ಕಂಡುಕೊಳ್ಳಬೇಕು. ತಾವು ಹಾಗೂ ತಮ್ಮ ಕಾಲಾವಧಿಯಲ್ಲಿ ನಡೆದಿರುವ ಪ್ರತಿ ಅಭಿವೃಧಿಯ ಕಾರ್ಯಗಳು ಉತ್ತಮ ಗುಣಮಟ್ಟದಿಂದ ಕೂಡಿದ್ದಾಗಿವೆ. ಕೃಷಿ ಅಭಿವೃದ್ಧಿಗಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಜಲ ಸಿಂಚನ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಇದರ ಪರಿಣಾಮವಾಗಿ ಇಂದು ಶೇಂಡೂರನಂತಹ ಗುಡ್ಡುಗಾಡು ಪ್ರದೇಶಗಳಲ್ಲಿಯೂ ಸಹ ಇಂದು ಬಾವಿ ತೋಡಿದಾಗ ಕೇವಲ 24 ಅಡಿಗೆ ನೀರು ದೊರೆಯುವಂತಾಗಿದೆ.
ಕ್ಷೇತ್ರದ ಯುವ ಪೀಳಿಗೆ ಸುಸಂಸ್ಕೃತರಾಗಲು ಮತ್ತು ಸಂಸ್ಕಾರವಂತರಾಗಲು ಸದಾ ವಿವಿಧ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕ್ಷೇತ್ರದಲ್ಲಿ ಶಿಕ್ಷಣದ ಮೂಲಕವೂ ಪ್ರಗತಿ ಸಾಧಿಸಲು ಅಣ್ಣಾಸಾಹೇಬ ಜೊಲ್ಲೆ ವಸತಿ ಕಾಲೇಜು ಸ್ಥಾಪಿಸಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಿಪ್ಪಾಣಿ ನಗರಸಭೆ ಅಧ್ಯಕ್ಷೆ ಸೋನಲ ಕೊಠಡಿಯಾ ಮಾತನಾಡಿ, ಜೊಲ್ಲೆ ದಂಪತಿ ಮೂಲಕ ನಿಪ್ಪಾಣಿ ಕ್ಷೇತ್ರಕ್ಕೆ ಅಭಿವೃದ್ಧಿಯ ಹೊಸ ರೂಪು ದೊರೆಯಿತು. ಕ್ಷೇತ್ರವನ್ನು ಆಕಾಶದೆತ್ತರಕ್ಕೆ ಕೊಂಡೊಯ್ಯುವ ಕಾರ್ಯ ಜೊಲ್ಲೆ ದಂಪತಿಗಳು ಮಾಡಿದ್ದಾರೆ ಎಂದು ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು.
ಹಾಲಶುಗರ ಅಧ್ಯಕ್ಷ ಎಂ. ಪಿ. ಪಾಟೀಲ ಅವರು ಕೂಡ ತಮ್ಮ ಅಭಿಪ್ರಾಯಗಳನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ