
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದಲ್ಲಿ ನಡೆದ ಕಿರು ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಪ್ರಕರಣ ಸಂಬಂಧ ಸಿದ್ದಾಪುರ ಪೊಲೀಸರು 7 ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಸುಜಲ್, ಗೌರವ್ ಪವಾರ್, ನೈಮಾ ನಾಗ್ರಿಯಾ, ಪ್ರಣವ್ ಪಲ್ಲಿಯಿಲ್, ರಿಷಬ್ ಜೈನ್, ಸ್ಮೃತಿ ಆರ್.ಬಿ, ಆಶಿಶ್ ಅಗರ್ವಾಲ್ ಬಂಧಿತ ಆರೋಪಿಗಳು. ಎಲ್ಲರೂ ಬಿಬಿಎಂ 5ನೇ ಸೆಮಿಸ್ಟರ್ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.
ಫೆ.8ರಂದು ಕಾಲೇಜ್ ಫೆಸ್ಟ್ ನಲ್ಲಿ ಮ್ಯಾಡ್ ಆಡ್ ಸ್ಪರ್ಧೆಯಲ್ಲಿ ಜಾತಿ ವ್ಯವಸ್ಥೆಯನ್ನು ಖಂಡಿಸುವ ಸಂದೇಶ ನೀಡುವ ಭರದಲ್ಲಿ ವಿದ್ಯಾರ್ಥಿಗಳು ಡಾ.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಿ.ಆರ್. ಅಂಬೇಡ್ಕರ್ ಅಲ್ಲ, ಬಿಯರ್ ಅಂಬೇಡ್ಕರ್. ಡೋಂಟ್ ಟಚ್ ಮಿ, ಟಚ್ ಮಿ ಹಾಡು ಹಾಕಿ ಅವಮಾನಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣ ಸಂಬಂಧ ಜೈನ್ ವಿಶ್ವ ವಿದ್ಯಾಲಯದ ಎದುರು ಪ್ರತಿಭಟನೆಗಳು ನಡೆದಿದ್ದವು. ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಾಗಿತ್ತು. ಘಟನೆಯ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಸೂಚಿಸಿದ್ದರು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಇದೀಗ 7 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
https://pragati.taskdun.com/tiger-attackkodagutwo-death/