ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಚುರುಕಾಗಿದೆ. ಇದರ ನಡುವೆಯೇ ನಿಗಮ ಮಂಡಳಿಗಳ ನೇಮಕ ಮಾಡಿ ಆದೇಶ ನೀಡಿದ್ದ ಸಿಎಂ ಯಡಿಯೂರಪ್ಪ ಪರೋಕ್ಷವಾಗಿ ಸಚಿವ ಸಂಪುಟ ಪುನಾರಚನೆಗೆ ಸೂಚನೆ ನೀಡಿದ್ದಾರೆ ಎನ್ನಲಾಗಿತ್ತು. ಇದರ ನಡುವೆಯೇ ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ದೆಹಲಿಗೆ ಭೇಟಿ ನೀಡಿದ್ದಾರೆ.
ನಿನ್ನೆ ರಾತ್ರಿಯೇ ದೆಹಲಿಗೆ ಭೇಟಿ ನೀಡಿರುವ ಸಚಿವೆ ಶಶಿಕಲಾ ಜೊಲ್ಲೆ ಅವರು, ಇಂದು ಹೈಕಮಾಂಡ್ ಭೇಟಿ ಮಾಡುವ ಪ್ರಯತ್ನ ಮಾಡಲಿದ್ದಾರೆ ಎನ್ನಲಾಗಿದೆ. ಈ ವೇಳೆ ಸಂಪುಟದಲ್ಲಿ ಮುಂದುವರಿಸಲು ಹೈಕಮಾಂಡ್‍ಗೆ ಮನವಿ ಮಾಡುವ ಸಾಧ್ಯತೆ ಇದೆ. ಆದರೆ ಈವರೆಗೂ ಹೈಕಮಾಂಡ್ ಸಚಿವರ ಭೇಟಿಗೆ ಯಾವುದೇ ಸಮಯ ನೀಡಿಲ್ಲ ಎಂಬ ಮಾಹಿತಿ ಲಭಿಸಿದ್ದು, ಸಂಜೆ ವೇಳೆಗೆ ಭೇಟಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.
ಸಚಿವ ಸ್ಥಾನಕ್ಕೆ ಭಾರೀ ಪೈಪೋಟಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಶಿಕಲಾ ಜೊಲ್ಲೆ ಅವರನ್ನು ಅನಿವಾರ್ಯವಾಗಿ ಸಂಪುಟದಿಂದ ಕೈಬಿಡಲಾಗುತ್ತಿದೆ ಎನ್ನಲಾಗಿದೆ. ಆಜದರೆ ರಾಜ್ಯ ಸಂಪಪಟದಲ್ಲಿ ಶಶಿಕಲಾ ಜೊಲ್ಲೆ ಏಕೈಕ ಮಹಿಳೆಯಾಗಿರುವುದರಿಂದ ಅವರನ್ನು ಕೈ ಬಿಡುವುದು ಸುಲಭವಲ್ಲ. ಹಾಗೆಯೇ ಯಡಿಯೂರಪ್ಪ ಅವರಿಗೂ ಜೊಲ್ಲೆ ಅವರ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಆದರೆ ಕೆಲವೊಂದು ಅನಿವಾರ್ಯತೆಯಲ್ಲಿ ಜೊಲ್ಲೆಯವರನ್ನು ಕೈ ಬಿಡಬಹುದು ಎನ್ನಲಾಗಿದೆ.
ಈ ಕುರಿತು ಮಾಹಿತಿ ಪಡೆಯಲು ಪ್ರಗತಿವಾಹಿನಿ ಪ್ರಯತ್ನಿಸಿದರೂ ಜೊಲ್ಲೆಯವರ ಸಂಪರ್ಕ ಸಾಧ್ಯವಾಗಲಿಲ್ಲ.
ಆಪ್ತರಿಗೆ ಸಚಿವ ಸ್ಥಾನ ನೀಡುವ ಮೂಲಕ ವಿರೋಧಿ ಬಣಕ್ಕೆ ಸಿಎಂ ಟಾಂಗ್ ನೀಡಲಿದ್ದಾರೆ ಎನ್ನಲಾಗಿದೆ. ಉಳಿದಂತೆ ಸಂಪುಟ ಸಚಿವರಾಗಿರುವ ಡಿಸಿಎಂ ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ್, ಶಶಿಕಲಾ ಜೊಲ್ಲೆ ಹಾಗೂ ಪ್ರಭು ಚವ್ಹಾಣ್, ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಸಂಪುಟದಿಂದ ಕೊಕ್ ನೀಡಲಾಗುತ್ತದೆ ಎನ್ನಲಾಗಿದೆ. ಆದರೆ ಲಕ್ಷ್ಮಣ ಸವದಿ ಹಿರೋ ಆಗಲಿದ್ದಾರೋ, ಜೀರೋ ಆಗಲಿದ್ದಾರೋ ಕಾದು ನೋಡಬೇಕಿದೆ.
ಸದ್ಯ ಖಾಲಿ ಉಳಿದಿರುವ ಸಚಿವ ಸ್ಥಾನಗಳನ್ನು ಸೇರಿಸಿ ಹುಕ್ಕೇರಿ ಶಾಸಕ ಉಮೇಶ್ ಕತ್ತಿ, ಮೇಲ್ಮನೆ ಸದಸ್ಯರಾದ ಎಂಟಿಬಿ ನಾಗರಾಜ್, ಆರ್.ಶಂಕರ್, ಹೆಚ್.ವಿಶ್ವನಾಥ್, ಮಹಾದೇವಪುರ ಶಾಸಕ ಅರವಿಂದ ಲಿಂಬಾವಳಿ, ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಸುಳ್ಯ ಶಾಸಕ ಅಂಗಾರ ಹಾಗೂ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ.
ಲಕ್ಷ್ಮಣ ಸವದಿ ದೆಹಲಿ ಭೇಟಿ: ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ