LatestUncategorized

 ಶಿಗ್ಗಾಂವ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಕೌಶಲ್ಯ ಅಭಿವೃದ್ಧಿ: ಸಿಎಂ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ, ಶಿಗ್ಗಾಂವಿ :  ಶಿಗ್ಗಾಂವ್ ತಾಲ್ಲೂಕಿನಲ್ಲಿ ಶೀಘ್ರದಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಪ್ರಾರಂಭವಾಗುತ್ತದೆ. ಬೇರೆ ಬೇರೆ ತಂತ್ರಜ್ಞಾನದಲ್ಲಿ ಆಧುನಿಕ ತರಬೇತಿ ಕೇಂದ್ರಕ್ಕೆ ಮುಂದಿನ ತಿಂಗಳು ಅದಕ್ಕೆ ಅಡಿಗಲ್ಲು ಹಾಕಲಿದ್ದೇನೆ. ಈ ಮೂಲಕ ಶಿಗ್ಗಾಂವ್ ತಾಲ್ಲೂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ ಕೌಶಲ್ಯ ಅಭಿವೃದ್ಧಿ ಮಾಡುವ ಇಚ್ಛೆ ನನ್ನದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದ ಶಿಗ್ಗಾಂವ್ ನೂತನ ಬಸ್ ಘಟಕ ಮತ್ತು ಚಾಲನಾ ಹಾಗೂ ತಾಂತ್ರಿಕ ತರಬೇತಿ ಕೇಂದ್ರದ ಶಂಕುಸ್ಥಾಪನಾ ಕಾರ್ಯವನ್ನು ನೆರವೇರಿಸಿ ಮಾತನಾಡಿದರು.
ಶಿಗ್ಗಾಂವ್ ಗೆ ಬಸ್ ಡಿಪೋ ಆಗಬೇಕೆಂದು ಸುಮಾರು 10 ವರ್ಷದಿಂದ ಬೇಡಿಕೆ ಇತ್ತು. ಇದಕ್ಕಾಗಿ ಮೀಸಲಿಟ್ಟಿದ್ದ ಜಾಗಕ್ಕೂ ಸಮಸ್ಯೆ ಆಗಿತ್ತು. ಅದನ್ನೆಲ್ಲವನ್ನೂ ನಿವಾರಿಸಿ 28 ಕೋಟಿ ವೆಚ್ಚದಲ್ಲಿ ಬಸ್ ಡಿಪೋ ಮತ್ತು ತರಬೇತಿ ಕೇಂದ್ರವನ್ನು ಪ್ರಾರಂಭ ಮಾಡುತ್ತಿದ್ದೀವಿ. ಶಿಗ್ಗಾಂವ್ ಸುತ್ತಮುತ್ತ ಅಭಿವೃದ್ಧಿ ಆಗುತ್ತಿರುವುದರಿಂದ ಸಾರಿಗೆ ವ್ಯವಸ್ಥೆ ಸುಗಮವಾಗಿ ಆಗಲು ಇಲ್ಲಿ ಡಿಪೋ ಆಗುವುದು ಅವಶ್ಯಕವಾಗಿತ್ತು. ಇದರಿಂದ ಡಿಪೋ ಆಧಾರಿತ ಕೆಲಸಗಳು ಹೆಚ್ಚಾಗಿ ಈ ಭಾಗದವರಿಗೆ ಉದ್ಯೋಗ ಸಿಗುತ್ತದೆ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಶಿಗ್ಗಾಂವ್ ನಲ್ಲಿ ಈಗಾಗಲೇ ಒಳ್ಳೆಯ ವ್ಯವಸ್ಥೆಯ ಐಟಿಐ ಕಾಲೇಜು ಇದೆ, ಬಂಕಾಪುರದಲ್ಲಿ ಪಾಲಿಟೆಕ್ನಿಕ್ ಕಾಲೇಜು ಇದೆ. ಇದರ ಜತೆ ಇಲ್ಲಿನ ತರಬೇತಿ ಕೇಂದ್ರ ಶೀಘ್ರದಲ್ಲಿ ಪ್ರಾರಂಭವಾಗಲಿದೆ. ತಾಂತ್ರಿಕತೆಗೆ ಒತ್ತು ನೀಡಿ ತರಬೇತಿ ಸಿಗುವ ಸಂಸ್ಥೆಗಳನ್ನು ಶಿಗ್ಗಾಂವ್ ತಾಲ್ಲೂಜಿನಲ್ಲಿ ಪ್ರಾರಂಭಿಸುವ ಗುರಿ ನನ್ನದು. ಖಾಸಗೀ ವಲಯದವರೂ ಇಲ್ಲಿ ಕೌಶಲ್ಯಾಭಿವೃದ್ದಿ ತರಬೇತಿ ಸಂಸ್ಥೆ ತೆರೆಯಲು ಉತ್ಸುಕರಾಗಿದ್ದಾರೆ. ಅವರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನೂ ನಾವು ಕೊಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
 ಶಿಗ್ಗಾಂವ್ ಗೆ ಅನೇಕ ಉದ್ದಿಮೆಗಳು ಬರಲಿದೆ 
ಜೆಸಿಬಿ ಸಂಸ್ಥೆಯ ತರಬೇತಿ ಕೇಂದ್ರವನ್ನು ಶಿಗ್ಗಾಂವ್ ಗೆ ತರುವ ಪ್ರಯತ್ನ ಆಗುತ್ತಿದೆ. ಅದು ಬಂದರೆ ದೊಡ್ಡ ಪ್ರಮಾಣದಲ್ಲಿ ಯುವಕರು ಜೆಸಿಬಿ ವಾಹನ ಚಾಲಕ ತರಬೇತಿ ಪಡೆಯಬಹುದು. ಇದರ ಜತೆಯಲ್ಲಿ ಶಿಗ್ಗಾಂವ್ ಗೆ ಆಟೊಮೊಬೈಲ್ ಉದ್ಯಮಗಳನ್ನು ತರಲು ಮಾತುಕತೆ ನಡೆಯುತ್ತಿದೆ. ಶೀಘ್ರದಲ್ಲಿ 350 ಎಂಪಿಎಲ್ಡಿ ಸಾಮರ್ಥ್ಯದ ಬಹುದೊಡ್ಡ ಎಥನಾಲ್ ಉತ್ಪಾದನಾ ಘಟಕ ಪ್ರಾರಂಭವಾಗುತ್ತಿದೆ. ಇದರಿಂದ ರೈತರಿಗೆ ದೊಡ್ಡ ಅನುಕೂಲ ಆಗುತ್ತದೆ. ಟೆಕ್ಸ್ಟೈಲ್ ಪಾರ್ಕ್ ಪ್ರಾರಂಭಿಸುವುದರ ಮೂಲಕ 5 ಸಾವಿರ ಹೆಣ್ಣುಮಕ್ಕಳಿಗೆ ಕೆಲಸ ಸಿಗಲಿದೆ ಎಂದು ಸಿಎಂ ಹೇಳಿದರು.
 ಶಾಲಾ ಮಕ್ಕಳಿಗೆ ಖಾಸಗಿ ಸಹಭಾಗಿತ್ವದಲ್ಲಿ ಬಸ್ ಸೌಲಭ್ಯ
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ವಿಶೇಷ ಯೋಜನೆ ರೂಪಿಸಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ವಾಯುವ್ಯ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಖಾಸಗೀ ಸಹಭಾಗಿತ್ವದಲ್ಲಿ ಶಾಲಾ ಮಕ್ಕಳಿಗಾಗಿ ಬಸ್ಗಳನ್ನು ನಡೆಸುವ ಈ ಯೋಜನೆಯನ್ನು ರಾಜ್ಯಾದ್ಯಂತ ಪ್ರಾರಂಭಿಸುವ ಗುರಿ ಇದ್ದು ನನ್ನ ಕ್ಷೇತ್ರದಿಂದಲೇ ಇದನ್ನು ಪ್ರಾರಂಭಿಸಬೇಕೆಂಬ ಉದ್ದೇಶ ಇದೆ. ಈ ಮೂಲಕ ಶಾಲಾ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಮಾಡುವ ಪೈಲಟ್ ಯೋಜನೆ ನಮ್ಮ ಕ್ಷೇತ್ರದಲ್ಲಿ ಪ್ರಾರಂಭವಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾರ್ ಹೆಬ್ಬಾರ್, ವಿಧಾನ ಪರಿಷತ್ ಸದಸ್ಯ ಸಂಕನೂರ, ವಾಯುವ್ಯ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಬಸವರಾಜ ಕೆಲಗಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

 

 50 ವರ್ಷದ ಹಿಂದೆಯೇ ಶಿಗ್ಗಾಂವ್ ಗೆ ಪ್ರಗತಿಪರ ಕೃಷಿಯನ್ನು ಪರಿಚಯಿಸಿದವರು ದಿ.ಹನುಮಂತಗೌಡ್ರು:
ಶಿಗ್ಗಾಂವ್ ತಾಲ್ಲೂಕು ಕೃಷಿಯಿಂದ ಕೂಡಿದ್ದು ಪ್ರಾಮಾಣಿಕವಾಗಿ ಬದುಕುವ ರೈತಾಪಿ ವರ್ಗ ಇಲ್ಲಿದೆ. ದಿ.ಹನುಮಮಂತಗೌಡ್ರು 50 ವರ್ಷದ ಹಿಂದೆಯೇ ಪ್ರಗತಿಪರ ಕೃಷಿಯನ್ನು ಹೇಗೆ ಮಾಡಬೇಕು, ಕೃಷಿಯಲ್ಲಿ ಲಾಭದಾಯಕ ಬೆಳೆಯನ್ನು ಹೇಗೆ ಬೆಳಯಬೇಕೆಂಬುದನ್ನು ತೋರಿಸಿಕೊಟ್ಟಿದ್ದರು ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.
ಅವರು ಇಂದು ಶಿಗ್ಗಾಂವ್ ಹೊಸ ಬಸ್ ನಿಲ್ದಾಣದ ಬಳಿ ನೂತನವಾಗಿ ನಿರ್ಮಾಣ ಮಾಡಿರುವ ಹನುಮಂತಗೌಡ್ರು ಪಾಟೀಲ ಕಲ್ಯಾಣ ಭವನ ಹಾಗೂ ಪಾಟೀಲ ಕಂಫರ್ಟ್ಸ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಶಿಗ್ಗಾಂವ್ ನ ಕಿರೀಟ ಪ್ರಾಯವಾಗಿರುವ ಮನೆತನ ದಿ.ಹನುಮಂತೇಗೌಡ ಪಾಟೀಲರ ಮನೆತನ. ಇಡೀ ಶಿಗ್ಗಾಂವ್ ತಾಲ್ಲೂಕಿನ ಜನ ಅವರನ್ನು ಗೌರವ ಮತ್ತು ಪೂಜ್ಯ ಭಾವನೆಯಿಂದ ನೋಡುತ್ತಿದ್ದರು. ದಿ.ಹನುಮಂತಗೌಡರು ಮತ್ತು ದಿ.ಶಂಕರಗೌಡರ ನೆನಪಿನಲ್ಲಿ ಸಿದ್ದಾಂತ್ ಗೌಡ ಪಾಟೀಲ ಅವರು ನೀ ಭವ್ಯ ಕಲ್ಯಾಣಮಂಟಪ ನಿರ್ಮಾಣ ಮಾಡಿರುವುದು ಸಂತೋಷದ ವಿಚಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಒಕ್ಕಲುತನದಲ್ಲಿ ಹಾಜರಿ ಪುಸ್ತಕ ಇಟ್ಟಿದ್ದರು 
ನಾವು ಶಾಲೆಯಲ್ಲಿ, ಫ್ಯಾಕ್ಟರಿಯಲ್ಲಿ ಹಾಜರಿ ಪುಸ್ತಕವನ್ನು ನೋಡಿದ್ದೇವೆ. ಆದರೆ ದಿ. ಹನುಮಂತೇಗೌಡರು ಒಕ್ಕಲುತನದಲ್ಲಿ ಹಾಜರಿ ಪುಸ್ತಕ ಇಟ್ಟಿದ್ದರು. ಅದನ್ನು ಸುಮಾರು 50 ವರ್ಷ ನಿರ್ವಹಣೆ ಮಾಡಿದ್ದರು. ಗೊಬ್ಬರ ಎಷ್ಟು ಬಳಕೆ ಮಾಡಬೇಕು, ಯಾವ ಬೀಜ ತರಬೇಕು, ಎತ್ತುಗಳನ್ನು ಹೇಗೆ ನೋಡಿಕೊಕೊಳ್ಳಬೇಕೆಂದು ವೈಜ್ಞಾನಿಕವಾಗಿ ಮಾಡುತ್ತಿದ್ದರು. ಎಸ್ ಆರ್ ಬೊಮ್ಮಾಯಿ ಅವರಿಗೆ ಮತ್ತು ಹನುಮಂತಗೌಡ್ರಿಗೆ ಅತ್ಯಂತ ಪ್ರೀತಿ ವಿಶ್ವಾಸ ಇತ್ತು. ಜನರಿಗೆ ಸದಾ ಪರೋಪಕಾರಿ ಕೆಲಸಗಳನ್ನು ಮಾಡುತ್ತಿದ್ದ ಮನೆತನ ಇವರದ್ದಾಗಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಚುನಾವಣೆಗೆ ಒಲ್ಲೆ ಎಂದಿದ್ದ ಗೌಡರು
ದಿ.ಹನುಮಂತಗೌಡರ ಮಗ ದಿ.ಶಂಕರಗೌಡರು ಸಹ ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಸದಾ ಕಾಳಜಿ ವಹಿಸುತ್ತಿದ್ದರು. 78ರಲ್ಲಿ ಚುನಾವಣೆ ಸಂದರ್ಭದಲ್ಲಿ ಹನುಮಂತ ಗೌಡ್ರಿಗೆ ಚುನಾವಣೆ ನಿಲ್ಲಿ ಎಂದು ಇಡೀ ತಾಲ್ಲೂಕಿನ ಜನ ಒತ್ತಾಯ ಮಾಡಿದ್ರೂ ಅವರು ಎಂದೂ ರಾಜಕಾರಣಕ್ಕೆ ಬರಲ್ಲ ಎಂದು ಹೇಳಿದ್ರು. ಅವರ ಮಗ ಶಂಕರಗೌಡ ಪಾಟೀಲ್ ಚುನಾವಣೆಗೆ ನಿಂತರೂ ಅವರು ಪರಾಭವಗೊಂಡ ಹಿನ್ನೆಲೆ ನಂತರ ಅವರೂ ರಾಜಕಾರಣಕ್ಕೆ ಬರಲಿಲ್ಲ. ಭೂ ವ್ಯಾಜ್ಯ ಒಂದಕ್ಕೆ ತಮ್ಮ ವಕೀಲರು ಸರಿಯಾಗಿ ನಿರ್ವಹಣೆ ಮಾಡಿಲ್ಲವೆಂದು ಸ್ವತಃ ತಾವೇ ಕಾನೂನು ಪದವಿ ಪಡೆದು ತಮ್ಮ ಪ್ರಕರಣವನ್ನು ತಾವೇ ವಾದಿಸಿ ಗೆದ್ದು ತೋರಿಸಿದರು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಶಿಗ್ಗಾಂವ್ ಶೀಘ್ರದಲ್ಲೇ ವಾಣಿಜ್ಯ ಕೇಂದ್ರವಾಗಲಿದೆ
ಶಿಗ್ಗಾಂವ್ ತಾಲ್ಲೂಕು ವಾಣಿಜ್ಯ ಕೇಂದ್ರವಾಗಿ ಬೆಳೀತಿದೆ. ನ್ಯಾಷನಲ್ ಹೈವೇ ಇರೋದ್ರಿಂದ ಮುಂದಿನ ದಿನಗಳಲ್ಲಿ ಇದು ಪ್ರಮುಖ ಕೇಂದ್ರ ಆಗಲಿದೆ. ಸಾಕಷ್ಟು ಯೋಜನೆಗಳನ್ನು ಇಲ್ಲಿದೆ ತರುತ್ತಿದ್ದೇವೆ. ಈಗಾಗಲೇ ಟೆಕ್ಸ್ಟೈಲ್ ಪಾರ್ಕ್ ಬರುತ್ತಿದೆ, ಬೃಹತ್ ಕಾರ್ಖಾನೆ ಬರಲು ಹಲವರಿಗೆ ಆಹ್ವಾನ ಕೊಡಲಾಗಿದೆ. ವಿದ್ಯಾ ಸಂಸ್ಥೆಗಳು ಇಲ್ಲಿಗೆ ಬರಲಿದೆ. ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಆಗಲಿದೆ. ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಶಿಗ್ಗಾಂವ್ ತಾಲ್ಲೂಕಿಗೆ ಇದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ದಿವಂಗತರನ್ನು ನೆನೆದು ಭಾವುಕರಾದ ಸಿಎಂ
ಶಂಕರಗೌಡರ ಮನೆತನಕ್ಕೆ ನಾನು ಸದಾ ಚಿರಋಣಿ. ಅವರು ತೋರಿಸಿರುವ ಪ್ರೀತಿ, ವಿಶ್ವಾಸ, ಮಾರ್ಗದರ್ಶನ ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಯಾವುದೇ ಫಲಾಪೇಕ್ಷೆ ಇಲ್ಲದೇ ಅವರು ತಾಲ್ಲೂಕಿನ ಹಿತಕ್ಕಾಗಿ ಮಾರ್ಗದರ್ಶನ ಮಾಡಿಕೊಂಡು ಬಂದಿದ್ದರು. ಇನ್ನೂ ಹಲವು ದಶಕಗಳ ಕಾಲ ಅವರು ಇರಬೇಕಿತ್ತು. ಅವರನ್ನು ಕಳೆದುಕೊಂಡು ನಾವು ಬಡವಾಗಿದ್ದೇವೆ ಎಂದು ಹೇಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ಷಣಕಾಲ ಭಾವುಕರಾದರು.
ಕಾರ್ಯಕ್ರಮದಲ್ಲಿ ಶಿಗ್ಗಾಂವ್ ವಿರಕ್ತ ಮಠದ ಶ್ರೀ ಸಂಗಮೇಶ್ವರ ಮಹಾಸ್ವಾಮಿಗಳು, ದಿ.ಶಂಕರಗೌಡರ ಧರ್ಮಪತ್ನಿ ಸುಶೀಲಮ್ಮ ಪಾಟೀಲ, ಉದ್ಯಮಿ ವಿಜಯ ಸಂಕೇಶ್ವರ್, ಶಿವನಗೌಡ ಪಾಟೀಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
https://pragati.taskdun.com/shiggavicm-basavaraj-bommai12-new-cancer-centre/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button