
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯದ ೧೦೪೫೦ ಗ್ರಾಮ ಸಹಾಯಕರನ್ನು ಡಿ ದರ್ಜೆ ನೌಕರರು ಎಂದು ಪರಿಗಣಿಸಿ, ಸೇವಾ ಭದ್ರತೆಗೆ ಸರಕಾರವನ್ನು ಒತ್ತಾಯಿಸಿ ಡಿ.೪ ರಂದು ವಿಧಾನ ಸೌಧಕ್ಕೆ ಮುತ್ತಿಗೆ ಮತ್ತು ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ಮಹಾದೇವಪ್ಪ ಇಂಗಳಗಿ ಹೇಳಿದರು.
ಗುರುವಾರ ನಗರದ ಕಂದಾಯ ಇಲಾಖೆಯ ನೌಕರರ ಬ್ಯಾಂಕ್ ಆವರಣದಲ್ಲಿ ನಡೆದ ಬೆಳಗಾವಿ ಜಿಲ್ಲಾ ಕಂದಾಯ ಇಲಾಖೆ ಗ್ರಾಮ ಸಹಾಯಕರ ನೌಕರರ ಸಂಘದ ಸಭೆಯಲ್ಲಿ ಮಾತನಾಡಿದ ಅವರು ಬೆಂಗಳೂರು, ಮೈಸೂರ, ಕಲಬುರಗಿ ಹಾಗೂ ಬೆಳಗಾವಿ ಹಾಗೂ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ನಡೆದ ರಾಜ್ಯ ಮಟ್ಟದ ವಿಶೇಷ ಸಭೆಗಳಲ್ಲಿ ನಿರ್ಧರಿಸಿದಂತೆ ಚನ್ನಮ್ಮನ ಕಿತ್ತೂರಿನ ರಾಣಿ ಚೆನ್ನಮ್ಮ ಕೋಟೆ ಮೈದಾನದಿಂದ ಬೇಡಿಕೆ ಈಡೇರುವರೆಗೆ ಅನಿರ್ದಿಷ್ಟ ಪಾದಯಾತ್ರೆ ಮೂಲಕ ಬೆಳಗಾವಿಯ ಸುವರ್ಣ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ಪೂರ್ವಭಾವಿಯಾಗಿ ನಿರ್ಧರಿಸಿದಂತೆ ಉಗ್ರ ಹೋರಾಟ ಮಾಡಲಾಗುವುದು ಎಂದರು. ರಾಜ್ಯ ಕಂದಾಯ ಇಲಾಖೆಯ ಗ್ರಾಮ ಸಹಾಯಕರ ಸಂಘದ ಕಾನೂನು ಹೋರಾಟ ಸಮಿತಿ ರಾಜ್ಯಾದ್ಯಕ್ಷ ಮಡಿವಾಳಪ್ಪ ವಣ್ಣೂರ ಮಾತನಾಡಿ ರಾಜ್ಯದ ಮೂಲೆ ಮೂಲೆಗಳಿಂದ ೧೦೪೫೦ ಗ್ರಾಮ ಸಹಾಯಕರು ಹಾಗೂ ಅವರ ಕುಟುಂಬದವರು ಊಟ ಕಟ್ಟಿಕೊಂಡು, ಹಾಸಿಗೆ ಸಹಿತವಾಗಿ ಹೋರಾಟಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.
ಬೆಳಗಾವಿ ಜಿಲ್ಲಾ ಗ್ರಾಮ ಸಹಾಯಕರ ಸಂಘದ ಉಪಾಧ್ಯಕ್ಷ ವೆಂಕಟೇಶ ಕೆಳಗೇರಿ, ರಾಜ್ಯ ಕಂದಾಯ ಇಲಾಖೆಯ ಗ್ರಾಮ ಸಹಾಯಕರ ಸಂಘದ ಕಾನೂನು ಹೋರಾಟ ಸಮಿತಿ ಉಪಾಧ್ಯಕ್ಷ ಪ್ರಕಾಶ ಅಂತನ್ನವರ, ಶರಣು ಹರಕುಣಿ, ಅಲ್ಲಾಬಾಕ್ಷ ಕೊರಬು, ಲಕ್ಷ್ಮಣ ಗೌಳಿ, ಹನಮಂತಪ್ಪ ಉಪ್ಪಾರ, ಬೆಳಗಾವಿ ತಾಲೂಕಾ ಅಧ್ಯಕ್ಷ ಮಲ್ಲಿಕಾರ್ಜುನ ನರಗುಂದ, ಸಂಘಟನಾ ಕಾರ‍್ಯದರ್ಶಿ ಸುನೀಲ ಕೋಲಕಾರ, ಕಿತ್ತೂರು ತಾಲೂಕಾಧ್ಯಕ್ಷ ಈರಣ್ಣ ಕುಂಟಿರಪ್ಪಗೋಳ, ಬೆಳಗಾವಿ ವಿಭಾಗ ಮಟ್ಟದ ಪದಾಧಿಕಾರಿಗಳು, ಜಿಲ್ಲೆಯ ಎಲ್ಲ ತಾಲೂಕು ಅಧ್ಯಕ್ಷರು, ವಿವಿಧ ಪದಾಧಿಕಾರಿಗಳು, ಗ್ರಾಮ ಸಹಾಯಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ