*ಗ್ಯಾರಂಟಿ ಯೋಜನೆಗಳು ಕರ್ನಾಟಕ ಅಭಿವೃದ್ಧಿ ಮಾದರಿ: ಮುಖ್ಯಮಂತ್ರಿ ಸಿದ್ದರಾಮಯ್ಯ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆರ್ಥಿಕತೆಯ ಚಲನಶೀಲತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಐದು ಗ್ಯಾರಂಟಿ ಯೋಜನೆಗಳ ಮೂಲಕ ಸಾರ್ವತ್ರಿಕ ಮೂಲ ಆದಾಯದ ಪರಿಕಲ್ಪನೆಯನ್ನು ಪರಿಚಯಿಸುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಇದು ಕರ್ನಾಟಕ ಮಾದರಿ ಅಭಿವೃದ್ಧಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.
ಅವರು ಇಂದು ವಿಧಾನಸಭೆಯಲ್ಲಿ 2023-24ನೇ ಸಾಲಿನ ಆಯವ್ಯಯ ಕುರಿತ ಚರ್ಚೆಗೆ ಉತ್ತರ ನೀಡಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಕಾರ್ಯಕ್ರಮಗಳ ಮೂಲಕ ದೇಶದಲ್ಲಿಯೇ ದೊಡ್ಡ ಮೊತ್ತ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ ಎಂದ ಅವರು, ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆಗಳ ಜಾರಿ ಸಾಧ್ಯವಿಲ್ಲ ಎಂದರು. ಆದರೆ ಈಗಾಗಲೇ 3 ಯೋಜನೆಗಳು ಜಾರಿಯಾಗಿವೆ. ಗೃಹ ಲಕ್ಷ್ಮಿ ಯೋಜನೆಗೆ ನೋಂದಣಿ ಪ್ರಾರಂಭವಾಗಿದೆ. ಯುವನಿಧಿ ಯೋಜನೆ ಬಹುತೇಕ ಡಿಸೆಂಬರ್ ತಿಂಗಳಿನಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಈ ಎಲ್ಲ ಯೋಜನೆಗಳಿಗೆ ಆಯವ್ಯಯದಲ್ಲಿ ಅನುದಾನ ಹಂಚಿಕೆ ಮಾಡಲಾಗಿದೆ. ಅನುದಾನ ಕ್ರೋಢೀಕರಣವನ್ನೂ ಆಯವ್ಯಯದಲ್ಲಿ ವಿವರಿಸಲಾಗಿದೆ.ಈ ಕಾರ್ಯಕ್ರಮಗಳಿಗೆ ವಾರ್ಷಿಕ ಒಟ್ಟು 52, 068 ಕೋಟಿ ರೂ.ಗಳು ಅಗತ್ಯವಿದೆ. 1.3೦ ಕೋಟಿ ಕುಟುಂಬಗಳಿಗೆ ಈ ಗ್ಯಾರಂಟಿ ಯೋಜನೆಗಳ ಸೌಲಭ್ಯ ದೊರೆಯಲಿದೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ 4-5 ಸಾವಿರ ರೂ. ಅಂದರೆ ವಾರ್ಷಿಕ ೪೮,೦೦೦- ೬೦೦೦೦ ರೂ. ದೊರಕುತ್ತಿದೆ. ದೇಶದ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಗಾತ್ರದ ಮೊತ್ತವನ್ನು ಜಾತಿ ಧರ್ಮ ನೋಡದೇ ಮಾಡಿರುವ ಮೊದಲ ರಾಜ್ಯ ಕರ್ನಾಟಕ ಎಂದರು. ಈ ವರ್ಷ 35,410 ಕೋಟಿಗಳನ್ನು 5 ಗ್ಯಾರೆಂಟಿಗಳಿಗೆ ಮೀಸಲಿರಿಸಿದ್ದೇವೆ ಎಂದು ವಿವರಿಸಿದರು.
ಜನರು ಬೆಲೆ ಏರಿಕೆ, ಇಂಧನ ಬೆಲೆ ಏರಿಕೆ, ನಿರುದ್ಯೋಗ ಮೊದಲಾದ ಸಮಸ್ಯೆಗಳಿಂದ ತತ್ತರಿಸಿದ್ದು, ಅವರ ಬದುಕು ಸುಧಾರಿಸುವ ಉದ್ದೇಶದಿಂದ ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಪ್ರಭುತ್ವಕ್ಕೆ ಮಹತ್ವ ನೀಡಬೇಕು ಎನ್ನುವ ಅಂಬೇಡ್ಕರ್ ಅವರ ತತ್ವದಲ್ಲಿ ನಂಬಿಕೆ
ಡಾ: ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಸಾಮಾಜಿಕ ಪ್ರಭುತ್ವಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂಬ ಮಾತಿನಲ್ಲಿ ನಮಗೆ ನಂಬಿಕೆ ಇದೆ. ಹಾಗೂ ಇದಕ್ಕೆ ಬದ್ಧಾಗಿದ್ದೇವೆ. ಬಜೆಟ್ ಸಿದ್ದಮಾಡುವಾಗ ನಮ್ಮ ಕಣ್ಣಿಗೆ ಅಂಬೇಡ್ಕರ್, ಗಾಂಧಿ, ಬುದ್ಧ, ಕುವೆಂಪು, ನಾರಾಯಣ ಗುರು ಅವರ ಆಶಯಗಳು ಕಾಣುತ್ತವೆ. ಕಟ್ಟಕಡೆಯ ವ್ಯಕ್ತಿ ಸಂತುಷ್ಟವಾಗಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಭಾಗೀದಾರರಾಗಬೇಕು. ಅದರ ಫಲವನ್ನು ಎಲ್ಲರೂ ಸಮಾನರಾಗಿ ಹಂಚಿಕೊಳ್ಳಬೇಕು. ಇದನ್ನೇ ಕುವೆಂಪು ಸಮಬಾಳು, ಸಮಪಾಲು ಎಂದಿದ್ದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕರ್ನಾಟಕ ಮಾದರಿ:
ನಾವು ಹಿಂದೆಯೂ ನುಡಿದಂತೆ ನಡೆದಿದ್ದೇವೆ. 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ.ಕರ್ನಾಟಕ ರಾಜ್ಯ ನನ್ನ ಕಾಲದಲ್ಲಿ 1ಲಕ್ಷದ 16 ಸಾವಿರ ಕೋಟಿ ರೂ.ಗಳ ಸಾಲವಾಗಿದೆ. 2018 ಮಾರ್ಚ್ ಅಂತ್ಯಕ್ಕೆ 2,45,000 ಕೋಟಿ ಸಾಲ ಇತ್ತು. 2023 ಕ್ಕೆ ಇದು 5,20,೦00 ಕೋಟಿ ರೂ.ಸಾಲವಿದೆ. ನಾವು ಬಡವರ ಪರವಾಗಿದ್ದೇವೆ. ಬೆಲೆ ಏರಿಕೆ ಹಾಗೂ ನಿರುದ್ಯೋಗದಿಂದ ತತ್ತರಿಸಿರುವ ಜನರ ಜೇಬಿಗೆ ಹಣ ತುಂಬುವ ಕೆಲಸ ಮಾಡಿದ್ದೇವೆ. ಸಾರ್ವತ್ರಿಕ ಮೂಲ ಆದಾಯವನ್ನು ಎಲ್ಲಾ ಅಭಿವೃದ್ಧಿಯಾಗಿರುವ ರಾಜ್ಯಗಳು ಮಾಡುತ್ತಿವೆ. ಇದು ಕರ್ನಾಟಕ ಮಾದರಿ ಉದ್ಯೋಗ ಸೃಷ್ಟಿಯಾಗಲು ಆರ್ಥಿಕ ಚಟುವಟಿಕೆಗಳು ಅಗತ್ಯ. ಇಲ್ಲದಿದ್ದರೆ ಹೂಡಿಕೆಗಳು ಆಗುವುದಿಲ್ಲ ಎಂದರು.
ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. 32 ಸಾವಿರ ಕೋಟಿ ರೂ.ಗಳು ಒಂದು ವರ್ಷಕ್ಕೆ ಖರ್ಚಾಗುತ್ತದೆ. ಒಂದು ಯೋಜನೆಗೆ ದೊಡ್ಡ ಮೊತ್ತವನ್ನು ವೆಚ್ಚ ಮಾಡುತ್ತಿರುವ ಮೊಲದ ರಾಜ್ಯ ಕರ್ನಾಟಕ. ಇದಕ್ಕಾಗಿ 17500 ಕೋಟಿ ಈ ವರ್ಷ ಮೀಸಟ್ಟಿದ್ದೇವೆ. ಅನ್ನಭಾಗ್ಯಕ್ಕೆ 10125 ಕೋಟಿ ರೂ, ಗೃಹಜ್ಯೋತಿಗೆ 13 ಸಾವಿರ ಕೋಟಿ, ಶಕ್ತಿಗೆ 2800 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದರು.
ನಮ್ಮ ಸರ್ಕಾರ ಎಲ್ಲರನ್ನು ಒಳಗೊಂಡ ಅಭಿವೃದ್ದಿಯ ಧ್ಯೇಯ ನಂಬಿದೆ:
ದಿನಪತ್ರಿಕೆಗಳಲ್ಲಿ ಬಜೆಟ್ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಮುಖ್ಯಮಂತ್ರಿಗಳು ಉಲ್ಲೇಖಿಸಿದರು. 2022-23ಬಜೆಟ್ ನಲ್ಲಿ ಗಾತ್ರ 2,65,720 ಕೋಟಿ ಇತ್ತು , ನಮ್ಮ ಸರ್ಕಾರದ ಬಜೆಟ್ 3,27,747 ಕೋಟಿ , 62,027 ಸಾವಿರ ಕೋಟಿ ಜಾಸ್ತಿಯಿದೆ. ಬೆಳವಣಿಗೆಯ ಪ್ರಮಾಣ ಶೇ. 22 ಇದೆ.. ರೈತರಿಗೆ 3 ಲಕ್ಷದವರೆಗೆ ಬಡ್ಡಿರಹಿತ ಸಾಲ ಮುಂಚೆ ನೀಡುತ್ತಿದ್ದೆವು. ಈಗ 5 ಲಕ್ಷದವರೆಗೆ ಮೊತ್ತವನ್ನು ಹೆಚ್ಚಿಸಲಾಗಿದೆ. 10 ಲಕ್ಷದವರೆಗೆ 3 % ಬಡ್ಡಿ ಇದ್ದಿದ್ದು , ಈಗ ಅದನ್ನು 15 ಲಕ್ಷಕ್ಕೆ ಏರಿಸಲಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ 9 , 10 ತರಗತಿ ವಿದ್ಯಾರ್ಥಿಗಳಿಗೂ ಸೇರಿ ವಾರದಲ್ಲಿ 2 ದಿನ ಮೊಟ್ಟೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ನಾವು 5 ವರ್ಷದಲ್ಲಿ 14,54,663 ಮನೆಗಳನ್ನು ಕಟ್ಟಿಸಿದೆವು . ನಾವು ಹಿಂದಿನ ಸರ್ಕಾರಕ್ಕಿಂತ 6 ಲಕ್ಷ ಮನೆಗಳನ್ನು ಹೆಚ್ಚಾಗಿ ನಿರ್ಮಿಸಿದ್ದೇವೆ. ನಮ್ಮ ಸರ್ಕಾರದ ಅವಧಿಯಲ್ಲಿ 14,169 ಹೆದ್ದಾರಿ ಅಭಿವೃದ್ಧಿಪಡಿಸಿದ್ದೆವು. ಅವರ ಸರ್ಕಾರ 8037 ಕಿ.ಮಿ ಮಾತ್ರ ನಿರ್ಮಿಸಿದ್ದಾರೆ ಎಂದು ತಿಳಿಸಿದರು.
ಎಸ್ ಸಿಎಸ್ ಪಿ / ಟಿಎಸ್ ಪಿ ಕಾನೂನು ಬಂದ ನಂತರ, ನಮ್ಮ ಸರ್ಕಾರ 5 ವರ್ಷದಲ್ಲಿ 88530 ಕೋಟಿ ಖರ್ಚು ಮಾಡಲಾಗಿದೆ. ನಮ್ಮದು ಬಡವರ ಪರವಾದ ಸರ್ಕಾರ. ನಮ್ಮ ಬಜೆಟ್ ಗಾತ್ರ 2018-19 ರಲ್ಲಿ 202297 ಕೊಟಿ ಇತ್ತು. ಆಗ 21691.5 ಎಸ್ ಸಿ ಎಸ್ ಟಿ ಗಳಿಗೆ ಮೀಸಲಿಟ್ಟಿದ್ದೆವು. . ಶಿಕ್ಷಣ, ಸಮಾಜಕಲ್ಯಾಣ, ಕೃಷಿ, ವಿದ್ಯುತ್, ಬೆಂಗಳೂರು ಅಭಿವೃದ್ಧಿ, ಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಸಾಮಾಜಿಕ, ಆರ್ಥಿಕ ವಲಯಕ್ಕೆ ಕಡಿಮೆ ಮಾಡಿಲ್ಲ. ನೀರಾವರಿ, ವಸತಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ನಮ್ಮ ಸರ್ಕಾರ ಎಲ್ಲರನ್ನು ಒಳಗೊಂಡ ಅಭಿವೃದ್ದಿಯ ಧ್ಯೇಯವನ್ನು ನಂಬಿದೆ ಎಂದರು
2023-24 ನೇ ಸಾಲಿನಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಈ ಆರ್ಥಿಕ ವರ್ಷಕ್ಕೆ ಸರ್ಕಾರದ ಮುಂಗಡ ಪತ್ರವನ್ನು ಮಂಡಿಸಿದ್ದು, ಹೊಸ ಸರ್ಕಾರ ಬಂದ ಮೇಲೆ ಜನರ ಆಶೋತ್ತರಗಳಿಗೆ ಸ್ಪಂದಿಸಲು, ಸರ್ಕಾರದ ನೀತಿ ನಿಲುವುಗಳು, ಪ್ರಣಾಳಿಕೆಯ ಭರವಸೆಗಳನ್ನು ಒಳಗೊಂಡಿರುವ ಆಯವ್ಯಯ ಮಂಡಿಸುವುದು ನಮ್ಮ ಕರ್ತವ್ಯ. ಬಜೆಟ್ ಮೇಲೆ 62 ಜನ ಆಡಳಿತ ಹಾಗೂ ವಿರೋಧ ಪಕ್ಷದವರು ಸೇರಿ ಮಾತನಾಡಿದ್ದಾರೆ. ಸುಮಾರು 12 ಗಂಟೆ 52 ನಿಮಿಷಗಳ ಕಾಲ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಟೀಕೆ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿರುವುದೆರಡನ್ನೂ ಸ್ವಾಗತಿಸುತ್ತೇನೆ ಎಂದು ತಿಳಿಸಿ ಚರ್ಚೆಯಲ್ಲಿ ಭಾಗವಹಿಸಿ ಅನಿಸಿಕೆಗಳನ್ನು ವ್ಯಕ್ತಮಾಡಿದ ವಿರೋಧಪಕ್ಷದವರಿಗೆ ಧನ್ಯವಾದಗಳನ್ನು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ