*ಸಂಸದ ಅನಂತ ಕುಮಾರ್ ಹೆಗಡೆ ಭಾಷೆ ಅವರ ಘನತೆಗೆ ಕುಂದು ತರುತ್ತೆ ಹೊರತು ನನಗೇನೂ ಆಗಲ್ಲ; ಸಿಎಂ ಸಿದ್ದರಾಮಯ್ಯ ತಿರುಗೇಟು*
ಪ್ರಗತಿವಾಹಿನಿ ಸುದ್ದಿ: ರಾಜಕೀಯ ಉದ್ದೇಶದಿಂದ ಸಂಸದ ಅನಂತಕುಮಾರ್ ಹೆಗಡೆಯವರು ರಾಜ್ಯದ ಮುಖ್ಯಮಂತ್ರಿಗಳಿಗೆ ಅಶ್ಲೀಲ ಪದಗಳನ್ನು ಬಳಸಿದ್ದರೆ, ಆ ಭಾಷೆ ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ ಹೊರತು ನನಗೇನೂ ಆಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಕುಮಟಾದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಸಂಸದ ಅನಂತ್ ಕುಮಾರ್ ಹೆಗಡೆ, ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಜನವರಿ 22ರಂದು ರಾಮ ಮಂದಿರ ಉದ್ಘಾಟನೆಗೆ ಹೋಗಲ್ಲ, ಆನಂತರ ಅಯೋಧ್ಯೆಗೆ ಹೋಗಿ ಬರುತ್ತೇನೆ ಎಂದಿರುವ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಟೀಕಿಸಿರುವ ಅನಂತ್ ಕುಮಾರ್ ಹೆಗಡೆ, ಕಾಂಗ್ರೆಸ್ ನಮ್ಮ ವಿರೋಧ ಅಲ್ಲ, ನಮ್ಮ ವಿರೋಧ ಸಿದ್ದರಾಮಯ್ಯ. ಮೊದಲು ಅಯೋಧ್ಯೆಗೆ ಆಹ್ವಾನ ನೀಡಿಲ್ಲ ಎಂದರು. ಆಹ್ವಾನ ಬಂದ ಮೇಲೆ ಹೋಗಲ್ಲ ಅಂದರು. ಈಗ ನಾನು ಹೋಗುತ್ತೇನೆ ಆದರೆ ಜನವವರಿ 22ರಂದು ಅಲ್ಲ ಆಮೇಲೆ ಅಂತಿದ್ದಾರೆ. ‘ನೀನು ಹೋಗು ಬಿಡು, ರಾಮ ಮಂದಿರ ನಿಲ್ಲಲ್ಲ ಮಗನೇ’ ಎಂದು ವಾಗ್ದಾಳಿ ನಡೆಸಿದ್ದರು. ಅನಂತ ಕುಮಾರ್ ಹೆಗಡೆ ಹೇಳಿಕೆಗೆ ಕೂಡಲಸಂಗಮ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಸಂಸದ ಅನಂತ ಕುಮಾರ್ ಹೇಳಿಕೆ ಅವರ ಸಂಸ್ಕೃತಿಯನ್ನು ತೋರುತ್ತದೆ. ಅವರ ಸಂಸಕೃತಿಯೇ ಅಂಥಾದ್ದು. ಒಬ್ಬ ಕೇಂದ್ರದ ಮಂತ್ರಿಯಾಗಿದ್ದವರು, ಸಂಸದರು ಅವರು ಯಾವ ಭಾಷೆ ಬಳಸಬೇಕು ಎಂಬುದು ಗೊತ್ತಿಲ್ಲ ಎಂದರೆ ಅದು ಅವರ ಸಂಸ್ಕೃತಿಯನ್ನು ತೋರುತ್ತದೆ. ಅವರು ಅಶ್ಲೀಲ ಪದ ಬಳಸಿದ್ದಾರೆ ಎಂದರೆ ಅದರಿಂದ ಅವರ ಘನತೆಗೆ ಕುಂದು ಬರುತ್ತದೆ ಹೊರತು ನನಗೇನೂ ಆಗಲ್ಲ ಎಂದು ಹೇಳಿದ್ದಾರೆ.
ಸಂಸದರ ಹೇಳಿಕೆ ಅವರು ಸುಸಂಸ್ಕೃತರಲ್ಲ ಎನ್ನುವುದನ್ನು ಬಿಂಬಿಸುತ್ತದೆ. ಕೇಂದ್ರದ ಮಂತ್ರಿಯಾಗಿದ್ದಾಗ, ಸಂವಿಧಾನವನ್ನೇ ಬದಲಾಯಿಸುತ್ತೇನೆ ಎಂದು ಹೇಳಿದ್ದ ಅನಂತ ಕುಮಾರ್ ಹೆಗಡೆಯವರಿಂದ ಉತ್ತಮ ಸಂಸ್ಕೃತಿಯನ್ನು ಅಪೇಕ್ಷಿಸಲು ಸಾಧ್ಯವಿಲ್ಲ. ಅವರ ಭಾಷೆ ಅವರ ಘನತೆಗೆ ಕುಂದು ಬರುತ್ತದೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ