Kannada NewsKarnataka NewsLatestPolitics

*ನಮ್ಮ ಸರ್ಕಾರ ಕನ್ನಡದ ಮನಸ್ಸು ಹಾಗೂ ಭಾವನೆಗಳಿಗೆ ಧಕ್ಕೆಯಾಗಲು ಬಿಡುವುದಿಲ್ಲ:ಕೇರಳ ಸರ್ಕಾರದ ಕ್ರಮ ಖಂಡನೀಯ: ಶಿವರಾಜ್ ತಂಗಡಗಿ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ಕೇರಳ‌ ಸರ್ಕಾರ ಅಂಗೀಕರಿಸಿರುವ ಮಲೆಯಾಳಿ ಭಾಷಾ ಮಸೂದೆ- 2025ರ ನಡೆಯ ವಿರುದ್ಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ‌ ಸಚಿವ ಶಿವರಾಜ್ ತಂಗಡಗಿ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕೇರಳದ‌ ಗಡಿ ಜಿಲ್ಲೆಯಲ್ಲಿ‌ ವಾಸ ಮಾಡುತ್ತಿರುವ ಜನರ ಮನಸ್ಸು ಸಂಪೂರ್ಣ ಕನ್ನಡ‌‌ ಭಾಷೆಯೊಂದಿಗೆ ಬೆರೆತು ಹೋಗಿದೆ. ಕೇರಳದಲ್ಲಿ ಸುಮಾರು 202 ಕನ್ನಡ ಮಾಧ್ಯಮ ಶಾಲೆಗಳಿವೆ. ನಾನೇ ಖುದ್ದಾಗಿ ಕಳೆದ ಒಂದೂವರೆ ವರ್ಷದ ಹಿಂದೆ ಎಡನೀರು ಮಠಕ್ಕೆ ಭೇಟಿ ನೀಡಿ, ಮಠ ನಿರ್ವಹಣೆ ಮಾಡುತ್ತಿರುವ ಕನ್ನಡ ಶಾಲಾ ಕಾರ್ಯಕ್ರಮದಲ್ಲಿ‌ ಭಾಗವಹಿಸಿದ್ದೆ.

ಕಾಸರಗೋಡಿನ‌ ಜನರ ಮನಸ್ಸು ಹಾಗೂ ಜೀವನ ಸಂಪೂರ್ಣ ಕನ್ನಡ ಭಾಷಾಮಯವಾಗಿದೆ. ಅಲ್ಲಿನ ಕನ್ನಡ ಭಾಷಾ ಬಳಕೆ‌ ನೋಡಿದ ನನಗೆ ಕೇರಳಕ್ಕೆ ಭೇಟಿ ನೀಡಿದ್ದೆ ಎಂದು ಅನಿಸಲಿಲ್ಲ. ಹೀಗಿದ್ದು, ಕೇರಳ ಸರ್ಕಾರ ಇಂತಹ ಮಸೂದೆ ಜಾರಿಗೆ ತಂದಿರುವುದು ಸರಿಯಲ್ಲ ಎಂದಿದ್ದಾರೆ.

ಕೇರಳ ವಿಧಾನಸಭೆ ಅಂಗೀಕರಿಸಿರುವ ಮಲೆಯಾಳಿ ಭಾಷಾ ಮಸೂದೆ – 2025ನ್ನು ಕೂಡಲೇ ಹಿಂಪಡೆಯಬೇಕು. ಯಾವುದೇ ಸಂದರ್ಭದಲ್ಲಿ ನಮ್ಮ ಸರ್ಕಾರ ಕನ್ನಡದ ಮನಸ್ಸು ಹಾಗೂ ಭಾವನೆಗಳಿಗೆ ಧಕ್ಕೆಯಾಗಲು ಬಿಡುವುದಿಲ್ಲ ಎಂದಿದ್ದಾರೆ.

Home add -Advt

ಈಗಾಗಲೇ ಕೇರಳ‌ ಸರ್ಕಾರ ಮಸೂದೆಯನ್ನು ಅಂಗೀಕರಿಸುವ ಮೂಲಕ ಮಕ್ಕಳ‌ ಹಕ್ಕಿನ ಉಲ್ಲಂಘನೆ ಮಾಡಿದ್ದು, ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ ಕೂಡ ಮಾಡಿದೆ.

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ನಿಯೋಗ ಕೇರಳ‌ ರಾಜ್ಯಪಾಲರನ್ನು ಭೇಟಿಯಾಗಿ ಮಸೂದೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದೆ. ಅಂಗೀಕಾರಗೊಂಡಿರುವ ಮಸೂದೆಯ ಮುಂದಿನ‌ ಹಂತಕ್ಕೆ ಹೋಗದಂತೆ ತಡೆಯಬೇಕು ಎಂದು ಆಗ್ರಹಿಸಿದೆ.‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ‌ ಚರ್ಚೆ ನಡೆಸಿ, ನಿಯೋಗವೊಂದನ್ನು ಅಲ್ಲಿನ‌ ರಾಜ್ಯಪಾಲರ ಬಳಿ‌ ಕೊಂಡಯ್ಯಲಾಗುವುದು ಎಂದು ತಿಳಿಸಿದ್ದಾರೆ.

ಕೂಡಲೇ‌ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ, ಸಂವಿಧಾನದ‌ 205ಬಿಯಲ್ಲಿ ಕಲ್ಪಿಸಿರುವ ಅವಕಾಶದಂತೆ ಭಾಷಾ ನಿರ್ದೇಶಕರನ್ನು ಕೇರಳ ರಾಜ್ಯಕ್ಕೆ ಕಳುಹಿಸಿ ಕೊಡಬೇಕು ಎಂದು ಒತ್ತಾಯಿಸಿರುವ ಅವರು, ಈ‌ ಕುರಿತಂತೆ ರಾಷ್ಟ್ರಪತಿಗಳಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದ್ದಾರೆ.

ಇನ್ನು ರಾಜ್ಯದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ರಾಜೀವ್ ಚಂದ್ರಶೇಖರ್ ಅವರು ಕೂಡ ಕೇರಳದ ಈ‌ ನಡೆ ಬಗ್ಗೆ ಧ್ವನಿ ಎತ್ತಬೇಕು ಎಂದು ಶಿವರಾಜ್ ತಂಗಡಗಿ ಅವರು ಆಗ್ರಹಿಸಿದ್ದಾರೆ.

Related Articles

Back to top button