
ಅನಾರೋಗ್ಯದ ಕಾರಣ ರಾಹುಲ್ ಗೈರು: ತಿರುಚಿ ಸುದ್ದಿ ಮಾಡಿದರೆ ಪತ್ರಿಕಾ ವೃತ್ತಿಯ ಬಗ್ಗೆ ಯಾವ ಸಂದೇಶ ಹೋಗುತ್ತದೆ: ಸಿಎಂ ಪ್ರಶ್ನೆ*
ಪ್ರಗತಿವಾಹಿನಿ ಸುದ್ದಿ: ಮಹಿಳೆಯರಿಗೆ ರಕ್ಷಣೆ ದೊರಕಬೇಕು. ಬಲಾತ್ಕಾರದಂತಹ ಹೀನ ಕೃತ್ಯಗಳು ನಡೆಯಬಾರದು. ಸಮಾಜದಲ್ಲಿ ಸಮಾಜಘಾತಕ ಶಕ್ತಿಗಳು ಇಂಥ ಕೆಲಸ ಮಾಡುತ್ತವೆ. ಅವರ ವಿರುದ್ಧ ಗಂಭೀರ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದರು.
ಅವರು ಇಂದು ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಗಾಂಧೀಜಿಯವರ ತತ್ವಾದರ್ಶಗಳನ್ನು ಪುನಸ್ಥಾಪಿಸಲು ವರ್ಷವಿಡೀ ಅಭಿಯಾನ
ಇಡೀ ವರ್ಷ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಅಭಿಯಾನವನ್ನು ಮಾಡುತ್ತಿದ್ದೇವೆ. ಗಾಂಧೀಜಿಯವರ ತತ್ವಾದರ್ಶಗಳನ್ನು ಮತ್ತೆ ಪುನಸ್ಥಾಪಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗಾಂಧೀಜಿ ಹಾಗು ಅವರ ವಿಚಾರಧಾರೆಗಳು ಇಡೀ ವಿಶ್ವಕ್ಕೆ ಇಂದಿಗೂ ಪ್ರಸ್ತುತ ಎಂದರು.
ಗಾಂಧೀಜಿ ಸೌಹಾರ್ದತೆ, ಸಮಾನತೆ ಬರಬೇಕು, ಅಸ್ಪೃಶ್ಯತೆ ಹೋಗಲಾಡಿಸಲು, ಮಹಿಳೆಯರಿಗೆ ಸ್ವಾತಂತ್ರ್ಯ ಅವರ ಹಕ್ಕುಗಳ ರಕ್ಷಣೆಯಾಗಬೇಕೆಂದು ಪ್ರತಿಪಾದಿಸಿದ್ದರು.
ಗಾಂಧೀಜಿ, ಬಸವಣ್ಣ, ಕನಕದಾಸರ ವಿಚಾರಗಳು ಸಂವಿಧಾನದಲ್ಲಿ ಅಡಕವಾಗಿವೆ ಎಂದರು.
ಕಾಂಗ್ರೆಸ್ ಸಂವಿಧಾನದ ಪರವಾಗಿದೆ
ಗಾಂಧೀಜಿ, ಅಂಬೇಡ್ಕರ್ ಮತ್ತು ಸಂವಿಧಾನವನ್ನು ವಿರೋಧಿಸುವ ಅನಾಹುತಕಾರಿ ರಾಜಕಾರಣ ನಡೆಯುತ್ತಿದೆ. ಅದ್ದರಿಂದ ಇವುಗಳ ರಕ್ಷಣೆ ಮಾಡುವುದು ಕಾಂಗ್ರೆಸ್ ನ ಜವಾಬ್ದಾರಿ. ನಾವು ಸಂವಿಧಾನದ ಪರವಾಗಿದ್ದೇವೆ. ಅವರು ಮನುವಾದದ ಪರವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನಾರೋಗ್ಯ ನಿಮಿತ್ತ ರಾಹುಲ್ ಗಾಂಧಿ ಗೈರು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಹುಷಾರಿಲ್ಲದ ಕಾರಣ ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಅವರು ಸಮಾವೇಶದಿಂದ ದೂರ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ರೀತಿ ತಿರುಚಿ ಸುದ್ದಿ ಹಾಕಿದರೆ ಪತ್ರಿಕಾ ವೃತ್ತಿಯ ಘನತೆ ಉಳಿಯುತ್ತದೆಯೇ? ಇದರಿಂದ ಏನು ಸಂದೇಶ ಹೋಗುತ್ತದೆ ಎಂದು ಪ್ರಶ್ನಿಸಿದರು.
ಸಂಸದೆ ಪ್ರಿಯಾಂಕ ಗಾಂಧಿ,ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾರ್ಯಕಾರಿ ಸಮಿತಿ ಸದಸ್ಯರು, ಕಾರ್ಯದರ್ಶಿಗಳು ಆಗಮಿಸಿದ್ದಾರೆ ಎಂದು ಸಿಎಂ ಇದೇ ಸಂದರ್ಭದಲ್ಲಿ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ