*ಎಸ್ಐಆರ್, ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧದ ಆರೋಪಗಳಿಗೆ ಸ್ಪಷ್ಟನೆ ನೀಡಿದ ಚುನಾವಣಾ ಆಯೋಗ*

ಪ್ರಗತಿವಾಹಿನಿ ಸುದ್ದಿ: ಎಸ್ಐಆರ್ ಪ್ರಕ್ರಿಯೆ ಎಲ್ಲಾ ಚುನಾವಣಾ ಆಯುಕ್ತರ ಒಮ್ಮತದ ನಿರ್ಧಾರವಾಗಿದೆ . ಇದು ಏಕಪಕ್ಷೀಯ ತೀರ್ಮಾನವಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಹಲವು ಆಕ್ಷೇಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗವು ಪ್ರಮುಖ ನಿರ್ಧಾರವನ್ನು ಕೈಗೊಂಡಿದೆ.
ಪ್ರಸ್ತುತ ನಡೆಯುತ್ತಿರುವ ಪರಿಷ್ಕರಣಾ ಪ್ರಕ್ರಿಯೆಯಲ್ಲಿ, ಮತದಾರರ ಪಟ್ಟಿಯಲ್ಲಿ ತಾಳೆಯಾಗದ ಮತ್ತು ತಾರ್ಕಿಕ ವ್ಯತ್ಯಾಸಗಳ ಕಾರಣಕ್ಕೆ ನೋಟಿಸ್ ಪಡೆದಿರುವ ಜನರು ಚುನಾವಣಾಧಿಕಾರಿಗಳ ಕಚೇರಿಗೆ ಹೋಗುವ ಅಗತ್ಯವಿಲ್ಲ. ಅಂತಹ ವ್ಯಕ್ತಿಗಳ ಮನೆಗಳಿಗೆ ಬೂತ್ ಮಟ್ಟದ ಅಧಿಕಾರಿಗಳೇ ಖುದ್ದಾಗಿ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಲಿದ್ದಾರೆ. ಬಳಿಕ ಅದನ್ನು ಇಸಿಐನೆಟ್ (ECINet) ಪೋರ್ಟಲ್ನಲ್ಲಿ ಅಪ್ ಲೋಡ್ ಮಾಡಲಿದ್ದಾರೆ ಎಂದು ತಿಳಿಸಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಚುನಾವಣಾ ಆಯುಕ್ತರಾದ ವಿವೇಕ್ ಜೋಶಿ, ಸುಖ್ ಬೀರ್ ಸಿಂಗ್ ಸಂಧು ಅವರ ನೇತೃತ್ವದಲ್ಲಿ ಇಲ್ಲಿನ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಚುನಾವಣಾ ಆಯೋಗದ ಪ್ರಕಟಣೆಯ ಪ್ರಕಾರ, ದಾಖಲೆ ಸಲ್ಲಿಕೆಗಾಗಿ ಜನರು ಚುನಾವಣಾಧಿಕಾರಿ ಕಚೇರಿಗಳಿಗೆ ಅಲೆಯಬೇಕಿಲ್ಲ. ಕೇವಲ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಆನ್ಲೈನ್ ಮೂಲಕ ವಿಚಾರಣೆ ನಡೆಸಲು ಇಆರ್ಒ ನಿರ್ಧರಿಸಬಹುದು. ಅಗತ್ಯಬಿದ್ದಲ್ಲಿ ಮತದಾರರ ಪರವಾಗಿ ಕುಟುಂಬ ಯಾವುದೇ ವಯಸ್ಕ ಸದಸ್ಯ ವಿಚಾರಣೆಗೆ ಹಾಜರಾಗಬಹುದು ಎಂದು ತಿಳಿಸಿದೆ.
ದೆಹಲಿ ಮತ್ತು ಮಹಾರಾಷ್ಟ್ರ ಮುಖ್ಯ ಚುನಾವಣಾಧಿಕಾರಿಗಳ ಮನವಿಯ ಮೇರೆಗೆ ಮತದಾರರ ಪಟ್ಟಿಗೆ ಸಂಬಂಧಿಸಿದ ಆಕ್ಷೇಪಣೆ ಮತ್ತು ಹಕ್ಕುಗಳ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗಿದೆ. ದೆಹಲಿಯಲ್ಲಿ ಅಕ್ಟೋಬರ್ 30 ರವರೆಗೆ, ಮಹಾರಾಷ್ಟ್ರದಲ್ಲಿ ಅಕ್ಟೋಬರ್ 12 ರವರೆಗೆ ಅವಕಾಶ ನೀಡಲಾಗಿದೆ.
ಬಿಹಾರ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ 20 ರಾಜ್ಯಗಳು- ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗಾಗಲೇ ಎಸ್ಐಆರ್ ನಡೆದಿದೆ. ಈ ಪ್ರಕ್ರಿಯೆಯಲ್ಲಿ ಹೆಸರು ಬಿಟ್ಟು ಹೋದವರು ಅಥವಾ ಹೊಸ ಮತದಾರರು ತಮ್ಮ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸಬಹುದು. ಈ ಮತದಾರರ ನೋಂದಣಿಗೆ ವಿಶೇಷ ಆಂದೋಲನ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇನ್ನು ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದ ಚುನಾವಣಾ ಆಯೋಗದಲ್ಲಿನ ಭಿನ್ನಾಭಿಪ್ರಾಯಗಳ ಕುರಿತು ಆಯೋಗವು ಪ್ರತಿಕ್ರಿಯಿಸಿದ್ದು, ಕ್ಯಾಬಿನೆಟ್ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದ್ದು, ಆಯೋಗದ ಇತರ ಆಯುಕ್ತರ ಆಕ್ಷೇಪ ಉನ್ನತಾಧಿಕಾರಿಯ ಕಾರ್ಯವೈಖರಿಯ ಕುರಿತಾಗಿದೆ. ದೇಶಾದ್ಯಂತ ಜಾರಿಗೆ ತರಲಾದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್) ಆದೇಶ ಸೇರಿದಂತೆ ಇತ್ತೀಚಿನ ಎಲ್ಲ ಪ್ರಮುಖ ನಿರ್ಧಾರಗಳನ್ನು ಆಯೋಗವು ಒಮ್ಮತದ ಅಂಗೀಕಾರಗೊಂದಿಗೆ ತೆಗೆದುಕೊಳ್ಳಲಾಗಿದೆ. ಇದನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿದೆ ಎಂದು ಸ್ಪಷ್ಟನೆ ನೀಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




