
ಪ್ರಗತಿವಾಹಿನಿ ಸುದ್ದಿ: ಇಂದು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರುಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಿದರು.
ಸಭೆಯಲ್ಲಿ ಚರ್ಚಿಸಿದ ಪ್ರಮುಖ ಅಂಶಗಳು:
*ಎಲ್ಲಾ ಕೆಡಿಪಿ ಸಭೆಗಳಲ್ಲೂ ಶಾಸಕರು, ಸಚಿವರು ಅರ್ಥಪೂರ್ಣವಾಗಿ ಪಾಲ್ಗೊಳ್ಳಬೇಕು. ಅದಕ್ಕೆ ಮೊದಲು ಜನರ ಸಮಸ್ಯೆಗಳ ಬಗ್ಗೆ, ಕಾಮಗಾರಿಗೆ ಇರುವ ತಾಂತ್ರಿಕ ತೊಂದರೆಗಳ ಬಗ್ಗೆ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ನಿಧಾನ ಧೋರಣೆ ಬಗ್ಗೆ ಎಡಿಪಿ ಸಭೆಗಳಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಲಾಯಿತು.
*ರಾಜ್ಯದ ಜನರ ತಲಾ ಆದಾಯ ಇಡೀ ದೇಶದಲ್ಲಿ ನಂಬರ್ ಒನ್ ಆಗಿದೆ. ಇದನ್ನು ನಾವೆಲ್ಲಾ ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಕ್ಷೇತ್ರದ ಮತದಾರರಿಗೆ ಅರ್ಥ ಮಾಡಿಸಬೇಕು. ರಾಜ್ಯದ ಈ ಆರ್ಥಿಕ ಸಾಧನೆಗೆ ನಾವು ಜಾರಿ ಮಾಡಿದ ಐದು ಗ್ಯಾರಂಟಿಗಳು ನೇರ ಕಾರಣವಾಗಿದೆ ಎನ್ನುವುದನ್ನು ರಾಜ್ಯದ ಜನತೆಗೆ ಅರ್ಥ ಮಾಡಿಸುವ ಕೆಲಸ ಇನ್ನಷ್ಟು ರಭಸವಾಗಿ ನಡೆಯಬೇಕು.
*ಕೇಂದ್ರದ ಅಸಹಕಾರ ಇದ್ದರೂ ನಮ್ಮ ರೈತರಿಗೆ ಸಮಸ್ಯೆ ಆಗಬಾರದು. ಮುಂಗಾರು ಹಂಗಾಮಿಗೆ 11.17 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಬೇಕಾಗಿದೆ. ಏಪ್ರಿಲ್ ನಿಂದ ಜುಲೈ ವರೆಗೆ 6.81 ಲಕ್ಷ ಮೆಟ್ರಿಕ್ ಟನ್ ಬೇಕಾಗುತ್ತದೆ. ಆದರೆ ಕೇಂದ್ರ ಸರ್ಕಾರ ಸರಬರಾಜು ಮಾಡಿದ್ದು 5.17 ಲಕ್ಷ ಮೆಟ್ರಿಕ್ ಟನ್. ಈ ವರ್ಷ 2 ಲಕ್ಷ ಹೆಕ್ಟೇರ್ ಮುಸುಕಿನ ಜೋಳ ಹೆಚ್ಚಾಗಿ ಬಿತ್ತನೆ ಮಾಡಲಾಗಿದೆ. ಹಾಗಾಗಿ, ಹೆಚ್ಚಿನ ಬೇಡಿಕೆ ಇದೆ. ಆದರೆ, ಯೂರಿಯಾ ಸರಬರಾಜನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿದೆ. ನಮಗೆ ಬರಬೇಕಾದ ಯೂರಿಯಾ ಪ್ರಮಾಣದಲ್ಲಿ 1.66 ಲಕ್ಷ ಮೆಟ್ರಿಕ್ ಟನ್ ಕಡಿಮೆ ಆಗಿದೆ. ಆದರೂ ಬಿಜೆಪಿ ಯವರು ಪ್ರತಿಭಟನೆ ಮಾಡುತ್ತಿರುವುದು ರಾಜಕೀಯ ದುರುದ್ದೇಶ ಹಾಗೂ ನಾಚಿಕೆಗೇಡಿತನದ ಕ್ರಮವಾಗಿದೆ. ಇದನ್ನು ನೀವುಗಳು ಕ್ಷೇತ್ರದ ಜನತೆಗೆ ಅರ್ಥ ಮಾಡಿಸಬೇಕು. ಕೇಂದ್ರ ಸರ್ಕಾರದ ಅಸಹಾಕಾರದ ನಡುವೆಯೂ ನಮ್ಮ ರೈತರಿಗೆ ಸಮಸ್ಯೆ ಆಗದಂತೆ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಬೇಕು.
*ಹಿಂದಿನ ಬಿಜೆಪಿ ಸರ್ಕಾರದ ಲೋಪಗಳನ್ನು ನಾವು ಸರಿ ಮಾಡುವ ಜೊತೆಗೆ ಆರ್ಥಿಕತೆಗೆ ಚೈತನ್ಯ ನೀಡುತ್ತಿದ್ದೇವೆ. ಹಿಂದಿನ ಬಿಜೆಪಿ ಸರ್ಕಾರ 2,70,695 ಕೋಟಿ ರೂಪಾಯಿ ಕಾಮಗಾರಿಗಳನ್ನು ತೆಗೆದುಕೊಂಡು ಅನುದಾನ ಒದಗಿಸದೆ ಟೆಂಡರ್‌ಗಳನ್ನು ಕರೆದಿದ್ದರು. ಅಲ್ಲದೆ, 1,66,426 ಕೋಟಿ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ಕಾಮಗಾರಿಗಳನ್ನು ತೆಗೆದುಕೊಂಡು 72,000 ಕೋಟಿಗೂ ಹೆಚ್ಚು ಬಿಲ್ ಗಳನ್ನು ಬಿಟ್ಟು ಹೋಗಿದ್ದರು.
*ಕೇಂದ್ರ ಸರ್ಕಾರವು 15 ನೇ ಹಣಕಾಸು ಆಯೋಗದ ವರದಿಯ ನೆಪದಲ್ಲಿ ಶೇ.23 ರಷ್ಟು ತೆರಿಗೆ ಪಾಲು ಕಡಿಮೆ ಮಾಡಿದೆ. ರಾಜ್ಯಕ್ಕೆ ಈ 5 ವರ್ಷಗಳಲ್ಲಿ 68,000 ಕೋಟಿಗೂ ಹೆಚ್ಚು ನಷ್ಟವಾಗಿದೆ. ಇದನ್ನು ಕ್ಷೇತ್ರದ ಮತದಾರರಿಗೆ ಅರ್ಥ ಮಾಡಿಸುವ ಜೊತೆಗೆ ನೀವುಗಳೂ ಅರ್ಥ ಮಾಡಿಕೊಳ್ಳಬೇಕು.
*ಇಷ್ಟರ ನಡುವೆ, ನಾವು ಗ್ಯಾರಂಟಿ ಯೋಜನೆಗಳಿಗಾಗಿ ವರ್ಷಕ್ಕೆ 52,000 ಕೋಟಿ ಖರ್ಚು ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳು ಹಾಗೂ ಸಾಮಾಜಿಕ ಪಿಂಚಣಿಗಳು, ಸಹಾಯಧನಗಳು, ಪ್ರೋತ್ಸಾಹ ಧನಗಳು ಹಾಗೂ ಫಲಾನುಭವಿಗಳಿಗೆ ನೇರವಾಗಿ ತಲುಪುವ ಯೋಜನೆಗಳಿಗಾಗಿ ಪ್ರತಿ ವರ್ಷ 1.12 ಲಕ್ಷ ಕೋಟಿ ಖರ್ಚು ಮಾಡುತ್ತಿದ್ದೇವೆ.
*ಅಲ್ಲದೆ, ಈ ವರ್ಷ 1,24,440 ಕೋಟಿ ವೇತನ ಮತ್ತು ಪಿಂಚಣಿಗಳಿಗಾಗಿ ವಿನಿಯೋಗಿಸುತ್ತಿದ್ದೇವೆ. 7ನೇ ವೇತನ ಆಯೋಗವನ್ನು ಅನುಷ್ಠಾನ ಮಾಡಿದ್ದರಿಂದ ವೇತನ ಮತ್ತು ಪಿಂಚಣಿಗಳ ಮೊತ್ತ ಹೆಚ್ಚಾಗಿದೆ.
*ಇಷ್ಟರ ನಡುವೆಯೂ ನಮ್ಮ ಸರ್ಕಾರವು ಈ ವರ್ಷ ಬಂಡವಾಳ ವೆಚ್ಚಗಳಿಗಾಗಿ 83,200 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಇದು ನಮ್ಮ ಬಜೆಟ್‌ನ ಶೇ.20.03 ರಷ್ಟು. ಇದು ದೇಶದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿದೆ.
*ರಾಜ್ಯ ಸರ್ಕಾರ ಮಾಡಿರುವ ಸಾಲದ ಬಡ್ಡಿ ತೀರಿಸುವುದಕ್ಕಾಗಿ 45,600 ಕೋಟಿ ರೂ.ಗಳು ವೆಚ್ಚವಾಗುತ್ತಿದೆ.
*ಈ ಸಂಕಷ್ಟಗಳ ಮಧ್ಯೆಯೂ ನಾವು ಚುನಾವಣೆಗೆ ಮೊದಲು ಕೊಟ್ಟ ಆಶ್ವಾಸನೆಗಳ ಪ್ರಕಾರ ಎಲ್ಲಾ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೇವೆ. ನಾವು ಜಾರಿಗೆ ತಂದ ಯೋಜನೆಗಳಿಂದಾಗಿ ಇಂದು ತಲಾದಾಯದ ವಿಚಾರದಲ್ಲಿ ನಮ್ಮ ರಾಜ್ಯ ದೇಶದಲ್ಲಿಯೆ ಮೊದಲ ಸ್ಥಾನದಲ್ಲಿದೆ. ಇತ್ತೀಚಿಗೆ ಕೇಂದ್ರ ಸರ್ಕಾರವು 2024-25ಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ನೀಡಿರುವ ಉತ್ತರದ ಪ್ರಕಾರ ರಾಜ್ಯದ ತಲಾದಾಯವು ಸ್ಥಿರ ಬೆಲೆಗಳಲ್ಲಿ 2,04,605 ರೂಪಾಯಿ ಗಳಷ್ಟಿದೆ.
*ಇತ್ತೀಚಿಗೆ ಶಕ್ತಿ ಯೋಜನೆ ಮೇಲೆ ನಡೆದಿರುವ ಅಧ್ಯಯನಗಳ ಪ್ರಕಾರ, ಶಕ್ತಿ ಯೋಜನೆಯಿಂದ ಮಹಿಳೆಯರ ಉದ್ಯೋಗದ ಪ್ರಮಾಣ ಬೆಂಗಳೂರಿನಲ್ಲಿ ಶೇ.23 ರಷ್ಟು, ಧಾರವಾಡದಲ್ಲಿ ಶೇ.21 ರಷ್ಟು ಹೆಚ್ಚಾಗಿದೆ ಎಂದು ವರದಿ ಮಾಡಿದ್ದಾರೆ.
*ಇವೆಲ್ಲವೂ ಆಶಾದಾಯಕವಾದ ಸಂಗತಿಗಳಾಗಿವೆ. ಕೇಂದ್ರ ಸರ್ಕಾರದ ಅಸಹಕಾರ, ಹಿಂದಿನ ಸರ್ಕಾರದ ಆರ್ಥಿಕ ದುರಾಡಳಿತ, ಅಶಿಸ್ತುಗಳಿಂದಾಗಿ ರಾಜ್ಯದ ಆರ್ಥಿಕತೆಯು ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದರೂ ಸಹ ದಿನೇ ದಿನೇ ರಾಜ್ಯದ ಆಡಳಿತವನ್ನು ಉತ್ತಮ ದಿಕ್ಕಿನ ಕಡೆ ನಡೆಸುತ್ತಿದ್ದೇವೆ. ಇದಕ್ಕೆ ನೀವೆಲ್ಲರೂ ಸಹಕಾರ ನೀಡುತ್ತಿರುವುದಕ್ಕೆ ಧನ್ಯವಾದಗಳು, ಇದರ ನಡುವೆಯೂ ವಿಶೇಷ ಅನುದಾನದ ರೂಪದಲ್ಲಿ 50 ಕೋಟಿ ರೂಪಾಯಿಗಳನ್ನು ನೀಡುತ್ತಿದೇವೆ. ಇದನ್ನು ಶೇ.100 ರಷ್ಟು ಸದ್ಬಳಕೆ ಮಾಡಿಕೊಳ್ಳಬೇಕೆಂದು ವಿನಂತಿಸುತ್ತೇನೆ.
*ಜಿಲ್ಲೆಯಲ್ಲಿ ಪ್ರಮುಖವಾಗಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳ ಸ್ಥಿತಿ ಗತಿ, ಕೃಷಿ ಚಟುವಟಿಕೆಗಳು ಮತ್ತು ಬಿಡುಗಡೆಯಾಗಿರುವ ಅನುದಾನದಲ್ಲಿ ಖರ್ಚಾಗಿರುವ ಹಣದ ಪ್ರಮಾಣ, ಕಾಮಗಾರಿ ಪೂರ್ಣಗೊಳಿಸಲು ಕಾಲಾವಧಿ ನಿಗಧಿ ಮಾಡುವ ಕುರಿತು ಅಧಿಕಾರಿಳನ್ನು ಚುರುಕುಗೊಳಿಸಿ.
*ಕ್ಷೇತ್ರವಾರು ಬಿಡುಗಡೆಯಾಗಿರುವ ಅನುದಾನ, ಇಲಾಖಾವಾರು ಅನುದಾನಗಳ ಬಗ್ಗೆ ಚರ್ಚೆ. ಚುನಾವಣೆ ವೇಳೆ ನಾವು ಕ್ಷೇತ್ರದಲ್ಲಿ ಕೊಟ್ಟ ಆಶ್ವಾಸನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು. ಜೊತೆಗೆ ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳ ಜಾರಿಯ ಸ್ಥಿತಿ ಗತಿ ಬಗ್ಗೆ ತೀವ್ರ ಗಮನ ಹರಿಸುವಂತೆ ಸೂಚಿಸಿದರು.