Belagavi NewsBelgaum NewsKannada NewsKarnataka NewsLatestPolitics

*ಲಿಂಗಾಯತ ಸಮಾಜಕ್ಕೂ ಕುರುಬ ಸಮಾಜಕ್ಕೂ ಅವಿನಾಭಾವ ಸಂಬಂಧ: ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಎಲ್ಲಿ ಸಂಗೊಳ್ಳಿ ರಾಯಣ್ಣ ಇರುತ್ತಾನೋ ಅಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಇರುತ್ತಾಳೆ. ಎಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಇರುತ್ತಾಳೋ ಅಲ್ಲಿ ಸಂಗೊಳ್ಳಿ ರಾಯಣ್ಣ ಇರುತ್ತಾನೆ. ಹಾಗಾಗಿ ಲಿಂಗಾಯತ ಸಮಾಜಕ್ಕೂ ಕುರುಬ ಸಮಾಜಕ್ಕೂ ಅವಿನಾಭಾವ ಸಂಬಂಧವಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬೆಳಗಾವಿಯಲ್ಲಿ ಮಂಗಳವಾರ ನಡೆದ ಶೆಫರ್ಡ್ ಇಂಡಿಯಾ ಇಂಟರ್ ನ್ಯಾಶನಲ್ 9 ನೇ ಸಮಾವೇಶದಲ್ಲಿ ಅವರು ಮಾತನಾಡಿ, ಸ್ವಾಮಿ ನಿಷ್ಠೆಗೆ ಇನ್ನೊಂದು ಹೆಸರೇ ಸಂಗೊಳ್ಳಿ ರಾಯಣ್ಣ ಎಂದರು.

ಈ ಸಮಾವೇಶ ಬೆಳಗಾವಿಯಲ್ಲಿ ನಡೆಯುತ್ತಿರುವುದು ಖುಷಿ ತಂದಿದೆ. ಸಮಾವೇಶಕ್ಕ ಸಹಕಾರ ನೀಡಬೇಕೆಂದು ಸಮಾಜದ ಮುಖಂಡರು ಮನೆಗೆ ಬಂದು ಹೇಳಿದಾಗ, ಇದು ನನ್ನ ಭಾಗ್ಯ ಎಂದು ಅವರೊಂದಿಗೆ ಕೈ ಜೋಡಿಸಿದೆ. ಸಮಾಜದಲ್ಲಿ ಯಾವುದೇ ಶುಭ ಕಾರ್ಯ ನಡೆಯಲಿ ಕುರುಬ ಸಮಾಜದವರಿಂದಲೇ ಆರಂಭ ಮಾಡಿಸುವ ರೂಢಿ ಇದೆ. ನಿಮ್ಮದು ಅಮೃತ ಹಸ್ತ ಎಂದು ಹೆಬ್ಬಾಳಕರ್ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತ್ಯತೀತ ತತ್ವದ ಮೇಲೆ ಆಡಳಿತ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಕೇವಲ ಕುರುಬರ ಕಣ್ಮಣಿ ಅಲ್ಲ, ಸಮಸ್ತ ಸಮಾಜದ, ಸಮಸ್ತ ಕನ್ನಡಿಗರ ಕಣ್ಮಣಿ. ಪಕ್ಷಾತೀತವಾಗಿ ಅವರಿಗೆ ಅಭಿಮಾನಿಗಳಿದ್ದಾರೆ ಎಂದು ಹೆಬ್ಬಾಳಕರ್ ಪ್ರಶಂಸಿಸಿದರು.

ಸಿದ್ದರಾಮಯ್ಯ ನನಗೆ 3 ಬಾರಿ ಬಿ ಫಾರ್ಮ್ ನೀಡಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಎಂದು ತಲೆಯ ಮೇಲೆ ಕೈ ಇಟ್ಟು ಆಶಿರ್ವದಿಸಿದ್ದಾರೆ. ನನ್ನಂತ ಸಾವಿರಾರು ಜನರನ್ನು ಬೆಳೆಸಿದ್ದಾರೆ. ಅವರಿಂದ ಕಲಿಯಬೇಕಾದದ್ದು ಬಹಳಷ್ಟಿದೆ ಎಂದೂ ಹೇಳಿದರು.

ಸಿದ್ದರಾಮಯ್ಯ ನೇತೃತ್ವದಲ್ಲಿ ಅತ್ಯುತ್ತಮ ಆಡಳಿತ ನೀಡುತ್ತಿದ್ದೇವೆ. ಜಾತ್ಯತೀತವಾಗಿ, ಪಕ್ಷಾತೀತವಾಗಿ 5 ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಒಳ್ಳೆಯ ಕೆಲಸ ಮಾಡಿದ್ದಕ್ಕೇ ಅವರು 14 ಬಾರಿ ಬಜೆಟ್ ಮಂಡಿಸಿದ್ದಾರೆ. ಸಮಾಜದ ದೃವತಾರೆಯಾಗಿರುವ ಸಿದ್ದರಾಮಯ್ಯ ಹೀಗೇ ಬೆಳೆಯುತ್ತಿರಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ್ ಆಶಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button