
ಪ್ರಗತಿವಾಹಿನಿ ಸುದ್ದಿ: ಮಕ್ಕಳಿಗೆ ಪಾಠ ಮಾಡಲು ಸೇರಿದ ಶಾಲೆಯಲ್ಲೇ ಸೇವಾ ನಿವೃತ್ತಿ ಆಗುತ್ತಿರುವ ತಾಲೂಕಿನ ಬಚಗಾಂವ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಪ್ರಭಾ ಭಾಸ್ಕರ ಹೆಗಡೆ ಅವರನ್ನು ಗುರುವಾರ ಆತ್ಮೀಯವಾಗಿ ಗೌರವಿಸಲಾಯಿತು.
ಮಕ್ಕಳಿಗೆ ಪಾಠದ ಜೊತೆಗೆ ಸಂಸ್ಕಾರಯುತ ಶಿಕ್ಷಣ ನೀಡುವ ಜೊತೆಗೆ ಸಾರ್ವಜನಿಕ ಚುನಾವಣೆಯಲ್ಲೂ ಮತಗಟ್ಟೆ ಅಧಿಕಾರಿಯಾಗಿ ಅತ್ಯುತ್ತಮ ಕಾರ್ಯ ಮಾಡಿದ್ದಕ್ಕೆ ಪುರಸ್ಕಾರ ಪಡೆದಿದ್ದ ಪ್ರಭಾ ಹೆಗಡೆ ಅವರನ್ನು ಶಾಲಾ ಮಕ್ಕಳು, ಪಾಲಕರು, ಶಾಲಾಭಿವೃದ್ಧಿ ಸಮಿತಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರಳ ಸಮಾರಂಭದಲ್ಲಿ ಗೌರವಿಸಲಾಯಿತು.
ಸನ್ಮಾನದಲ್ಲಿ ಭಾಗವಹಿಸಿದ ಡಯಟ್ ಪ್ರಾಚಾರ್ಯ ಎಂ.ಎಸ್.ಹೆಗಡೆ, ಅತ್ಯುತ್ತಮ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಪ್ರಭಾ ಅವರ ಕೊಡುಗೆ ಮಕ್ಕಳ ಮೂಲಕ ಕಾಣುತ್ತದೆ ಎಂದರು.
ತಾಲೂಕು ಶಿಕ್ಷಕ ಸಂಘದ ಅಧ್ಯಕ್ಷ ಸುರೇಶ ಪಟಗಾರ, ಸೆ.30ಕ್ಕೆ ಸೇವಾ ನಿವೃತ್ತರಾಗಲಿದ್ದರೂ ದಸರಾ ರಜೆ ಹಿನ್ನೆಲೆಯಲ್ಲಿ ಈಗಲೇ ಗೌರವಿಸಲಾಗುತ್ತಿದೆ. ಕಪ್ಪು ಚುಕ್ಕೆ ಇಲ್ಲದೇ ಮಕ್ಕಳ ಏಳ್ಗೆಗೆ ಕೆಲಸ ಮಾಡಿದವರು ಪ್ರಭಾ ಹೆಗಡೆ ಅವರು ಎಂದು ಬಣ್ಣಿಸಿದರು.
ಸನ್ಮಾನಿತರಾದ ಪ್ರಭಾ ಅವರು, ತಮ್ಮ ತಂದೆ ಭಾಸ್ಕರ ಹೆಗಡೆ ಅವರು ಶಿಕ್ಷಕರಾಗಿದ್ದರು. ಅವರ ಆಸೆಯಂತೆ ನಾನೂ ಶಿಕ್ಷಕಿಯಾದೆ. ಒಂದರಿಂದ ಏಳನೇ ವರ್ಗದ ತನಕ ನಾನು ಏಳು ಶಾಲೆಯಲ್ಲಿ ಕಲಿತವನು. ಆದರೆ, ಶಿಕ್ಷಕಿಯಾಗಿ ಸೇರಿದ ನನಗೆ ಕೌನ್ಸಲಿಂಗ್ ಸಮಯದಲ್ಲೂ ಒಂದೇ ಶಾಲೆಯಲ್ಲಿ ಕಲಿಸುವ ಅವಕಾಶ ಸಿಕ್ಕಿತು. ಇದರಿಂದ ಸೇರಿದ ಶಾಲೆಯಲ್ಲೇ ನಿವೃತ್ತಿಯಾಗುತ್ತಿದ್ದೇನೆ ಎಂದರು.
ಇಲಾಖೆಯ ಬಿಆರ್ ಸಿ ದಿನೇಶ ಶೆಟ್ಟಿ, ಸಿಆರ್ ಪಿ ಸಯ್ಯದ ಝಾಕೀರ, ಖಜಾಂಚಿ ಅರುಣ ನಾಯ್ಕ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಅರೇರ, ಉಪಾಧ್ಯಕ್ಷ ತಸ್ಲಿಂ ಭಾನು, ಸದಸ್ಯ ಸಂತೋಷ ಬಿಸಿ, ಮುಖ್ಯ ಶಿಕ್ಷಕಿ ಲತಾ ಶೆಟ್ಟಿ, ಸಹ ಶಿಕ್ಷಕಿ ರಮೇಶ ನಾಯ್ಕ, ಅತಿಥಿ ಶಿಕ್ಷಕಿ ಶೃತಿ ಮಡಿವಾಳ, ಅನುರಾಧ ಮಡಿವಾಳ, ಮಂಗಲಾ ನಾಯ್ಕ, ಬೈಫ್ ನಿವೃತ್ತ ಅಧಿಕಾರಿ ವಿಶ್ವನಾಥ.ಎಸ್.ಭಟ್ ಇದ್ದರು.