Kannada NewsKarnataka NewsLatest

40 ವರ್ಷದಿಂದ ಕನ್ನಡದಲ್ಲೇ ನ್ಯಾಯಾಲಯ ಕಲಾಪ!

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಕಳೆದ ೪೦ ವರ್ಷಗಳಿಂದ ನಾನೊಬ್ಬ ನ್ಯಾಯವಾದಿಯಾಗಿ ನ್ಯಾಯಾಲಯದ ಕಲಾಪಗಳಲ್ಲಿ ಕೇವಲ ಕನ್ನಡವನ್ನು ಬಳಸಿದ್ದೇನೆ. ಕನ್ನಡದ ಬಳಕೆಯಿಂದ ನನಗೆ ಯಾವ ತೊಂದರೆಯೂ ಆಗಿಲ್ಲ ಎಂದು ಅಥಣಿಯ ಹಿರಿಯ ಸಾಹಿತಿ ಹಾಗೂ ನಾಟಕಕಾರ ಕೆ.ಎಲ್.ಕುಂದರಗಿ ಹೇಳಿದರು.

ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನವು ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಭಾನುವಾರದಂದು ತನ್ನ ೧೩ ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಗಡಿನಾಡು ಸಾಹಿತ್ಯ ಮತ್ತು ಸಂಸ್ಕೃತಿ ಉತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವಿಂದು ಇಂಗ್ಲೀಷ್ ವ್ಯಾಮೋಹವನ್ನು ಬಿಟ್ಟು ಕನ್ನಡವನ್ನು ಅಪ್ಪಿಕೊಳ್ಳಬೇಕಾಗಿದೆ. ಮಾತೃ ಭಾಷಾ ಪ್ರೇಮವನ್ನು ಕಾರ್ಯರೂಪಕ್ಕೆ ತರಬೇಕಾಗಿದೆ ಎಂದರು.

ಗಡಿ ಭಾಗದಲ್ಲಿ ಭಾಷೆಯು ಹಿಂಸೆ ಆಗಬಾರದು. ಅನ್ಯ ಭಾಷಿಕರ ಹೃದಯ ಗೆಲ್ಲುವ ಮೂಲಕ ರಾಜ್ಯ ಭಾಷೆಯನ್ನು ಸೌಹಾರ್ದಯುತವಾಗಿ ಅನುಷ್ಠಾನಗೊಳಿಸಬೇಕು. ರಾಜ್ಯ ಭಾಷೆಯು ನಮ್ಮ ತಾಯಿ ಇದ್ದಂತೆ. ಅನ್ಯ ಭಾಷೆ ಚಿಕ್ಕಮ್ಮನಂತೆ. ಎರಡು ಭಾಷೆಗಳ ನಡುವೆ ಸೌಹಾರ್ದತೆ ಇರಬೇಕು ಎಂದರು.
ಕನ್ನಡ ನಮ್ಮ ಮಾತೃ ಭಾಷೆ. ಮಾತೃ ಭಾಷೆಯಿಂದ ಸಿಗುವ ಜ್ಞಾನವು ಬೇರೆ ಭಾಷೆಯಿಂದ ಸಿಗುವುದಿಲ್ಲ. ಇಂಗ್ಲೀಷ್ ಕೇವಲ ಒಂದು ಭಾಷೆ ಮಾತ್ರ. ಮಾತೃ ಭಾಷೆಯಿಂದ ಸಿಗುವಷ್ಟು ಜ್ಞಾನ ಇಂಗ್ಲೀಷ್ ಭಾಷೆಯಿಂದ ಸಿಗುವುದಿಲ್ಲ. ಮಾತೃ ಭಾಷೆಯು ನಮ್ಮ ಹೃದಯವನ್ನು ನಾಟುತ್ತದೆ. ಕನ್ನಡ ಭಾಷೆ ಕೇವಲ ಭಾಷಣಕ್ಕೆ ಸೀಮಿತವಾಗಬಾರದು. ಅದು ಆಚರಣೆಗೆ ಬರಬೇಕು. ಕನ್ನಡದ ಕಾರ್ಯಕ್ರಮಗಳಲ್ಲಿ ಶುದ್ದ ಹಾಗೂ ಅನ್ಯ ಭಾಷೆಯ ಶಬ್ದಗಳ ಕಲಬೆರಕೆ ಇಲ್ಲದ ಭಾಷೆಯ ಬಳಕೆ ಆಗಬೇಕು ಎಂದರು.
ಕಲಾವಿದರನ್ನು ರಾಜ್ಯ ಸರಕಾರವು ಗೌರವದಿಂದ ನಡೆಸಿಕೊಳ್ಳಬೇಕು. ಕಲಾವಿದರು ಮೋಸಗಾರರಲ್ಲ. ವಂಚಕರಲ್ಲ. ಬಡತನದಲ್ಲಿ ಹುಟ್ಟುವ ಕಲಾವಿದರು. ಬಡತನದಲ್ಲಿಯೇ ಬದುಕುತ್ತಾರೆ. ಕಲೆಯೇ ಅವರ ಜೀವನ. ಸರಕಾರಗಳು ಕಲಾವಿದರ ಪೋಷಕರಾಗಬೇಕು ಎಂದ ಅವರು, ತಮ್ಮನ್ನು ಈ ಸಮ್ಮೇಳನದ ಗೌರವಾಧ್ಯಕ್ಷರನ್ನಾಗಿ ಮಾಡುವ ಮೂಲಕ ನನ್ನ ಮನೆಯ ಜನ ನನಗೆ ಗೌರವ ಕೊಟ್ಟಿದ್ದಾರೆ. ಮನೆಯ ಗೌರವ ಸಿಕ್ಕಿದಕ್ಕೆ ನನಗೆ ಅತೀವ ಸಂತೋಷವಾಗಿದೆ ಎಂದರು.

ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಉದ್ಘಾಟಿಸಿದರು. ಕಲಾವಿದರ ಕುರಿತು ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ.ಶಿವಕುಮಾರ ನಿಲುವು ಸರಿಯಲ್ಲ. ಕಲಾವಿದರನ್ನು ಮಟ್ಟ ಹಾಕುತ್ತೇನೆ ಎನ್ನುವಂತಹ ಮಾತನ್ನು ಆಡಬಾರದು. ಕಲಾವಿದರಿಗೆ, ಕಾರ್ಯಕ್ರಮಗಳಿಗೆ ಕೊಡಲಾಗುತ್ತಿದ್ದ ಅನುದಾನ ನಿಲ್ಲಿಸಬಾರದು. ಈ ಸಂಬಂಧ ಪತ್ರ ಬರೆಯುತ್ತೇನೆ ಎಂದು ಹೊರಟ್ಟಿ ಹೇಳಿದರು.

ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಪ್ರೋಫೆಸರ್ ಎಸ್.ಎಂ.ಹುರಕಡ್ಲಿ, ಕನ್ನಡ ಚಲನಚಿತ್ರ ಕಲಾವಿದೆ ಅಂಜಲಿ ಕಾಂಬಳೆ ಮಾತನಾಡಿದರು.

ಪ್ರತಿಷ್ಠಾನದ ಅಧ್ಯಕ್ಷ ಶಶಿಧರ ಘಿವಾರಿ ಸ್ವಾಗತಿಸಿದರು. ವಿಜಯಲಕ್ಷ್ಮೀ ಪುಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಮೈತ್ರಾಯಿಣಿ ಗದಿಗೆಪ್ಪಗೌಡರ ಅತಿಥಿಗಳನ್ನು ಪರಿಚಯಿಸಿದರು. ಪ್ರತಿಷ್ಠಾನದ ರುದ್ರಣ್ಣ ಚಂದರಗಿ, ವಿ.ಬಿ.ದೊಡಮನಿ, ಆಶಾ ಯಮಕನಮರಡಿ, ನಿರ್ಮಲಾ ಬಟ್ಟಲ ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಿದ್ದರು. ವಿವಿಧ ಕ್ಷೇತ್ರಗಳ  ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button