Latest

ಸಿಎಂಗೆ ಸಿದ್ದರಾಮಯ್ಯ ಮತ್ತೊಂದು ಪತ್ರ

ಜೀವವನ್ನು ಪಣಕ್ಕೊಡ್ಡಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಅತ್ಯಂತ ಅಮಾನವೀಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು : ಸರ್ಕಾರ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿರುವ ಮತ್ತು ಕರ್ತವ್ಯದ ವೇಳೆ ಮರಣ ಹೊಂದಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಕುಟುಂಬದವರಿಗೆ ಕೂಡಲೇ ಪರಿಹಾರ ವಿತರಿಸುವಂತೆ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ಕೊರೊನಾ ವಾರಿಯರ್ಸ್‍ಗೆ ಬಾಕಿ ಉಳಿಸಿಕೊಂಡಿರುವ ವೇತನವನ್ನೂ ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.

Related Articles

ಕೊರೊನಾ ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತಿಗಳ ತಳ ಮಟ್ಟದ ಸಿಬ್ಬಂದಿಗಳು, ಶಿಕ್ಷಕರು, ಆರೋಗ್ಯ ಇಲಾಖೆ, ಪೊಲೀಸ್, ಕಂದಾಯ, ಸಾರಿಗೆ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳು, ಪಶುವೈದ್ಯರು ಮುಂತಾದವರು ನೇರವಾಗಿ ಜನರ ಜೊತೆ ಇದ್ದು ಕೆಲಸ ಮಾಡುತ್ತಿದ್ದಾರೆ. ಇವರುಗಳಿಗೆ ವಿಶೇಷ ರಕ್ಷಣೆಯನ್ನು ನೀಡಬೇಕಾದುದು ಸರ್ಕಾರದ ಜವಾಬ್ಧಾರಿ. ಆದರೆ ಸರ್ಕಾರ ಇನ್ನೂ ಸಹ ಹಲವು ಇಲಾಖೆಗಳ ಸಿಬ್ಬಂದಿಗಳನ್ನು ಕೊರೋನ ವಾರಿಯರ್ಸ್ ಎಂದು ಘೋಷಣೆ ಮಾಡಿಲ್ಲ. ಈಗಾಗಲೇ ಕೊರೋನ ವಾರಿಯರ್ಸ್ ಎಂದು ಘೋಷಿಸಿರುವವರಿಗೆ ಕಳೆದ ಎರಡು ಮೂರು ತಿಂಗಳಿಂದ ಸಂಬಳವನ್ನೂ ನೀಡಿಲ್ಲ. ಜೊತೆಗೆ ಜನರ, ರೋಗಿಗಳ ಸಂಪರ್ಕದಲ್ಲಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ, ಸರ್ಕಾರದ ತಳ ಮಟ್ಟದ ಸಿಬ್ಬಂದಿಗಳಿಗೆ ಕೊರೋನಾದಿಂದ ರಕ್ಷಣೆ ಪಡೆಯಲು ನೀಡಬೇಕಾದ ಮಾಸ್ಕು, ಸ್ಯಾನಿಟೈಸರ್, ಕೈಗವಸು ಮುಂತಾದ ಮೂಲಭೂತವಾದ ಸಾಮಗ್ರಿಗಳನ್ನೂ ನೀಡಿಲ್ಲ ಎಂದು ಗುಡುಗಿದ್ದಾರೆ.

ಜೀವವನ್ನು ಪಣಕ್ಕೊಡ್ಡಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಅತ್ಯಂತ ಅಮಾನವೀಯವಾಗಿದೆ. ದೇಶದ ರಾಜ್ಯಗಳಲ್ಲೆ ಆರ್ಥಿಕ ಸ್ಥಿತಿಯಲ್ಲಿ ಮೊದಲೆರಡು ಸ್ಥಾನಗಳಲ್ಲೇ ಇರುವ ಕರ್ನಾಟಕದಲ್ಲಿ ಕನಿಷ್ಠ ಮಾಸ್ಕು, ಸ್ಯಾನಿಟೈಸರ್ ನೀಡುವಷ್ಟು ಹೃದಯವಂತಿಕೆ, ಕರ್ತವ್ಯ ಪ್ರಜ್ಞೆ, ಉದಾರತೆಗಳನ್ನು ಆಡಳಿತ ನಡೆಸುವ ಸರ್ಕಾರ ಕಳೆದುಕೊಂಡಿರುವುದು ಅತ್ಯಂತ ಬೇಜವಾಬ್ಧಾರಿಯುತವಾದ ಹಾಗೂ ಅವಮಾನಕರವಾದ ಸಂಗತಿ. ಆದ್ದರಿಂದ ಕೂಡಲೇ ಅವರ ಬೇಡಿಕೆಗಳನ್ನು ಪರಿಗಣಿಸಿ ಈಡೇರಿಸಬೇಕೆಂದು ಆಗ್ರಹಿಸುತ್ತೇನೆ. ಜನರ ಜೊತೆ ನೇರ ಸಂಪರ್ಕದಲ್ಲಿದ್ದುಕೊಂಡು ಕೆಲಸ ಮಾಡುವ ಪಶು ವೈದ್ಯರು ಸೇರಿದಂತೆ ಇತರೆ ಎಲ್ಲರನ್ನು ಕೊರೋನ ವಾರಿಯರ್ಸ್ ಎಂದು ಅಧಿಸೂಚನೆ ಹೊರಡಿಸಿ ಅಗತ್ಯ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪತ್ರದ ಪ್ರಮುಖ ಅಂಶಗಳು:

* ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟೈಸರ್, ಕೈಗವಸು, ಅಗತ್ಯ ಔಷಧಗಳನ್ನು ನೀಡಬೇಕು

* ಕೊರೊನ ವಾರಿಯರ್ಸ್ ಎಂದು ಘೋಷಣೆ ಮಾಡಿದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಇತರೆ ಸಿಬ್ಬಂದಿಗಳಲ್ಲಿ ಹಲವರು ಮರಣ ಹೊಂದಿದ್ದಾರೆ. ಅಂತವರ ಕುಟುಂಬಗಳಿಗೆ ಕೂಡಲೇ ಪರಿಹಾರ ನೀಡಬೇಕು.

* ಈ ಎಲ್ಲ ಸಿಬ್ಬಂದಿಗಳಿಗೆ ಮಾರ್ಚ್ ತಿಂಗಳಿಂದ ಸಂಬಳವನ್ನೇ ನೀಡಿಲ್ಲ. ಕೂಡಲೇ ಎಲ್ಲರಿಗೆ ಸಂಬಳ ಬಿಡುಗಡೆ ಮಾಡಬೇಕು.

* ಪಲ್ಸ್ ಆಕ್ಸಿಮೀಟರ್‍ನಂಥ ಅತ್ಯಂತ ಅಗತ್ಯ ಸಾಮಗ್ರಿಗಳನ್ನು ಕೋವಿಡ್ ವಾರಿಯರ್ಸ್‍ಗಳಿಗೆ ಒದಗಿಸಿಕೊಡಬೇಕು.

* ಸೂಕ್ತವಾದ ಸಂಬಳ, ಗೌರವಧನ, ಸಂಭಾವನೆಯನ್ನು ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಉಚಿತ ವ್ಯಾಕ್ಸಿನ್ ಖಾಸಗಿ ಆಸ್ಪತ್ರೆಗೆ ಮಾರಾಟ; ಶಾಸಕರ ವಿರುದ್ಧ ಗಂಭೀರ ಆರೋಪ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button