ಪ್ರಗತಿವಾಹಿನಿ ಸುದ್ದಿ: ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ ಶೇ50 ರಷ್ಟು ತೆರಿಗೆ ಪಾಲು ರಾಜ್ಯಕ್ಕೆ ವಾಪಾಸ್ ಕೊಡಿ ಎಂದು ಕೇಂದ್ರಕ್ಕೆ ಕೇಳಿದ್ದರು. ಈಗ ನಾವು ಕಟ್ಟುವ ಪ್ರತಿ ನೂರು ರೂಗೆ 12-13 ರೂ ಮಾತ್ರ ವಾಪಾಸ್ ಬರುತ್ತಿದೆ
ಬೆಂಗಳೂರು, ಫೆಬ್ರವರಿ 20 : ಶ್ರೀಮಂತರಿಂದ ತೆರಿಗೆಯನ್ನು ಕಾನೂನು ರೀತಿ ಸಂಗ್ರಹಿಸಿ, ಬಡವರಿಗೆ ಆರ್ಥಿಕ , ಸಾಮಾಜಿಕ ಶಕ್ತಿ ತುಂಬುತ್ತಿರುವುದು good economics. ನಾನು good economics ನಲ್ಲಿ ನಂಬಿಕೆಯಿಟ್ಟಿರುವವನು. ಮುಂದಿನ ವರ್ಷಕ್ಕೆ ಗ್ಯಾರಂಟಗಳಿಗೆ 52,009 ಕೋಟಿ ಮೀಸಲಿಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಇಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ಉತ್ತರ ನೀಡಿದರು.
15 ನೇ ಹಣಕಾಸು ಆಯೋಗ ರಾಜ್ಯಕ್ಕೆ ಒಟ್ಟಾರೆ 11495 ಕೋಟಿ ರೂ. ಶಿಫಾರಸ್ಸು ಮಾಡಿದ್ದನ್ನು ರಾಜ್ಯಕ್ಕೆ ಒತ್ತಾಯಿಸಿ ತನ್ನಿ ಎಂದು ಅಂದಿನ ಸರ್ಕಾರಕ್ಕೆ ತಿಳಿಸಿದ್ದೆ. ಕೇಂದ್ರದ ಬಜೆಟ್ 2023-24 ರಲ್ಲಿ ಭದ್ರಾ ಮೇಲ್ದಂಡೆಗೆ 5300 ಕೋಟಿ ರೂ. ನೀಡಲಾಗುವುದು ಎಂದು ಹೇಳಿ ಇದಕ್ಕೆ ಯಾವುದೇ ಷರತ್ತುಗಳನ್ನು ಆಗ ಉಲ್ಲೇಖಿಸಿರಲಿಲ್ಲ. ಈ ಬಗ್ಗೆ ಆ ಸಾಲಿನ ರಾಜ್ಯ ಬಜೆಟ್ ನಲ್ಲಿ ಅಂದಿನ ಮುಖ್ಯಮಂತ್ರಿ ಬೊಮ್ಮಾಯಿಯವರೂ ಉಲ್ಲೇಖಿಸಿದ್ದಾರೆ. ಆದರೆ ಈ ವರೆಗೂ ಒಂದು ರೂಪಾಯಿ ಕೂಡ ಬಂದಿಲ್ಲ. ಹೀಗಾಗಿ ಕೇಂದ್ರದಿಂದ 5300 ಕೋಟಿ ಸಹಾಯಧನವನ್ನು ಬೊಮ್ಮಾಯಿಯವರು ಕೊಡಿಸಲಿ ಎಂದು ಸವಾಲು ಹಾಕಿದರು.
ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ ಶೇ50 ರಷ್ಟು ತೆರಿಗೆ ಪಾಲು ರಾಜ್ಯಕ್ಕೆ ವಾಪಾಸ್ ಕೊಡಿ ಎಂದು ಕೇಂದ್ರಕ್ಕೆ ಕೇಳಿದ್ದರು. ಈಗ ನಾವು ಕಟ್ಟುವ ಪ್ರತಿ ನೂರು ರೂಗೆ 12-13 ರೂ ಮಾತ್ರ ವಾಪಾಸ್ ಬರುತ್ತಿದೆ. ಈ ಅನ್ಯಾಯಗಳ ಬಗ್ಗೆ ಸಂಸದರು ಬಾಯಿಯನ್ನೇ ಬಿಡುವುದಿಲ್ಲ. ಘಡ ಘಡ ನಡುಗುತ್ತಾರೆ ಎಂದು ವ್ಯಂಗ್ಯವಾಡಿದರು.
ಇಂತಹ ಕೇಂದ್ರ ಸರ್ಕಾರವಿದ್ದರೆ ರಾಜ್ಯಗಳು ಪಂಗನಾಮ ಹಾಕಿಕೊಳ್ಳಬೇಕಷ್ಟೇ. ಮೊದಲು 50% ರಾಜ್ಯದ ಪಾಲು ನೀಡಲಿಲ್ಲ ಎನ್ನುತ್ತಿದ್ದ ವಿರೋಧಪಕ್ಷದವರು , ಈಗ ಸರಿಯಾದ ನಮೂನೆ ಸಲ್ಲಿಸಿಲ್ಲ ಎಂದು ನೆಪ ಹೇಳುತ್ತಿದ್ದಾರೆ. ಇದು ಭಂಡತನದ ವಾದ ಎಂದರು.
ವಿಶೇಷ ಅನುದಾನ
ಬಜೆಟ್ ನಲ್ಲಿ ಘೋಷಿಸದ ಅನುದಾನ ಕೇಳಿದರೆ ಸಂಘರ್ಷ ಎನ್ನುತ್ತಾರೆ. ರಾಜ್ಯದ ಜನರ ಪರವಾಗಿ , ರಾಜ್ಯಕ್ಕೆ ನ್ಯಾಯ ಕೋರುವುದು ನಮ್ಮ ಧರ್ಮ . ಇಲ್ಲದಿದ್ದರೆ ಅವರಿಗೆ ದ್ರೋಹ ಬಗೆದಂತೆ.
ಮಧ್ಯಂತರ ವರದಿಯಲ್ಲಿ 5495 ಕೋಟಿ ಉಲ್ಲೇಖಿಸಲಾಗಿದ್ದು , ಅಂತಿಮ ವರದಿಯಲ್ಲಿ ಇದು ಇಲ್ಲವಾಗಿರುವುದಕ್ಕೆ ಹಣ ನೀಡಿಲ್ಲ ಎಂಬ ವಿವೇಚನೆಯಿಲ್ಲದ ಉತ್ತರವನ್ನು ವಿರೋಧಪಕ್ಷದವರು ನೀಡುತ್ತಿದ್ದಾರೆ. ಇದನ್ನು double standards ಎನ್ನಬೇಕಾಗುತ್ತದೆ ಎಂದರು.
ಫೆರಿಫೆರಲ್ ರಿಂಗ್ ರೋಡ್ ಹಾಗೂ ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ ಘೋಷಿಸಿದ್ದ 6000 ಕೋಟಿ ರೂ.ಗಳನ್ನೂ ನೀಡಿಲ್ಲ ಎಂದರು.
ಕೇಂದ್ರದಲ್ಲಿ ಮೋದಿ ಪ್ರಧಾನಿಯಾದ ಮೇಲೆ , ಕಾರ್ಪೊರೇಟ್ ತೆರಿಗೆಯ ನ್ನು 30% ರಿಂದ 22% ಕ್ಕೆ ಇಳಿಸಿದರು. ಆದರೆ ಜನಸಾಮಾನ್ಯರು ಕಟ್ಟುವ ತೆರಿಗೆಯ ಪಾಲು ಏರಿಕೆಯಾಗಿದೆ. ಗ್ಯಾಸ್, ಪೆಟ್ರೋಲ್, ಡೀಸೆಲ್, ರಸಗೊಬ್ಬರ ದರ ಏರಿಕೆಯಾಗಿದೆ. ಜತೆಗೆ ತೆರಿಗೆಯೂ ಹೆಚ್ಚಾಗಿದೆ ಎಂದರು.
ಬಡವರು, ದಲಿತರು, ಅಲ್ಪಸಂಖ್ಯಾತರು , ಧರ್ಮ ಜಾತಿ ಬೇಧವಿಲ್ಲದೇ ನಮ್ಮ ಗ್ಯಾರಂಟಿಗಳು ಜನ ಸಾಮಾನ್ಯರು ಮತ್ತು ಫಲಾನುಭವಿಗಳಿಗೆ ತಲುಪಿವೆ. ಅವರಿಗೆ ಆರ್ಥಿಕ ಸಾಮಾಜಿಕ ಬಲವನ್ನು ತುಂಬಲಾಗಿದೆ ಎಂದರು.
ಎಸ್ ಸಿ ಪಿ-ಟಿಎಸ್ ಪಿ ಕಾನೂನು ತಂದಿದ್ದು ಕಾಂಗ್ರೆಸ್ ನವರು.
ಈ ಬಾರಿ ಎಸ್ ಸಿ ಎಸ್ ಟಿ ಗೆ 39 ಸಾವಿರ ಕೋಟಿ ನೀಡಿದ್ದು. ಎಸ್ ಸಿ ಪಿ-ಟಿಎಸ್ ಪಿ ಕಾನೂನನ್ನು ಕೇಂದ್ರದವರು ರಾಷ್ಟ್ರ ಮಟ್ಟದಲ್ಲಿ ಜಾರಿ ಮಾಡಲಿ ನೋಡೋಣ ಎಂದರು.
ಕರ್ನಾಟಕ ರಾಜ್ಯದಲ್ಲಿ , ಮುಂಬಡ್ತಿಯಲ್ಲಿ ಮೀಸಲಾತಿ ತಂದಿದ್ದು ನಾವು. ಗುತ್ತಿಗೆದಾರರಿಗೆ ಮೀಸಲಾತಿ ಕಾನೂನು ತಂದಿದ್ದು ನಾವು. ಸಬ್ ಕಾ ಸಾಥ್ , ಸಬ್ ಕಾ ವಿಕಾಸ್ , ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗದೆ ಅದರಂತೆ ನಡೆದುಕೊಳ್ಳಲಿ ಎಂದು ಸವಾಲು ಹಾಕಿದರು.
223 ತಾಲ್ಲೂಕುಗಳಲ್ಲಿ ಬರ ಘೋಷಣೆ ಆಗಿದೆ. ಕೇಂದ್ರಕ್ಕೆ 2 ಮನವಿ ನೀಡಿದೆವು. ಕೇಂದ್ರದ ಸಚಿವರುಗಳನ್ನು ನಾವೆಲ್ಲಾ ಭೇಟಿ ಮಾಡಿದರೆ ಯಾವುದೇ ಸ್ಪಂದನೆ ಇಲ್ಲ. ಇದು ಮಲತಾಯಿ ಧೋರಣೆ. ಬರಪರಿಹಾರ 18171 ಕೋಟಿ ಕೇಳಿದ್ದೇವೆ. 35 ಸಾವಿರ ಕೋಟಿ ಬೆಳೆ ನಷ್ಟ , ಬೆಲೆ ಏರಿಕೆಯ ನಡುವೆಯೂ ಪರಿಹಾರ ಇಲ್ಲ.
ಕೇಂದ್ರ ಸರ್ಕಾರ ರೈತರ , ದಲಿತರ, ಬಡವರ , ಅಲ್ಪಸಂಖ್ಯಾತರ , ಮಹಿಳೆಯರ, ಕಾರ್ಮಿಕರ , ಸಂವಿಧಾನದ ವಿರೋಧಿಯಾಗಿದೆ.
ಅದ್ದರಿಂದ ನಾವು ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಂಡಿದ್ದೇವೆ. ನಾವು ಮನುವಾದದಲ್ಲಿ ನಂಬಿಕೆ ಇಟ್ಟಿಲ್ಲ, ಸಂವಿಧಾನದಲ್ಲಿ ನಂಬಿಕೆಯಿಟ್ಟಿರುವವರು ನಾವು. ಸರ್ವಜನಾಂಗದ ಶಾಂತಿಯ ತೋಟ ಎಂಬ ಮಾತಲ್ಲಿ ನಾವು ನಂಬಿಕೆಯಿರಿಸಿದ್ದೇವೆ. ಅದ್ದರಿಂದ ಎಲ್ಲ ವರ್ಗಗಳಿಗೆ ಶಕ್ತಿ ಸಲ್ಲಿಸಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ವಿವರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ