ಸರ್ಕಾರದ ವಿರುದ್ಧ ದಂಗೆಯೆದ್ದ ನಾಗರಿಕರು; ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ ಹಾಕಿ ಆಕ್ರೋಶ; ದೇಶಬಿಟ್ಟು ಪರಾರಿಯಾದ ಅಧ್ಯಕ್ಷ ರಾಜಪಕ್ಸೆ
ಪ್ರಗತಿವಾಹಿನಿ ಸುದ್ದಿ; ಕೊಲಂಬೋ: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾದಲ್ಲಿ ಅನ್ನಾಹಾರಕ್ಕೂ ಹಾಹಾಕರ ಶುರುವಾಗಿದೆ. ಆರ್ಥಿಕ ಸಂಕಷ್ಟದಿಂದ ಸರ್ಕಾರದ ವಿರುದ್ಧ ದಂಗೆಯೆದ್ದಿರುವ ನಾಗರಿಕರು ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ನಿವಾಸಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರೀಲಂಕಾದ ವಿವಿಧೆಡೆಗಳಿಂದ ರಾಜಧಾನಿ ಕೊಲಂಬೋಗೆ ರೈಲುಗಳಲ್ಲಿ ಆಗಮಿಸುತ್ತಿರುವ ಲಕ್ಷಾಂತರ ಜನರು, ಕೊಲಂಬೋದಲ್ಲಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಅಧ್ಯಕ್ಷ ರಾಜಪಕ್ಸೆ ನಿವಾಸದ ಸುತ್ತ ಇದ್ದ ಬ್ಯಾರಿಕೇಡ್ ಗಳನ್ನು ಮುರಿದು, ನಿವಾಸಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರ ದಾಳಿಯಿಂದ ಕಂಗಾಲಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ದೇಶವನ್ನೇ ಬಿಟ್ಟು ಪಲಾಯನಗೈದಿದ್ದಾರೆ. ಅಧ್ಯಕ್ಷರ ಮನೆ ಮೇಲೆ ಏಕಾಏಕಿ ದಾಳಿ ನಡೆಸುತ್ತಿರುವಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು, ಜಲಫಿರಂಗಿ ಪ್ರಯೋಗ ಮಾಡಿದ್ದಾರೆ. ಘಟನೆಯಲ್ಲಿ ನೂರಾರು ಜನರು ಗಾಯಗೊಂಡಿದ್ದಾರೆ.
ಮತ್ತೊಂದೆಡೆ ಪ್ರತಿಭಟನಾಕಾರರ ನಡುವೆ ಸಿಲುಕಿಕೊಂಡಿರುವ ಶ್ರೀಲಂಕಾ ಮಾಜಿ ಸಚಿವ ರಜಿತಾ ಸೇನರತ್ನೆ ಅವರನ್ನು ಹಿಡಿದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಲಂಕಾ ಅಧ್ಯಕ್ಷರ ನಿವಾಸಕ್ಕೆ ನುಗ್ಗಿರುವ ಸಾರ್ವಜನಿಕರು ನಿವಾಸದಲ್ಲಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿಗೊಳಿಸಿದ್ದಾರೆ.
ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ತೈಲ ಪೂರೈಕೆ ಸ್ಥಗಿತಗೊಂಡಿದ್ದು, ಪೆಟ್ರೋಲ್, ಡೀಸೆಲ್ ದರ ಗಗನಕ್ಕೇರಿದೆ. ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದ್ದು, ಸರ್ಕಾರಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಅಗತ್ಯವಸ್ತುಗಗಳ ಬೆಲೆ ಹೆಚ್ಚಳವಾಗಿದ್ದು, ಜನರು ಅನ್ನ, ಆಹಾರಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕಂಗಾಲಾದ ಜನರು ಇಂದು ಶ್ರೀಲಂಕಾ ಅಧ್ಯಕ್ಷರ ಮನೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್; ಮೂವರು ವಿದ್ಯಾರ್ಥಿಗಳು ಅರೆಸ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ