ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರ ಘೋಷಿಸಿರುವ ಅಲ್ಪ ಪ್ರಮಾಣದ ಬರ ಪರಿಹಾರ ವಿಚಾರವಾಗಿ ಕೆಂಡ ಕಾರಿರುವ ರಾಜ್ಯ ಕಾಂಗ್ರೆಸ್ ನಾಯಕರು ಮತ್ತೊಮ್ಮೆ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಕೇಂದ್ರ ನೀಡುತ್ತಿರುವ ಬರ ಪರಿಹಾರ ಬಹಳ ಕಡಿಮೆಯಾಯಿತು ಈ ಅನ್ಯಾಯದ ವಿರುದ್ಧ ಹೋರಾಟ ಮುಂದುವರೆಸುತ್ತೇವೆ ಎಂದಿರುವ ಸಿಎಂ ಸಿದ್ದರಾಮಯ್ಯ ನಾಳೆ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ, ಮಲತಾಯಿ ಧೋರಣೆ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸುತ್ತಲೇ ಇದೆ. ಬರ ಪರಿಹಾರ ನೀಡಲು ವಿಳಂಬ ಮಾಡುತ್ತಿದ್ದಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡ ಬಳಿಕ ಈಗ 3,464 ಕೋಟಿ ರೂಪಾಯಿ ಘೋಷಿಸಿದ್ದಾರೆ. ಇದು ಬಹಳ ಕಡಿಮೆ ಪರಿಹಾರವಾಯಿತು ಎಂದರು.
ಕೇಂದ್ರ ಸರ್ಕಾರಕ್ಕೆ ನಾವು ಕೇಳಿದ್ದು 18,172 ಕೋಟಿ ರೂಪಾಯಿ ಬರ ಪರಿಹಾರ. ಆದರೆ ಅವರು ಘೋಷಣೆ ಮಾಡಿದ್ದು ಕೇವಲ 3,464 ಕೋಟಿ ರೂಪಾಯಿ ಮಾತ್ರ. ಇದು ನಾವು ಮನವಿ ಮಾಡಿದ್ದ ಕಾಲು ಭಾಗದಷ್ಟೂ ಇಲ್ಲ. ಇಷ್ಟು ಕಡಿಮೆ ಪ್ರಮಾಣದ ಬರ ಪರಿಹಾರ ಯಾವುದಕ್ಕೂ ಸಾಲಲ್ಲ. ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಿ ನಮ್ಮ ಆಕ್ರೋಶ ವ್ಯಕ್ತಪಡಿಸಲಿದ್ದೇವೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ