
ಪ್ರಗತಿವಾಹಿನಿ ಸುದ್ದಿ, ಉಗರಗೋಳ: ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದ ಯಲ್ಲಮ್ಮ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ಮಾಂಗಲ್ಯ ಧಾರಣೋತ್ಸವ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.
ಪ್ರತಿವರ್ಷದ ಸಂಪ್ರದಾಯದಂತೆ, ಸವದತ್ತಿ ತಾಲೂಕಿನ ಹರಳಕಟ್ಟಿ ಗ್ರಾಮಸ್ಥರು ದೇವಿಗೆ ಮುತ್ತೈದೆತನದ ಸಂಕೇತಗಳಾದ ಸೀರೆ, ಕುಪ್ಪಸ, ಅರಿಶಿಣ-ಕುಂಕುಮ, ಹಸಿರು ಬಳೆ, ದಂಡಿ ಮಾಲೆ ಹಾಗೂ ಉಡಿ ತುಂಬುವ ಸಾಮಗ್ರಿಗಳನ್ನು ತಂದಿದ್ದರು.
ಪ್ರತಿ ವರ್ಷವೂ ಲಕ್ಷಾಂತರ ಭಕ್ತರು ಈ ಆಚರಣೆಗೆ ಸಾಕ್ಷಿಯಾಗುತ್ತಿದ್ದರು. ಆದರೆ, ಈ ಸಲ ಭಾರತದಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ದೇವಸ್ಥಾನದ ಅರ್ಚಕರು, ಅಧಿಕಾರಿಗಳು ಹಾಗೂ ಕೆಲವೇ ಹಿರಿಯರ ಸಮ್ಮುಖದಲ್ಲಿ ಧಾರ್ಮಿಕ ವಿಧಿ-ವಿಧಾನ ನೆರವೇರಿದವು.
ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ, ರಾಮನಗೌಡ ತಿಪರಾಶಿ, ಯಲ್ಲಮ್ಮ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ, ರಾಮದುರ್ಗ ಡಿವೈಎಸ್ಪಿ ಶಂಕರಗೌಡ ಪಾಟೀಲ, ಸವದತ್ತಿ ಸಿಪಿಐ ಮಂಜುನಾಥ ನಡುವಿನಮನಿ, ಪರಸನಗೌಡ ಚವನಗೌಡರ ಇತರರು ಇದ್ದರು.