Politics

*ಪಿಂಚಣಿಗಳ ವಿಲೇ ಅವಧಿ ಇಳಿಕೆ: ಅನರ್ಹ ಬಿಪಿಎಲ್ ಕಾರ್ಡ್ ರದ್ದು; ಸಿಎಂ ಸೂಚನೆ*

ಪ್ರಗತಿವಾಹಿನಿ ಸುದ್ದಿ: ಇದು ಅಧಿಕಾರಿಗಳನ್ನು ಟೀಕೆ ಮಾಡಲು ಕರೆದ ಸಭೆ ಅಲ್ಲ. ಜಿಲ್ಲೆಯಲ್ಲಿ ಅಭಿವೃದ್ಧಿ ಯಾವ ರೀತಿ ಮಾಡಿದ್ದೀರಿ ಎಂದು ಪರಿಶೀಲಿಸಲು ಕರೆದ ಸಭೆ ಇದು. ಪ್ರತಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಡಿಸಿ, ಸಿಈಓ, ಎಸ್ಪಿ ಇವರ ಪಾತ್ರ ದೊಡ್ಡದು. ಇವರು ಮೂರು ಜನ ಸಮನ್ವಯದಿಂದ ಬೇರೆ ಅಧಿಕಾರಿಗಳನ್ನು ಜೊತೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರೆ ಅಭಿವೃದ್ಧಿ ವೇಗವಾಗಿ ಮಾಡಲು ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ತಿಳಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದ ಪ್ರಮುಖ ಸೂಚನೆಗಳು ಇಲ್ಲಿವೆ.

ರಾಜ್ಯದಲ್ಲಿ 2225 ಗ್ರಾಮಗಳು ಮತ್ತು 2038334 ಜನರು ಪ್ರವಾಹ, ಭೂ ಕುಸಿತಕ್ಕೆ ಪ್ರತೀ ವರ್ಷ ತುತ್ತಾಗುತ್ತಾರೆ. ನಿಮ್ಮ ನಿಮ್ಮ ಜಿಲ್ಲೆಗಳಲ್ಲಿನ ಸಂತ್ರಸ್ಥ. ಗ್ರಾಮಗಳನ್ನು ಗುರುತಿಸಿ ಅವರಿಗೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಿ ಎಂದು ಸಿಎಂ ಸೂಚಿಸಿದರು

ಈ ವರ್ಷ ಮಳೆಯಿಂದ ಮನೆ, ಬೆಳೆ ಹಾನಿ ಆಗಿರುವವರಿಗೆ SDRF ಪ್ರಕಾರ ಪರಿಹಾರವನ್ನು ಕೂಡಲೇ ಇತ್ಯರ್ಥ ಮಾಡಿ ಎನ್ನುವ ಸೂಚನೆ ನೀಡಿದರು

ಪಿಂಚಣಿ ಅರ್ಜಿಗಳು ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಬಾಕಿ ಇವೆ ಎನ್ನುವ ಪಟ್ಟಿ ಪ್ರಸ್ತಾಪಿಸಿದ ಸಿಎಂ ಆಯಾ ಜಿಲ್ಲಾಧಿಕಾರಿಗಳಿಗೆ ಕಾಲಮಿತಿಯೊಳಗೆ ಇತ್ಯರ್ಥ ಮಾಡಬೇಕು ಎನ್ನುವ ಸೂಚನೆ ನೀಡಿದ ಸಿಎಂ, ಕಾಲ ಮಿತಿ ಮೀರಿದ ಅರ್ಜಿಗಳು ಏಕೆ ಇದೆ ಎಂದು ಆಯಾ ಜಿಲ್ಲಾಧಿಕಾರಿಗಳಿಗೆ ಖಾರವಾಗಿ ಪ್ರಶ್ನಿಸಿ ಇತ್ಯರ್ಥ ಮಾಡಲು ಸೂಚಿಸಿದರು

ಪಿಂಚಣಿ ಗಳ ವಿಲೇ ಅವಧಿ ಸದ್ಯ 45 ದಿನ ಇದೆ. ಇದನ್ನು 30 ದಿನಕ್ಕೆ ಇಳಿಸಲಾಗುವುದು ಎಂದು ಸಿಎಂ ತಿಳಿಸಿದರು

ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಕಾನೂನು ಪ್ರಕಾರವೇ ಉದಾರತನದಿಂದ ವರ್ತಿಸಿ ಪರಿಹಾರ ನೀಡಿ ಎನ್ನುವ ಸೂಚನೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಿಎಂ ನೀಡಿ, ಸಣ್ಣ ಪುಟ್ಟ ತಾಂತ್ರಿಕ ಕಾರಣಗಳಿಗಾಗಿ ರೈತರ ಆತ್ಮಹತ್ಯೆ ಪರಿಹಾರದ ಅರ್ಜಿಗಳನ್ನು ತಿರಸ್ಕರಿಸದೆ ಉದಾರವಾಗಿ ವರ್ತಿಸಿ ರೈತ ಕುಟುಂಬಗಳಿಗೆ ಸಹಾಯ ಮಾಡಿ ಎಂದರು

ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನೋಂದಣಾಧಿಕಾರಿಗಳ ಕಚೇರಿಗಳಿಗೆ ಪ್ರತಿ ತಿಂಗಳು ಕೋಟಿಗಟ್ಟಲೆ ಬಾಡಿಗೆ ನೀಡುತ್ತಿದ್ದೇವೆ. ಇವರಿಗೆ ಸ್ವಂತ ಕಟ್ಟಡ ಕೊಡಿ. ಸ್ವಂತ ಕಟ್ಟಡದ ಅವಕಾಶ ಇಲ್ಲದಿದ್ದರೆ ಜಾಗ ನೀಡಿ ಕಟ್ಟಡ ಕಟ್ಟಿಸಿ. ಇದರಿಂದ ನಮಗೆ ವರ್ಷಕ್ಕೆ 40-50 ಕೋಟಿ ಬಾಡಿಗೆ ಹಣ ಉಳಿತಾಯವಾಗುತ್ತದೆ ಎಂದು ಸೂಚನೆ ನೀಡಿದರು.

ಬಿಪಿಎಲ್‌ ಕಾರ್ಡು

ರಾಜ್ಯದಲ್ಲಿ ಶೇ. 80 ರಷ್ಟು ಬಿಪಿಎಲ್‌ ಕಾರ್ಡುಗಳನ್ನು ಹೊಂದಿದ್ದಾರೆ. ತಮಿಳುನಾಡಿನಲ್ಲಿ ಶೇ.40 ರಷ್ಟಿದೆ. ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ.5.67 ಇರಬೇಕು. ಆದರೆ ರಾಜ್ಯದಲ್ಲಿ 1.27 ಕೋಟಿ ಕುಟುಂಬಗಳಿಗೆ ಬಿಪಿಎಲ್‌ ಕಾರ್ಡ್‌ ನೀಡಿದ್ದೇವೆ. ಅನರ್ಹ ಬಿ.ಪಿ.ಎಲ್. ಕಾರ್ಡುಗಳನ್ನು ರದ್ದು ಪಡಿಸಿ, ಅರ್ಹರಿಗೆ ಬಿಪಿಎಲ್‌ ಕಾರ್ಡು ಒದಗಿಸಬೇಕು ಎಂದು ಸಿಎಂ ಸೂಚಿಸಿದರು

ಜನರನ್ನು ಅನಗತ್ಯವಾಗಿ ಅಲೆದಾಡಿಸಬೇಡಿ. ಅವರ ದೂರುಗಳನ್ನು ಆಲಿಸಿ, ಅಗತ್ಯ ಪರಿಹಾರ ಒದಗಿಸಬೇಕು

ರಾಜ್ಯದಲ್ಲಿ ಈ ಬಾರಿ ಬರ ನಿರ್ವಹಣೆಯನ್ನು ಉತ್ತಮವಾಗಿ ಮಾಡಿದ್ದೇವೆ. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಸಮಸ್ಯಾತ್ಮಕ ಗ್ರಾಮಗಳನ್ನು ಮೊದಲೇ ಗುರುತಿಸಿ ಪರ್ಯಾಯ ವ್ಯವಸ್ಥೆ ಮಾಡಿದ ಕಾರಣ ಎಲ್ಲೂ ಹೆಚ್ಚು ತೊಂದರೆಯಾಗಿಲ್ಲ. ಬರ ನಿರ್ವಹಣೆಗೆ 85 ಕೋಟಿ ವೆಚ್ಚವಾಗಿದ್ದು, ಪಾರದರ್ಶಕವಾಗಿ ಮಾಡಲಾಗಿದೆ. 783 ಕೋಟಿ ಜಿಲ್ಲಾಧಿಕಾರಿ ಖಾತೆಯಲ್ಲಿ ಲಭ್ಯವಿದೆ. ರಾಜ್ಯದಲ್ಲಿ ಪ್ರಸ್ತುತ ಮುಂಗಾರು ಅವಧಿಯಲ್ಲಿ ಇದುವರೆಗೆ ಶೇ.7ರಷ್ಟು ಹೆಚ್ಚು ಮಳೆಯಾಗಿದೆ. ಈ ವರ್ಷ ಮಳೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅತಿವೃಷ್ಟಿಯಿಂದ ಸಮಸ್ಯೆಯಾಗುವ ಗ್ರಾಮಗಳನ್ನು ಗುರುತಿಸಲಾಗಿದೆ 225 ಅಂತಹ ಜಲಾಗ್ರಾಮಗಳನ್ನು 1247ಗ್ರಾಮ ಪಂಚಾಯತ್‌ ಗುರುತಿಸಲಾಗಿದೆ. ಪ್ರತಿಯೊಂದು ಗ್ರಾಂ ಪಂಚಾಯತ್‌ ನಲ್ಲಿ ಟಾಸ್ಕ್‌ ಪೋಸ್ಟ್‌ ರಚನೆ. ಕಂದಾಯ ಇಲಾಖೆ, ಪಂಚಾಯತ್‌, ಪೋಲಿಸ್‌, ಅಗ್ನಿಶಾಮಕ, ಆರೋಗ್ಯ ಸೇರಿದಂತೆ ತಾಲೂಕು ಒಬ್ಬರಂತೆ ನೋಡಲ್‌ ಅಧಿಕಾರಿ ನೇಮಕ. ಎಲ್ಲಾ ಕಡೆ ಅಣಕುಪ್ರದರ್ಶನ ಮಾಡಲಾಗುತ್ತಿದೆ. ಎಲ್ಲಾ ಸಲಕರಣೆ ಲಭ್ಯವಾಗಿಡುವಂತೆ ಸೂಚನೆ ನೀಡಲಾಯಿತು. ಬೆಳೆ ಹಾನಿ, ಮನೆ ಹಾನಿ ಎಸ್‌ಡಿಆರ್‌ಎಫ್‌ ಪ್ರಕಾರ ನೀಡಲು ಸೂಚನೆ ನೀಡಲಾಗಿದೆ. ಜಿಲ್ಲಾಡಳಿತ ಮುಂಜಾಗರೂಕತೆ ವಹಿಸಲು ಸೂಚನೆ ನೀಡಲಾಗಿದೆ. ಪ್ರಾಣ ಹಾನಿ ತಪ್ಪಿಸುವುದು ಆದ್ಯತೆಯಾಗಬೇಕು. 27 ಜಿಲ್ಲೆ 177 ತಾಲೂಕುಗಳು, 1247 ಗ್ರಾಮ ಪಂಚಾಯತ್‌ಗಳಲ್ಲಿ ಅತಿವೃಷ್ಟಿಗೆ ತುತ್ತಾಗುವುದನ್ನು ಗುರುತಿಸಲಾಗಿದ್ದು, ಪ್ರತಿ ಕಡೆ ಟಾಸ್ಕ್‌ಪೋರ್ಸ್‌ ರಚಿಸಬೇಕು. 20,38,334 ಜನರು ಪದೇ ಪದೇ ಪ್ರವಾಹಕ್ಕೆ ತುತ್ತಾಗುವುದನ್ನು ಗುರುತಿಸಲಾಗಿದೆ. ಅಂತಹ ಜನರನ್ನು ಬೇರೆ ಕಡೆಗೆ ಸ್ಥಳಾಂತರಿಸಿ ಮನೆ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. 2225 ಗ್ರಾಮಗಳು 2242 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಉತ್ತಮವಾಗಿ ಮಳೆಯಾಗಿರುವ ಕಾರಣ ಎಲ್ಲಾ ಜಲಾಶಯಗಳಲ್ಲಿ ಒಟ್ಟು 293 ಟಿಎಂಸಿ ನೀರು ಸಂಗ್ರಹವಿದೆ. ಈ ಬಾರಿ ಪೂರ್ವ ಮುಂಗಾರಿನಲ್ಲಿ 3714 ಮನೆಗಳಿಗೆ ಹಾನಿ ಉಂಟಾಗಿದ್ದು, ಎಸ್‌ಡಿಆರ್‌ಎಫ್‌ ಮಾನದಂಡ ಪ್ರಕಾರ ಪರಿಹಾರವನ್ನು ತಕ್ಷಣ ಒದಗಿಸಬೇಕು

ಹವಾಮಾನ ಇಲಾಖೆಯೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ನಿಭಾಯಿಸಬೇಕು ಎಂದು ಸೂಚಿಸಲಾಯಿತು

ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ 3784 ಅರ್ಜಿಗಳು ಇತ್ಯರ್ಥಪಡಿಸಲು ಬಾಕಿಯಿದ್ದು ಸಕಾಲದ ಅವಧಿಯ ಮಿತಿಯಲ್ಲಿಯೇ ಇವೆ. ಇನ್ನು ಮುಂದೆ 30 ದಿನಗಳ ಒಳಗಾಗಿ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು. ರಾಜ್ಯದಲ್ಲಿ 76 ಲಕ್ಷ ಜನರಿಗೆ ಪಿಂಚಣಿ ನೀಡುತ್ತಿದ್ದು, ದೇಶದಲ್ಲೇ ಅಧಿಕವಾಗಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಎನ್‌ಪಿಸಿಐ ಮ್ಯಾಪಿಂಗ್‌ ಮಾಡುವಲ್ಲಿ 2 ಲಕ್ಷ ಪ್ರಕರಣಗಳು ಬಾಕಿಯಿವೆ. ಇದನ್ನು ಆದ್ಯತೆ ಮೇರೆಗೆ ಮಾಡಲು ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಎಷ್ಟು ಪಿಂಚಣಿ ಅರ್ಜಿಗಳು ಬಾಕಿಯಿವೆ ಎಂಬುವುದನ್ನು ಆಯಾ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಕೂಡಲೇ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಬೇಕು. ಗ್ರಾಮಗಳಲ್ಲಿ ಸಾವು ಸಂಭವಿಸಿದ ತಕ್ಷಣ ಆಯಾ ಪಿಂಚಣಿ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕು

ರೈತರ ಆತ್ಮಹತ್ಯೆ
ರೈತ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಒದಗಿಸುವಲ್ಲಿ ವಿಳಂಬ ಸಲ್ಲದು. ಕಾನೂನು ಪ್ರಕಾರ ಪರಿಶೀಲಿಸಿ 1003 ಅರ್ಹ ಪ್ರಕರಣಗಳಲ್ಲಿ 994 ರೈತರ ಕುಟುಂಬಕ್ಕೆ ಪರಿಹಾರ ಒದಗಿಸಲಾಗಿದೆ. ಕಳೆದ ಬಾರಿ ಸಭೆಯಲ್ಲಿ ಪರಿಹಾರ ನೀಡಿಕೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಾರಿ ಚುರುಕು ಮೂಡಿಸಲಾಗಿದೆ. ರೈತರ ಸಭೆ ಮಾಡಿ ಜಾಗೃತಿ, ಆತ್ಮವಿಶ್ವಾಸ ಮೂಡಿಸುವ ಕಾರ್ಯ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಜಮೀನು ಮಾರ್ಗಸೂಚಿ ದರಕ್ಕಿಂತ ಕಡಿಮೆ ಬೆಲೆಗೆ ನೊಂದಣಿ ಅಗುತ್ತಿರುವ ಪ್ರಕರಣಗಳು ಕಂಡು ಬಂದಿದ್ದು, ಬಾಕಿ ರಾಜಸ್ವವನ್ನು ವಸೂಲು ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಳೆದ 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ವರ್ಷದ ಮಾರ್ಚ್‌ ಅಂತ್ಯದ ವೇಳೆಗೆ ಇಂತಹ 24519 ಪ್ರಕರಣಗಳು ಬಾಕಿಯಿದ್ದು, 310 ಕೋಟಿ ರೂ. ರಾಜಸ್ವ ವಸೂಲಾತಿ ಮಾಡಬೇಕಾಗಿದೆ. ಇದನ್ನು ತ್ವರಿತವಾಗಿ ಮಾಡಲು ಸೂಚನೆ ನೀಡಿದರು*

ರಾಜ್ಯದಲ್ಲಿ 92 ಉಪ ನೋಂದಣಿ ಹಾಗೂ 15 ಜಿಲ್ಲಾ ನೋಂದಣಿ ಕಚೇರಿಗಳು ಖಾಸಗಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವುಗಳಿಗೆ ಸ್ವಂತ ಕಟ್ಟಡ ಒದಗಿಸಲು ಕ್ರಮ ಕೈಗೊಳ್ಳಬೇಕು. ಬೆಂಗಳೂರು ನಗರ ಪ್ರದೇಶದಲ್ಲಿ ಅತಿ ಹೆಚ್ಚು ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಿಬಿಎಂಪಿ ಅಧೀನದ ಕಟ್ಟಡಗಳಲ್ಲಿ ಸ್ಥಳಾವಕಾಶ ಒದಗಿಸಬೇಕು ಎಂದು ಸೂಚಿಸಿದರು

ಕಲಬುರಗಿಯಲ್ಲಿ ಸಿಎಂ ಜನಸ್ಪಂದನ ಆಗಸ್ಟ್‌ನಲ್ಲಿ

ಜನಸ್ಪಂದನ ಕಾರ್ಯಕ್ರಮವನ್ನು ಎಲ್ಲಾ ಜಿಲ್ಲೆಗಳಲ್ಲಿ ಆರಂಭಿಸಬೇಕು. ಅಧಿವೇಶನದ ಮುಗಿದ ಬಳಿಕ ಜಿಲ್ಲಾ ಜನಸ್ಪಂದನ ಕಾರ್ಯಕ್ರಮವನ್ನು ನಡೆಸಲು ಕ್ರಮ ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರು ತಪ್ಪದೇ ಜನಸ್ಪಂದನಾ ಸಭೆಗಳನ್ನು ಮಾಡಬೇಕು. ಜಿಲ್ಲಾಧಿಕಾರಿಗಳು ಸ್ವೀಕರಿಸುವ ಅರ್ಜಿಗಳನ್ನು ಆದಷ್ಟು ಬೇಗನೆ ವಿಲೇವಾರಿ ಮಾಡಬೇಕು. 40702 ಅರ್ಜಿಗಳನ್ನು ವಿಲೇವಾರಿ ಮಾಡಿದ್ದು, ಇನ್ನೂ 8ಸಾವಿರ ಅರ್ಜಿಗಳು ವಿಲೇವಾರಿಗೆ ಬಾಕಿಯಿದೆ. ತಕ್ಷಣ ವಿಲೇವಾರಿ ಮಾಡಿ. ಕಲ್ಬುರ್ಗಿಯಲ್ಲಿ ಅಧಿವೇಶನ ಮುಗಿದ ಬಳಿಕ ಮುಂದಿನ ತಿಂಗಳು ರಾಜ್ಯ ಮಟ್ಟದ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುವುದು

ವಿದ್ಯಾರ್ಥಿ ವೇತನ
131,21,302 ಮೆಟ್ರಿಕ್‌ ಪೂರ್ವ ಮಕ್ಕಳಿಗೆ ಮೊದಲ ಬಾರಿಗೆ ಪ್ರಥಮ ತ್ರೈಮಾಸಿಕ ಅವಧಿಯಲ್ಲಿಯೇ ವಿದ್ಯಾರ್ಥಿ ವೇತನ ನೀಡಲಾಗಿದ್ದು, 95436 ವಿದ್ಯಾರ್ಥಿಗಳ ಆಧಾರ್‌ ಸೀಡ್‌ ಮಾಡಬೇಕಾಗಿದೆ. ಇದನ್ನು ಶೀಘ್ರವೇ ಪೂರ್ಣಗೊಳಿಸಲು ಸೂಚಿಸಲಾಯಿತು.

ಹಾಸ್ಟೆಲ್‌ ಪ್ರವೇಶ ಪ್ರಕ್ರಿಯೆಯನ್ನು ಆನ್‌ಲೈನ್‌ ಮೂಲಕವೇ ಕೈಗೊಳ್ಳಬೇಕು. ತಾಂತ್ರಿಕ ತೊಡಕುಗಳಿದ್ದರೆ ನಿವಾರಿಸಿಕೊಂಡು, 10 ದಿನಗಳ ಒಳಗೆ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು.

•ಕರ್ನಾಟಕ ರಾಜ್ಯ ಆಡಳಿತ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದೆ. ನೀವು ಕೆಲಸ ಮಾಡುವ ಜಿಲ್ಲೆಯ ಬಗ್ಗೆ ಮೊದಲೇ ತಿಳಿದುಕೊಂಡಿರಬೇಕು. ಅಲ್ಲಿನ ಆರ್ಥಿಕ ಸ್ಥಿತಿ, ಸಾಮಾಜಿಕ ಸ್ಥಿತಿಗಳ ಬಗ್ಗೆ ಅರಿತುಕೊಳ್ಳಬೇಕು. ಅಲ್ಲಿನ ಸಾಕ್ಷರತೆ, ಶಿಕ್ಷಣ, ತಲಾ ಆದಾಯ ಮೊದಲಾದವುಗಳ ಕುರಿತು ತಿಳಿದಿರಬೇಕು.

ಎಸ್‌.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ. 10 ರಷ್ಟು ಕಡಿಮೆಯಾಗಿದೆ. ಪರೀಕ್ಷಾ ಅಕ್ರಮಗಳನ್ನು ನಿಯಂತ್ರಣದಲ್ಲಿಟ್ಟಿರುವುದೇ ಒಂದು ಕಾರಣವಾಗಲು ಸಾಧ್ಯವಿಲ್ಲ. ಇನ್ನು ಮುಂದೆ ಹೀಗೆ ಆಗದಂತೆ ನೋಡಿಕೊಳ್ಳಬೇಕು. ಜಿಲ್ಲಾಧಿಕಾರಿಗಳು, ಸಿಇಓಗಳು, ಶಿಕ್ಷಣ ಇಲಾಖೆಯ ಹಿರಿ ಅಧಿಕಾರಿಗಳದೂ ಜವಾಬ್ದಾರಿ ಇದೆ. ಒಟ್ಟಿಗೆ ಕುಳಿತು ಚರ್ಚೆ ಮಾಡಿ ಫಲಿತಾಂಶ ಹೆಚ್ಚಿಸಲು ಪ್ರಯತ್ನಿಸಬೇಕು

ಜನಸ್ಪಂದನ ಅರ್ಜಿಗಳ ಸಕಾರಾತ್ಮಕ ವಿಲೇವಾರಿ ಮಾಡಿ

ವೈಯಕ್ತಿಕ ಶೌಚಾಲಯ

ರಾಜ್ಯದಲ್ಲಿ 4.34 ಲಕ್ಷ ಶೌಚಾಲಯಗಳ ಪೈಕಿ 98 ಸಾವಿರ ಶೌಚಾಲಯಗಳು ಪೂರ್ಣಗೊಂಡಿವೆ. ಇನ್ನೂ 2.86 ಲಕ್ಷ ಶೌಚಾಲಯಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಬೇಕಾಗಿದ್ದು, ಆದಷ್ಟು ಬೇಗನೆ ಪೂರ್ಣಗೊಳಿಸಬೇಕು. ಶೌಚಾಲಯ ನಿರ್ಮಾಣಕ್ಕಾಗಿ ಬೇಕಾಗುವ ಹೆಚ್ಚುವರಿ ಮೊತ್ತವನ್ನು ನರೇಗಾ ಅಡಿ ಬಳಸಿಕೊಳ್ಳುವ ಕುರಿತು ಪರಿಶೀಲಿಸಬೇಕು ಎನ್ನುವ ಸೂಚನೆ ನೀಡಿದರು. ಪ್ರಿ ಫ್ಯಾಬ್ರಿಕೇಟೆಡ್‌ ಶೌಚಾಲಯ ಮಾದರಿ ಅಳವಡಿಸುವ ಕುರಿತು ಸಹ ಪರಿಶೀಲಿಸಿ. ವೈಯಕ್ತಿಕ ಶೌಚಾಲಯಕ್ಕೆ ಸ್ಥಳಾವಕಾಶ ಇಲ್ಲದ ಕಡೆಗಳಲ್ಲಿ ಸಮುದಾಯ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಿ.

ನರೇಗಾ
ಬರಗಾಲ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ. ಬರಪೀಡಿತ ತಾಲೂಕುಗಳಲ್ಲಿ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 50 ಮಾನವ ದಿನಗಳನ್ನು ಒದಗಿಸಬೇಕಾಗಿತ್ತು. ಆದರೆ ನೀಡಿಲ್ಲ. ಉದ್ಯೋಗ ಖಾತ್ರಿ ಅಡಿ ಶಾಲಾ ಶೌಚಾಲಯ, ಕಂಪೌಡ್‌, ಅಡುಗೆ ಕೋಣೆ, ಆಟದ ಬಯಲು ನಿರ್ಮಾಣ ಕಾರ್ಯವನ್ನು ಆದಷ್ಟು ಬೇಗನೆ ಪೂರ್ಣಗೊಳಿಸಿ ಎಲ್ಲಾ ಶಾಲೆಗಳಲ್ಲಿ ಈ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಬೇಕು ಎಂದರು.

ನಗರಾಭಿವೃದ್ಧಿ ಇಲಾಖೆ
ಶುದ್ಧ ಕುಡಿಯುವ ನೀರು ಪೂರೈಕೆ
ಕಲುಷಿತ ನೀರು ಪೂರೈಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಕಲುಷಿತ ನೀರಿನಿಂದ ಯಾವುದೇ ತೊಂದರೆ ಉಂಟಾದರೆ ಸಂಬಂಧಪಟ್ಟ ಅಧಿಕಾರಿಯನ್ನು ನೇರ ಜವಾಬ್ದಾರಿ ಮಾಡಲಾಗುವುದು. ತುಕ್ಕು ಹಿಡಿದ ಹಳೆಯ ಪೈಪ್‌ ಬದಲಾವಣೆ ಮಾಡಬೇಕು. ಪ್ರತಿ 15ದಿನಗಳಿಗೊಮ್ಮೆ ನೀರಿನ ಮೂಲದಲ್ಲಿ ಹಾಗೂ ವಿತರಣಾ ಬಿಂದುವಿನಲ್ಲಿನ ನೀರಿನ ಗುಣಮಟ್ಟವನ್ನು ಪ್ರಯೋಗಾಲಯದಲ್ಲಿ ಕಡ್ಡಾಯವಾಗಿ ಪರೀಕ್ಷೆ ಮಾಡಬೇಕು. ನೀರಿನ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ಕಡೆಗಳಲ್ಲಿ ಹೊಸ ಮೂಲದಿಂದ ನೀರು ಪೂರೈಕೆ ಮಾಡಬೇಕು. ಎಂದು ಸೂಚನೆ ನೀಡಿದರು.

ಎಲ್ಲಾ ಜಿಲ್ಲೆಗಳಲ್ಲಿ ಆದಷ್ಟು ಬೇಗನೆ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಆರಂಭಿಸಬೇಕು. ಇನ್ನೂ 55 ಕಡೆಗಳಲ್ಲಿ ಘನತ್ಯಾಜ್ಯ ಘಟಕಗಳ ನಿರ್ಮಾಣ ಪ್ರಕ್ರಿಯೆ ನಡೆಯುತ್ತಿದ್ದು, ಆದಷ್ಟು ಬೇಗನೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಬೇಕು. ತ್ಯಾಜ್ಯ ನೀರು ಶುದ್ಧೀಕರಣ ಘಟಕ ಕಾರ್ಯಾರಂಭಿಸುವ ಮೂಲಕ ಕೊಳಚೆ ನೀರು ನೇರವಾಗಿ ಕೆರೆಗಳಿಗೆ ಸೇರುವುದನ್ನು ತಪ್ಪಿಸಬೇಕು. ಮೈಸೂರಿನ ದಳವಾಯಿ ಕೆರೆಗೆ ಕೊಳಚೆ ನೀರು ಸೇರುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು.

ಇಂದಿರಾ ಕ್ಯಾಂಟೀನ್‌
ಈಗಾಗಲೇ ಅನುಮತಿ ನೀಡಲಾಗಿರುವ ಹೊಸ ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣಕ್ಕೆ ಆದಷ್ಟು ಬೇಗನೆ ಜಾಗ ಗುರುತಿಸಬೇಕು. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 70 ಸ್ಥಳಗಳಲ್ಲಿ ಹೊಸ ಇಂದಿರಾ ಕ್ಯಾಂಟೀನ್‌ ನಿರ್ಮಿಸಲು ಅನುಮೋದನೆ ನೀಡಲಾಗಿದ್ದು, ಆದಷ್ಟು ಬೇಗನೆ ಸ್ಥಳ ಗುರುತಿಸಬೇಕು. ಹೊಸ ಮೆನು ಟೆಂಡರ್‌ ಪ್ರಕ್ರಿಯೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು ಎಂದು ಹೇಳಿದರು.

15ನೇ ಹಣಕಾಸು ಆಯೋಗ
15ನೇ ಹಣಕಾಸು ಆಯೋಗದ ಅನುದಾನದಲ್ಲಿ 33803 ಕಾಮಗಾರಿಗಳು ಮಂಜೂರಾಗಿದ್ದು, 23714 ಕಾಮಗಾರಿಗಳು ಪೂರ್ಣಗೊಂಡಿವೆ. ಯೋಜನೆಯಡಿ ಇದುವರೆಗೆ 2799 ಕೋಟಿ ರೂ. ಬಿಡುಗಡೆಯಾಗಿದ್ದು, 1883 ಕೋಟಿ ರೂ. ವೆಚ್ಚವಾಗಿದೆ. ಮುಂದಿನ ಎರಡು ವಾರಗಳ ಒಳಗಾಗಿ ಟೆಂಡರ್‌ ಕರೆದು, ನಿಗದಿತ ಅವಧಿಯ ಒಳಗಾಗಿ ಅನುದಾನವನ್ನು ಪೂರ್ಣವಾಗಿ ಬಳಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.

ಆಸ್ತಿ ತೆರಿಗೆ ವಸೂಲಾತಿ
ಕಳೆದ ವರ್ಷದ 224 ಕೋಟಿ ರೂ. ಆಸ್ತಿ ತೆರಿಗೆ ವಸೂಲಾತಿಗೆ ಬಾಕಿಯಿದೆ. ಹಳೆ ಬಾಕಿಯನ್ನು ಸಂಪೂರ್ಣವಾಗಿ ವಸೂಲು ಮಾಡಬೇಕು. ಪ್ರಸ್ತುತ ವರ್ಷದ ಜೂನ್‌ ಅಂತ್ಯದವರೆಗೆ 806 ಕೋಟಿ ರೂ. ಆಸ್ತಿ ತೆರಿಗೆ ವಸೂಲು ಮಾಡಲಾಗಿದ್ದು, 1053 ಕೋಟಿ ರೂ. ವಸೂಲಾತಿಗೆ ಬಾಕಿಯಿದೆ. ಜಿಲ್ಲಾಧಿಕಾರಿಗಳು ಅಭಿಯಾನದ ರೀತಿಯಲ್ಲಿ ಆಸ್ತಿ ತೆರಿಗೆ ವಸೂಲಾತಿಯನ್ನು ಕೈಗೊಳ್ಳಬೇಕು ಎಂದರು.

ಎಸ್.ಎಫ್.ಸಿ. ಮುಕ್ತನಿಧಿ ಯೋಜನೆಯಡಿ ಕಲ್ಯಾಣ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಪರಿಶಿಷ್ಟ ಜಾತಿ/ಪಂಗಡದ ಜನರಿಗೆ ಶೇ.24.01 ಅನುದಾನ ಕಡ್ಡಾಯವಾಗಿ ವೆಚ್ಚ ಮಾಡುವುದನ್ನು ಖಾತ್ರಿಪಡಿಸಬೇಕು ಎಂದು ಸೂಚನೆ ನೀಡಿದರು.

ಗೆಜೆಟಿಯರ್‌, ಎಕನಾಮಿಕ್‌ ಸರ್ವೇ ಗಳನ್ನು ಕಡ್ಡಾಯವಾಗಿ ಓದಿ

• ಜಿಲ್ಲಾಧಿಕಾರಿಗಳು ಗಜೆಟಿಯರ್‌, ಎಕನಾಮಿಕ್‌ ಸರ್ವೇ ಓದಿದರೆ ಆ ಜಿಲ್ಲೆಯ ಇತಿಹಾಸ, ಸ್ಥಿತಿಗತಿಗಳನ್ನು ಅರಿತುಕೊಳ್ಳಲು ಸಾಧ್ಯ. ಫ್ರೇಸರ್‌ ಎಂಬ ಅಧಿಕಾರಿಯ ಸಲಹೆ ಇಲ್ಲದೆ ನಾಲ್ವಡಿ ಕೃಷ್ಣರಾಜ ಒಡೆಯರ್‌, ಗಾಯಕ್‌ವಾಡ್‌, ಶಾಹು ಮಹಾರಾಜ ಮೊದಲಾದವರು ಒಳ್ಳೆಯ ಅರಸರೆಂದು ಹೆಸರುಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಬಳ್ಳಾರಿಯಲ್ಲಿ ಮನ್ರೋ ಎಂಬ ಅಧಿಕಾರಿ ಕಲೆಕ್ಟರ್‌ ಆಗಿದ್ದರು. ಇಂದಿಗೂ ಅಲ್ಲಿನ ಜನ ತಮ್ಮ ಮಕ್ಕಳಿಗೆ ಅವರ ಹೆಸರಿಡುತ್ತಾರೆ. ನಾವೆಲ್ಲರೂ ಜನಸೇವಕರು ಎಂಬ ಭಾವನೆಯಿಂದ ಕೆಲಸ ನಿರ್ವಹಿಸಬೇಕು. ಆಗ ಮಾತ್ರ ಜನಪರ ಆಡಳಿತ ನೀಡಲು ಸಾಧ್ಯವಾಗುತ್ತದೆ.

*ನಮ್ಮ ಜನರು ತಮ್ಮ ಮಕ್ಕಳಿಗೆ ನಿಮ್ಮ ಹೆಸರು ಇಡುವ ರೀತಿಯಲ್ಲಿ ಗುಣಾತ್ಮಕವಾಗಿ, ಪರಿಣಾಮಕಾರಿಯಾಗಿ ಕೆಲಸ ಮಾಡಲು ಅವಕಾಶಗಳಿವೆ, ನಿಮ್ಮಿಂದ ಇದು ಸಾಧ್ಯವಿದೆ ಎಂದರು.

•ಬಡವರ ಬಗ್ಗೆ ಅನುಕಂಪ ಇರಬೇಕು. ಅಸಮಾನತೆ ನೀಗಿಸಲು ಪ್ರಯತ್ನಿಸಬೇಕು. ಬಸವಣ್ಣ, ಗಾಂಧೀಜಿ, ಅಂಬೇಡ್ಕರ್‌ ಅವರನ್ನು ಓದುತ್ತೇವೆ. ಸಂವಿಧಾನ ಅರಿತುಕೊಳ್ಳಬೇಕು ಎಂದು ಹೇಳುತ್ತೇವೆ. ಇದು ಕೇವಲ ಓದುವುದಕ್ಕಲ್ಲ; ಅನುಷ್ಠಾನ ಮಾಡುವುದಕ್ಕೆ ಎಂಬುದನ್ನು ಅರಿತುಕೊಳ್ಳಿ. ಈ ಸೇವೆಯನ್ನು ಆಯ್ಕೆ ಮಾಡಿಕೊಂಡಿದ್ದೀರಿ. ಪರಿಸ್ಥಿತಿ ಬದಲಾದಂತೆ ನಾವೂ ಬದಲಾಗಬೇಕು*

ಡೆಂಘಿ ನಿಯಂತ್ರಿಸಿ:

•ಕಲುಷಿತ ನೀರು ಕುಡಿದು ಹಲವು ಸಾವು- ನೋವುಗಳು ಸಂಭವಿಸಿವೆ. ಇಂತಹ ಪ್ರಕರಣಗಳು ಮರುಕಳಿಸಿದರೆ, ಹಿರಿಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು.


ವಲಸೆ ಕುರಿಗಾರರ ಹಿತ ಕಾಪಾಡಿ
ವಲಸೆ ಕುರಿಗಳ ಆಕಸ್ಮಿಕ ಮರಣ ಸಂಭವಿಸಿದಲ್ಲಿ ಮಾಲೀಕರಿಗೆ ತ್ವರಿತವಾಗಿ ಪರಿಹಾರ ವಿತರಿಸಬೇಕು.

•ಸಿಂಧುತ್ವ ಪ್ರಮಾಣ ಪತ್ರ ಸಕಾಲದಲ್ಲಿ ನೀಡಬೇಕು. ಇವುಗಳನ್ನು ಬಾಕಿ ಉಳಿಸಿಕೊಳ್ಳದೆ ಸೂಕ್ತ ಆದೇಶ ಹೊರಡಿಸಬೇಕು. ಅಭ್ಯರ್ಥಿಗಳಿಗೆ ಸಕಾಲದಲ್ಲಿ ಸಿಂಧುತ್ವ ಪ್ರಮಾಣ ಪತ್ರ ನೀಡದೆ ಇದ್ದರೆ ಅವರ ಭವಿಷ್ಯ ಹಾಳಾಗುವುದಿಲ್ಲವೇ ಎಂದು ಪ್ರಶ್ನಿಸಿದರು*

•ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುತ್‌ ಸಂಪರ್ಕ ಕಲ್ಪಿಸಲು ಬಾಕಿ ಉಳಿದಿರುವ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸಬೇಕು*

•ಬುಡಕಟ್ಟು ಜನರಿಗೆ ಅರಣ್ಯ ಜಮೀನು ಮಂಜೂರು ಮಾಡಲು 26,126 ಅರ್ಜಿಗಳು ಬಾಕಿ ಇವೆ. ಇವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಅವರ ಹಾಡಿಗಳಿಗೆ ಹೋಗಲು ರಸ್ತೆ ಸಂಪರ್ಕ ಇರುವುದಿಲ್ಲ. ಈ ಬಗ್ಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಸೂಕ್ತ ಸುತ್ತೋಲೆ ಹೊರಡಿಸಲು ಸೂಚಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button