ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ವರುಣಾರ್ಭಟಕ್ಕೆ ಹಲವೆಡೆ ಪ್ರವಾಹ ಸೃಷ್ಟಿಯಾಗಿದ್ದರೆ ಮತ್ತೆ ಹಲವೆಡೆ ಗುಡ್ಡ ಕುಸಿತ, ಭೂ ಕುಸಿತದಂತಹ ಅವಘಡಗಳು ಮುಂದುವರೆದಿವೆ. ಕೆಲ ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ದುರಂತ ಸಂಭವಿಸಿತ್ತು. ಇದೀಗ ಇಂತದ್ದೇ ಘಟನೆ ಶಿರಾಡಿ ಘಾಟ್ ನಲ್ಲಿ ನಡೆದಿದೆ.
ಶಿರಾಡಿ ಘಾಟ್ ನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮತ್ತೆ ಗುಡ್ಡ ಕುಸಿತ ಸಂಭವಿಸಿದ್ದು, ಚಲಿಸುತ್ತಿದ್ದ ವಾಹನಗಳು ಮಣ್ಣಿನಡಿ ಸಿಲುಕಿವೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡತಪ್ಲೆ ಬಳಿ ಈ ಘಟನೆ ನಡೆದಿದೆ.
ಮಣ್ಣಿನಡಿ ಎರಡು ಟ್ಯಾಂಕರ್, ಎರಡು ಕಾರು, ಟ್ರ್ಯಾಕ್ಟರ್ ಸೇರಿದಂತೆ ಹಲವು ವಾಹನಗಳು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಬರದಿಂದ ಸಾಗಿದೆ. ಕಳೆದ ವಾರವಷ್ಟೇ ದೊಡ್ಡತಪ್ಲೆ ಬಳಿಯ ಇದೇ ಜಾಗದಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು. ಇದೀಗ ಮತ್ತದೇ ಜಾಗದಲ್ಲಿ ಘಟನೆ ನಡೆದಿದ್ದು, ವಾಹನಗಳಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಶಿರಾಡಿ ಘಾಟ್ ನಲ್ಲಿ ಗುಡ್ದ ಕುಸಿತ ಹಿನ್ನೆಲೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ