*ಹಣ, ಜಾತಿ-ಮದ್ಯದ ಪ್ರಭಾವ ಹೆಚ್ಚಳ*; *ಪ್ರಾಮಾಣಿಕರು, ಬಡವರಿಗೆ ರಾಜಕೀಯ ಪ್ರವೇಶ ಕಷ್ಟ: ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ: ಚುನಾವಣಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ಆಗದಿದ್ದರೆ ಸಮಾಜದಲ್ಲಿ ನಿಜವಾದ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇಂದಿನ ಚುನಾವಣೆಯಲ್ಲಿ ಹಣ, ಜಾತಿ ಮತ್ತು ಮದ್ಯದ ಪ್ರಭಾವ ಹೆಚ್ಚಾಗಿದ್ದು, ಪ್ರಾಮಾಣಿಕರು, ಬಡವರು, ಬುದ್ಧಿವಂತರು ಹಾಗೂ ಸಮಾಜ ಸೇವೆಯ ಆಶಯ ಹೊಂದಿರುವವರಿಗೆ ರಾಜಕೀಯ ಪ್ರವೇಶ ಕಷ್ಟವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜೆ.ಎಚ್. ಪಟೇಲ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಚುನಾವಣಾ ಸುಧಾರಣೆ ಯಾವುದೇ ಒಂದು ಪಕ್ಷ ಅಥವಾ ವ್ಯಕ್ತಿಗೆ ಸೀಮಿತವಾದ ವಿಚಾರವಲ್ಲ. ಇದು ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿದ್ದು, ಎಲ್ಲ ರಾಜಕೀಯ ಪಕ್ಷಗಳು, ಸಾರ್ವಜನಿಕರು, ಹೋರಾಟಗಾರರು ಹಾಗೂ ಸಾಮಾಜಿಕ ಕಾರ್ಯಕರ್ತರು ಮುಕ್ತ ಮನಸ್ಸಿನಿಂದ ಚರ್ಚಿಸಬೇಕು ಎಂದು ಹೇಳಿದರು.
ಇಂದಿನ ಚುನಾವಣಾ ವ್ಯವಸ್ಥೆ ರಾಜಕಾರಣಿಗಳನ್ನೇ ಅನಿವಾರ್ಯವಾಗಿ ಹೆಚ್ಚಿನ ಹಣ ಖರ್ಚು ಮಾಡುವ ಪರಿಸ್ಥಿತಿಗೆ ತಳ್ಳುತ್ತಿದೆ. ಚುನಾವಣಾ ಆಯೋಗ ನಿಗದಿಪಡಿಸಿರುವ ವೆಚ್ಚದ ಮಿತಿಯೊಳಗೆ ಮಾತ್ರ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರೆ ಅದನ್ನು ಜನರು ನಂಬುವ ಸ್ಥಿತಿಯಲ್ಲಿ ಇಲ್ಲ ಎಂದರು.
1983ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭವನ್ನು ಸ್ಮರಿಸಿದ ಸಿದ್ದರಾಮಯ್ಯ, ಜಾರ್ಜ್ ಫರ್ನಾಂಡಿಸ್ 10 ಸಾವಿರ ರೂಪಾಯಿ ನೀಡಿದ್ದರು ಎಂದು ಹೇಳಿದರು. ಹಳ್ಳಿಗಳಿಗೆ ಹೋದಾಗ ಜನರು 200, 500 ರೂಪಾಯಿಯಂತೆ ಚುನಾವಣೆಗೆ ಹಣ ನೀಡುತ್ತಿದ್ದರು. ಸುಮಾರು 63 ಸಾವಿರ ರೂಪಾಯಿಯಲ್ಲಿ ಚುನಾವಣೆ ಮುಗಿಸಿದ್ದಾಗಿ ತಿಳಿಸಿದರು.
1980ರಲ್ಲಿ ಲೋಕದಳದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗಲೂ ಹೆಚ್ಚಿನ ಹಣ ಇರಲಿಲ್ಲ. ಚೌಧರಿ ಚರಣ್ ಸಿಂಗ್ ಒಂದು ಲಕ್ಷ ರೂಪಾಯಿ ಕಳುಹಿಸಿದ್ದರು. ಆ ಹಣ ಮುಗಿದ ಬಳಿಕ ಜನರಿಗೆ ಟೀ ಕೊಡಿಸಲೂ ಹಣವಿಲ್ಲದ ಪರಿಸ್ಥಿತಿ ಎದುರಾಗಿತ್ತು ಎಂದು ನೆನಪಿಸಿಕೊಂಡರು.
ಆದರೆ ನಂತರದ ವರ್ಷಗಳಲ್ಲಿ ಚುನಾವಣಾ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗಳಾಗಿವೆ. 2006ರ ಚಾಮುಂಡೇಶ್ವರಿ ಉಪಚುನಾವಣೆಯ ವೇಳೆಗೆ ಹಣದ ಪ್ರಭಾವ ಹೆಚ್ಚಾಗಿತ್ತು. ಎದುರಾಳಿ ಅಭ್ಯರ್ಥಿಯ ಪರವಾಗಿ ದೊಡ್ಡ ಪ್ರಮಾಣದಲ್ಲಿ ಹಣ ಖರ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ತಾವೂ ಹಣ ಖರ್ಚು ಮಾಡಬೇಕಾದ ಅನಿವಾರ್ಯತೆ ಎದುರಾಯಿತು ಎಂದು ಸಿದ್ದರಾಮಯ್ಯ ಹೇಳಿದರು.
ಹಣವಿಲ್ಲದೆ, ಮದ್ಯ ಹಂಚದೆ ಮತ್ತು ಜಾತಿಯ ಲೆಕ್ಕಾಚಾರ ಮಾಡದೆ ಚುನಾವಣೆ ಎದುರಿಸುವುದು ಕಷ್ಟವಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಪ್ರಾಮಾಣಿಕರು, ಬಡವರು, ಬುದ್ಧಿವಂತರು ಹಾಗೂ ಸಮಾಜ ಸೇವೆಯ ಉದ್ದೇಶ ಹೊಂದಿರುವವರು ಚುನಾವಣಾ ರಾಜಕಾರಣದಿಂದ ದೂರ ಉಳಿಯುವಂತಾಗಿದೆ ಎಂದರು.
ಚುನಾವಣಾ ಸುಧಾರಣೆಗೆ ಈ ಹಿಂದೆಯೂ ಹಲವು ಸಮಿತಿಗಳು ರಚನೆಯಾಗಿದ್ದವು. ವಿ.ಪಿ. ಸಿಂಗ್ ಅವಧಿಯಲ್ಲಿ ದಿನೇಶ್ ಗೋಸ್ವಾಮಿ ಸಮಿತಿ, ಪಿ.ವಿ. ನರಸಿಂಹರಾವ್ ಅವಧಿಯಲ್ಲಿ ಎನ್.ಎನ್. ವೋಹ್ರಾ ಸಮಿತಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವಧಿಯಲ್ಲಿ ಇಂದ್ರಜಿತ್ ಗುಪ್ತಾ ಸಮಿತಿ ರಚಿಸಲಾಗಿತ್ತು ಎಂದು ಸಿದ್ದರಾಮಯ್ಯ ವಿವರಿಸಿದರು.
ಈ ಸಮಿತಿಗಳ ಶಿಫಾರಸುಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತಂದಿದ್ದರೆ ಚುನಾವಣಾ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತರಬಹುದಾಗಿತ್ತು. ಆದರೆ ಶಿಫಾರಸುಗಳು ಸಂಪೂರ್ಣವಾಗಿ ಜಾರಿಯಾಗಲಿಲ್ಲ ಎಂದು ಹೇಳಿದರು.
ಇಂದ್ರಜಿತ್ ಗುಪ್ತಾ ಸಮಿತಿ ಪ್ರಸ್ತಾಪಿಸಿದ್ದ ಮಾದರಿಯಲ್ಲಿ ಚುನಾವಣಾ ವೆಚ್ಚವನ್ನು ಸರ್ಕಾರವೇ ಭರಿಸುವ ವ್ಯವಸ್ಥೆ ಕುರಿತು ಗಂಭೀರವಾಗಿ ಚಿಂತಿಸಬೇಕು ಎಂದು ಸಲಹೆ ನೀಡಿದರು. ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುವುದರ ಜೊತೆಗೆ ರಾಜಕೀಯ ಪಕ್ಷಗಳ ನೀತಿ, ಸಿದ್ಧಾಂತ ಮತ್ತು ಕಾರ್ಯಕ್ರಮಗಳನ್ನು ಮಾಧ್ಯಮಗಳ ಮೂಲಕ ಮತದಾರರಿಗೆ ತಲುಪಿಸುವ ವ್ಯವಸ್ಥೆ ರೂಪಿಸಬೇಕು ಎಂದರು.
ಚುನಾವಣೆಗಳು ಸ್ವತಂತ್ರವಾಗಿ, ನಿಷ್ಪಕ್ಷಪಾತವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕು. ಇದಕ್ಕಾಗಿ ಕೇವಲ ಕಾನೂನು ಅಥವಾ ಚುನಾವಣಾ ಆಯೋಗದ ಮಟ್ಟದಲ್ಲಿ ಬದಲಾವಣೆ ಮಾಡಿದರೆ ಸಾಲದು. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಮತದಾರರ ಮನೋಭಾವದಲ್ಲಿಯೂ ಬದಲಾವಣೆ ಅಗತ್ಯ ಎಂದು ಹೇಳಿದರು.
ಚುನಾವಣೆಯಲ್ಲಿ ಅಭ್ಯರ್ಥಿಗಳು ಹಣ ನೀಡಿದಾಗ ಸ್ವೀಕರಿಸುವ ಮನೋಭಾವವೂ ಬದಲಾಗಬೇಕು. ಹಣ ಕೊಟ್ಟರೆ ತೆಗೆದುಕೊಳ್ಳೋಣ ಎಂಬ ಮನಸ್ಥಿತಿ ಮುಂದುವರಿದರೆ ಚುನಾವಣಾ ವ್ಯವಸ್ಥೆಯಲ್ಲಿನ ಸಮಸ್ಯೆ ನಿವಾರಿಸಲು ಸಾಧ್ಯವಿಲ್ಲ. ಮತದಾರರಲ್ಲಿ ಪ್ರಜಾಸತ್ತಾತ್ಮಕ ಜಾಗೃತಿ ಮತ್ತು ವೈಚಾರಿಕತೆ ಹೆಚ್ಚಬೇಕು ಎಂದರು.
ಶಿಕ್ಷಣದ ಪ್ರಮಾಣ ಹೆಚ್ಚಾಗಿದ್ದರೂ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಅದೇ ಪ್ರಮಾಣದಲ್ಲಿ ಬೆಳೆದಿಲ್ಲ. ವಿದ್ಯಾವಂತರಲ್ಲಿಯೂ ಜಾತಿ ಆಧಾರಿತ ಚಿಂತನೆ ಮುಂದುವರಿದಿದೆ. ಅಭ್ಯರ್ಥಿಯ ಅರ್ಹತೆ, ನೀತಿ ಮತ್ತು ಕಾರ್ಯಕ್ರಮಗಳಿಗಿಂತ ಜಾತಿಗೆ ಆದ್ಯತೆ ನೀಡುವ ಮನೋಭಾವ ಬದಲಾಗಬೇಕು ಎಂದು ಅಭಿಪ್ರಾಯಪಟ್ಟರು.
ರಾಜಕೀಯ ಪ್ರಜಾಪ್ರಭುತ್ವದ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯೂ ಅಗತ್ಯ. ಅಸಮಾನತೆ, ಜಾತೀಯತೆ ಮತ್ತು ಅಸ್ಪೃಶ್ಯತೆ ಮುಂದುವರಿದಿರುವಾಗ ಪ್ರಜಾಪ್ರಭುತ್ವದ ಆಶಯ ಸಂಪೂರ್ಣವಾಗಿ ಸಾಕಾರಗೊಂಡಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರನ್ನು ಸ್ಮರಿಸಿದ ಸಿದ್ದರಾಮಯ್ಯ, ಪಟೇಲರು ಸರಳ, ಧೈರ್ಯಶಾಲಿ, ನೇರ ನಡೆ-ನುಡಿಯ ಹಾಗೂ ಉತ್ತಮ ಸಂಸದೀಯ ಪಟುವಾಗಿದ್ದರು ಎಂದು ಹೇಳಿದರು. ರಾಜಕೀಯ ಜೀವನದ ಆರಂಭಿಕ ದಿನಗಳಲ್ಲಿಯೂ ಪಟೇಲರು ಪ್ರೋತ್ಸಾಹ ನೀಡಿದ್ದರು ಎಂದು ನೆನಪಿಸಿಕೊಂಡರು.
ಸಂಸತ್ತು, ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಗುಣಮಟ್ಟದ ಚರ್ಚೆಗಳು ಹೆಚ್ಚಾಗಬೇಕು. ಜೆ.ಎಚ್. ಪಟೇಲ್ ತೋರಿದ ಸಾರ್ವಜನಿಕ ಬದುಕಿನ ಮೌಲ್ಯಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು ಎಂದರು.
ಚುನಾವಣಾ ವ್ಯವಸ್ಥೆಯ ಸುಧಾರಣೆ ಕೇವಲ ರಾಜಕಾರಣದ ಸುಧಾರಣೆಯಲ್ಲ. ಅದು ಸಮಾಜದ ಸುಧಾರಣೆಗೂ ಅಗತ್ಯವಾಗಿದೆ. ಹಣ, ಜಾತಿ ಮತ್ತು ಇತರ ಆಮಿಷಗಳ ಪ್ರಭಾವದಿಂದ ಚುನಾವಣೆಯನ್ನು ಮುಕ್ತಗೊಳಿಸಲು ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಚರ್ಚಿಸಬೇಕು ಎಂದು ಕರೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




