
ಪ್ರಗತಿವಾಹಿನಿ ಸುದ್ದಿ: ಬಿಜೆಪಿಯವರು ತಮ್ಮ ಕಾಲದಲ್ಲಿ ನಡೆದ ಹಗರಣಗಳನ್ನು ಮುಚ್ಚಿಹಾಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಅವರು ಇಂದು ಚಿತ್ರದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಕಾಂಗ್ರೆಸ್ ಸರ್ಕಾರ ಬಿಜೆಪಿ ಸರ್ಕಾರದ ಹಿಂದಿನ ಹಗರಣಗಳನ್ನು ಬೆಳಕಿಗೆ ತರುತ್ತಿದೆ ಎಂಬ ವಿರೋಧ ಪಕ್ಷಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಹಾಗಾದರೆ ಅವುಗಳು ಹಗರಣಗಳಲ್ಲವೇ? ಹಗರಣಗಳು ಎಂದು ಅವರು ಒಪ್ಪುತ್ತಾರೆಯೇ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಇವುಗಳ ಬಗ್ಗೆ ತನಿಖೆ ನಡೆಯುತ್ತಿವೆ. ಅವುಗಳನ್ನು ಉಲ್ಲೇಖ ಮಾಡಿದ್ದು ಏಕೆಂದರೆ ಅವರ ಕಾಲದಲ್ಲಿ ಜಾರಿ ನಿರ್ದೇಶನಾಲಯ ಮಧ್ಯ ಪ್ರವೇಶ ಮಾಡಲಿಲ್ಲ. ಭೋವಿ ಅಭಿವೃದ್ಧಿ ನಿಗಮದಲ್ಲಿ 60 ಕೋಟಿ ರೂ.ಗಳನ್ನು ನುಂಗಿಹಾಕಿದ್ದಾರೆ. ದೇವರಾಜ ಅರಸ್ ಟ್ರಕ್ ಟರ್ಮಿನಲ್ ನಲ್ಲಿ 47 ಕೋಟಿ ರೂ.ಗಳಿಗೂ ಹೆಚ್ಚು ಹಣ ತಿಂದು ಜೈಲಿಗೆ ಹೋದವರು ಯಾವ ಪಕ್ಷವರು ? ಇದನ್ನೆಲ್ಲಾ ಹೇಳಬಾರದೆ? ಎಂದು ಪ್ರಶ್ನಿಸಿದ ಸಿಎಂ, ಈ ಹಗರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಆಗುತ್ತದೆ ಎಂದು ತಿರುಗೇಟು ನೀಡಿದರು.
ಬೆದರಿಸುತ್ತಿಲ್ಲ, ವಸ್ತುಸ್ಥಿತಿಯನ್ನು ಮುಂದಿಟ್ಟಿದ್ದೇನೆ
ಮುಖ್ಯಮಂತ್ರಿಗಳು ಬೆದರಿಸುತ್ತಿದ್ದಾರೆ ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಉತ್ತರಿಸಿದ ಸಿಎಂ ಬೆದರಿಸುತ್ತಿಲ್ಲ, ವಸ್ತುಸ್ಥಿತಿಯನ್ನು ಮುಂದಿಟ್ಟಿದ್ದೇನೆ ಎಂದರು.
ದೇವರಾಜ ಟ್ರಕ್ ಟರ್ಮಿನಲ್ ಅಧ್ಯಕ್ಷರಾಗಿದ್ದ ಡಿ.ಎಸ್.ವೀರಯ್ಯ ಹಾಗೂ ಎಂ.ಡಿ ಶಂಕರಪ್ಪ ಜೈಲಿಗೆ ಹೋಗಿದ್ದಾರೆ. ಅದನ್ನು ಯಾಕೆ ಪ್ರಸ್ತಾಪಿಸಿಲ್ಲ? ಅದು ಕೂಡ ತೆರಿಗೆ ಹಣವಲ್ಲವೇ? ವಿರೋಧ ಪಕ್ಷವಾಗಿ ಅದನ್ನು ಯಾಕೆ ಪ್ರಶ್ನಿಸಲಿಲ್ಲ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ