Kannada NewsKarnataka NewsLatest

ಲಿಂಗಾಯತ ಮಹಿಳಾ ಸಮಾಜದ ಬೆಳ್ಳಿ ಹಬ್ಬ ಸಂಭ್ರಮ

ಲಾಕ್‌ಡೌನ್ ಸಮಯದಲ್ಲಿ ಆತ್ಮಚರಿತ್ರೆಯನ್ನು ಬರೆದಿದ್ದೇನೆ – ಲೀಲಾದೇವಿ ಪ್ರಸಾದ

 

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆಧುನಿಕ ತಂತ್ರಜ್ಞಾನವನ್ನು ಸದ್ಭಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸಿಯಾಗಿ, ಸುಂದರ ಜೀವನ ಕಟ್ಟಿಕೊಳ್ಳಬೇಕು ಹೊರತು ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಮಾಜಿ ಸಚಿವೆ ಡಾ.ಲೀಲಾದೇವಿ ಪ್ರಸಾದ ಹೇಳಿದರು.
ನಗರದ ಜೆಎನ್‌ಎಂಸಿ ಜಿರಗಿ ಸಭಾಭವನಲ್ಲಿ ಸೋಮವಾರ ಲಿಂಗಾಯತ ಮಹಿಳಾ ಸಮಾಜ ವತಿಯಿಂದ ಆಯೋಜಿಸಿದ ಬೆಳ್ಳಿ ಹಬ್ಬ ಸಂಭ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಬಳಕೆ ಕೈಮೀರಿದೆ, ವಿದ್ಯಾರ್ಥಿಗಳು ಮೊಬೈಲ್‌ಗೆ ಅಂಟಿಕೊಂಡು ಓದುವುದನ್ನು ಬಿಟ್ಟಿದ್ದಾರೆ. ಮೊಬೈಲ್ ಶಿಕ್ಷಣಕ್ಕಾಗಿ, ಅಗತ್ಯಗೋಸ್ಕರ ಬಳಕೆಯಾಗಬೇಕಿದೆ. ಮೊಬೈಲ್ ಗಿಳಿಯಿಂದ ನಮ್ಮ ಸಂಸ್ಕೃತಿ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಲಾಕ್‌ಡೌನ್ ಸಮಯದಲ್ಲಿ ಆತ್ಮಚರಿತ್ರೆಯನ್ನು ಬರೆದಿದ್ದೇನೆ. ಅದು ನನ್ನ ೨೮ ನೇ ಪುಸ್ತಕವಾಗಿದೆ. ಈಗ ಮುದ್ರಣ ಹಂತದಲ್ಲಿದೆ. ವಿಜಯಪುರದ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಎಂದು ಹೆಸರಿಡಲು ಹೋರಾಟ ಮಾಡಿದ್ದೆವು. ಅದು ಯಶಸ್ಸಿಯಾಗಿದೆ. ಆದರೆ ಮೈಸೂರು-ಶಿವಮೊಗ್ಗ ಎಕ್ಸ್‌ಪ್ರೆಸ್ ರೈಲ್ವೆಗೆ ’ಅಕ್ಕ ಎಕ್ಸ್‌ಪ್ರೆಸ್’ ಎಂದು ನಾಮಕರಣ ಮಾಡುವಂತೆ ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ಅವರಿಗೆ ಮನವಿ ಮಾಡಿದ್ದೆ. ಅದೊಂದು ಆಸೆ ಉಳಿದುಕೊಂಡಿದೆ ಎಂದು ತಿಳಿಸಿದರು.
ರಾಜ್ಯ ಸರಕಾರದ ಮಹಿಳಾ ಟಾಸ್ಕ್ ಫೋರ್ಸ್ ನ ಮಾಜಿ ಅಧ್ಯಕ್ಷೆ ಗುರಮ್ಮ ಸಿದ್ದಾರೆಡ್ಡಿ ಮಾತನಾಡಿ, ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಒಳ್ಳೆಯ ಕೆಲಸ ಮಾಡಬೇಕು. ಅದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ನಮ್ಮ ನಡೆ-ನುಡಿ ಸರಿ ಇದ್ದರೆ ಜನರು ಗೌರವಿಸುತ್ತಾರೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ನಬಾರ್ಡ್ ಯೋಜನೆಯಡಿಯ ಹಣ ಪಡೆದು ಮಹಿಳೆಯರಿಗೆ ವಿಮೆ ಮಾಡಿಕೊಡಬೇಕು. ಅವರ ಈ ಕೆಲಸ ಮಾಡಿಕೊಟ್ಟರೆ ಸುವರ್ಣಾಕ್ಷರಗಳಿಂದ ಬರೆದಿಡುವ ದಿನವಾಗುತ್ತದೆ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಜಯಶೀಲಾ ಬ್ಯಾಕೋಡ ಮತ್ತು ಡಾ.ಭಾರತಿ ಮಠದ ಅವರು ಬರೆದ ಮಹಿಳಾ-ಸಂಗಮ ಕೃತಿಯನ್ನು ಗುರಮ್ಮ ಸಿದ್ದಾರೆಡ್ಡಿ ಲೋಕಾರ್ಪಣೆಗೊಳಿಸಿದರು. ಬಳಿಕ ಕೃತಿ ಬರೆದ ಜಯಶೀಲಾ ಬ್ಯಾಕೋಡ ಮತ್ತು ಡಾ.ಭಾರತಿ ಮಠದ ಅವರಿಗೆ ಮಾಜಿ ಸಚಿವೆ ಲೀಲಾದೇವಿ ಪ್ರಸಾದ ಅವರು ಬೆಳ್ಳಿ ನಾಣ್ಯಗಳನ್ನು ನೀಡಿ ಗೌರವಿಸಿದರು.
ಪ್ರತಿಭಾ ಕಳ್ಳಿಮಠ ಮತ್ತು ಸಂಡಿಗರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಮಾತೆ ವಾಗ್ದೇವಿ ತಾಯಿ, ಕಸಾಪ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷೆ ರತ್ನಪ್ರಭ ಬೆಲ್ಲದ, ಲಿಂಗಾಯತ ಮಹಿಳಾ ಸಮಾಜದ ಗೌರವಾಧ್ಯಕ್ಷೆ ಶೈಲಜಾ ಭಿಂಗೆ, ಪದಾಧಿಕಾರಿಗಳಾದ ಶೈಲಜಾ ಪಾಟೀಲ, ಜ್ಯೋತಿ ಬದಾಮಿ, ಆಶಾ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು. ಸುನಂದಾ ಎಮ್ಮಿ ನಿರೂಪಿಸಿದರು. ಅನುರಾಧಾ ಬಾಗಿ ಸ್ವಾಗತಿಸಿದರು. ಇಂದಿರಾ ಮೋಟೆಬೆನ್ನೂರ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button