
ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವರು ಮತ್ತು ಶಾಸಕರುಗಳ ಜೊತೆ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದರು.
ಸಭೆಯಲ್ಲಿ ಚರ್ಚಿಸಲಾದ ಸಂಗತಿಗಳು…
*ಜಿಲ್ಲೆಯಲ್ಲಿ ಪ್ರಮುಖವಾಗಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳ ಸ್ಥಿತಿ ಗತಿ, ಕೃಷಿ ಚಟುವಟಿಕೆಗಳು ಮತ್ತು ಬಿಡುಗಡೆಯಾಗಿರುವ ಅನುದಾನದಲ್ಲಿ ಖರ್ಚಾಗಿರುವ ಹಣದ ಪ್ರಮಾಣ, ಕಾಮಗಾರಿ ಪೂರ್ಣಗೊಳಿಸಲು ಕಾಲಾವಧಿ ನಿಗಧಿ ಮಾಡುವ ಕುರಿತು.
*ಕ್ಷೇತ್ರವಾರು ಬಿಡುಗಡೆಯಾಗಿರುವ ಅನುದಾನ, ಇಲಾಖಾವಾರು ಅನುದಾನಗಳ ಬಗ್ಗೆ ಚರ್ಚೆ.
*ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳ ಜಾರಿಯ ಸ್ಥಿತಿ ಗತಿ.
*ಶಾಸಕರ ಅನುದಾನದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳು, ಪ್ರಮುಖವಾಗಿ ಕ್ಷೇತ್ರಕ್ಕೆ ಆಗಬೇಕಾದ ಕೆಲಸಗಳಿಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಮುಖ್ಯಮಂತ್ರಿಗಳು ಮಾಹಿತಿ ಪಡೆದು ಸಲಹೆ, ಸೂಚನೆಗಳನ್ನು ನೀಡಿದರು.
*ಗ್ಯಾರಂಟಿಗಳ ಯಶಸ್ವೀ ಜಾರಿಯಿಂದ ಜಿಲ್ಲೆಯ ಆರ್ಥಿಕತೆ ಮೇಲೆ ಆಗಿರುವ ಸಕಾರಾತ್ಮಕ ಪರಿಣಾಮಗಳ ಬಗ್ಗೆ ಶಾಸಕರುಗಳ ಗಮನ ಸೆಳೆದರು.
*ಸರ್ಕಾರ ಪ್ರತೀ ಕ್ಷೇತ್ರಕ್ಕೂ ಸಾವಿರ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕೆಲಸಗಳನ್ನು ಒದಗಿಸಿದ್ದು, ಇದನ್ನು ಕ್ಷೇತ್ರದ ಜನರ, ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಜೊತೆಗೆ ಅವರ ಫಲಾನುಭವಿಗಳ ಜೊತೆ ಸಂಪರ್ಕದಲ್ಲಿ ಇರುವಂತೆ ಸಿಎಂ ಸೂಚನೆ ನೀಡಿದರು.
*ಎಲ್ಲಾ ಕೆಡಿಪಿ ಸಭೆಗಳಲ್ಲೂ ಶಾಸಕರು, ಸಚಿವರು ಅರ್ಥಪೂರ್ಣವಾಗಿ ಪಾಲ್ಗೊಳ್ಳಬೇಕು. ಅದಕ್ಕೆ ಮೊದಲು ಜನರ ಸಮಸ್ಯೆಗಳ ಬಗ್ಗೆ, ಕಾಮಗಾರಿಗೆ ಇರುವ ತಾಂತ್ರಿಕ ತೊಂದರೆಗಳ ಬಗ್ಗೆ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ನಿಧಾನ ಧೋರಣೆ ಬಗ್ಗೆ ಎಡಿಪಿ ಸಭೆಗಳಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಲಾಯಿತು.