Kannada NewsKarnataka News

ಬೆಳಗಾವಿ ನಗರದಲ್ಲಿ ಸರಕಾರಿ ಕಚೇರಿಗಳ ಬಹುಮಹಡಿ ಕಟ್ಟಡ‌ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನಗರದ ಹೃದಯಭಾಗದಲ್ಲಿ ಇರುವ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಇತರೆ ಕಚೇರಿಗಳ ಜಾಗೆಯಲ್ಲಿಯೇ ಸರಕಾರಿ ಕಚೇರಿಗಳ ಸುಸಜ್ಜಿತ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ಶನಿವಾರ(ಜೂ.3) ಸ್ಥಳ ಪರಿಶೀಲನೆ ನಡೆಸಿತು.
ಲೋಕೋಪಯೋಗಿ ಇಲಾಖೆಯ ಸಚಿವರಾಗಿರುವ ಸತೀಶ್ ಜಾರಕಿಹೊಳಿ ಅವರ ನಿರ್ದೇಶನದಂತೆ ನಗರಕ್ಕೆ ಆಗಮಿಸಿದ ತಂಡವು ಸ್ಥಳವನ್ನು ವೀಕ್ಷಿಸಿ ಅಗತ್ಯ ಮಾಹಿತಿಯನ್ನು ಪಡೆದುಕೊಂಡಿತು.
ಲೋಕೋಪಯೋಗಿ ಇಲಾಖೆಯ ಪ್ರಭಾರ ಮುಖ್ಯ ವಾಸ್ತುಶಿಲ್ಪಿ  ಆರ್.ಶ್ರೀಧರ್ ಅವರ ನೇತೃತ್ವದ ತಂಡವು ಬಹುಮಹಡಿ ಕಟ್ಟಡವನ್ನು ನಿರ್ಮಿಸಲು ಉದ್ಧೇಶಿಸಿರುವ ಜಾಗೆಯನ್ನು ವೀಕ್ಷಿಸಿತು.
ಈಗಿರುವ ಜಿಲ್ಲಾಧಿಕಾರಿ ಕಚೇರಿ, ಕಾಡಾ, ತೋಟಗಾರಿಕೆ, ಉಪ ನೋಂದಣಾಧಿಕಾರಿಗಳ ಕಚೇರಿ, ಸಣ್ಣ ಉಳಿತಾಯ, ಗ್ರಂಥಾಲಯ, ಲೋಕಾಯುಕ್ತ, ಉಪ ವಿಭಾಗಾಧಿಕಾರಿಗಳ ಕಚೇರಿ, ತಾಲ್ಲೂಕು ಪಂಚಾಯತ ಸೇರಿದಂತೆ ವಿವಿಧ ಕಚೇರಿಗಳನ್ನು ತೆರವುಗೊಳಿಸಿ ಅದೇ ಜಾಗೆಯಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ.
ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ವಿವಿಧ ಕಚೇರಿಗಳನ್ನು ಒಂದೇ ಸೂರಿನಡಿಗೆ ತಂದು ವಿಶಾಲವಾದ ಪಾರ್ಕಿಂಗ್ ಒಳಗೊಂಡಂತೆ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸುವ ಉದ್ಧೇಶವಿರುತ್ತದೆ.
ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಸುವರ್ಣ ವಿಧಾನಸೌಧದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣದ ಕುರಿತು ಪ್ರಾಥಮಿಕ ಚರ್ಚೆ ನಡೆಸಿದ್ದ ಸಚಿವರು, ಈ ಕುರಿತು ಸ್ಥಳ ಪರಿಶೀಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದರು.
ಆ ಪ್ರಕಾರ ಲೋಕೋಪಯೋಗಿ ಇಲಾಖೆಯ ಮುಖ್ಯ ವಾಸ್ತುಶಿಲ್ಪಿ ನೇತೃತ್ವದ ತಂಡವು ನಗರಕ್ಕೆ ಭೇಟಿ ನೀಡಿರುತ್ತದೆ.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರನ್ನು ಭೇಟಿ ಮಾಡಿದ ಲೋಕೋಪಯೋಗಿ ಇಲಾಖೆಯ ಪ್ರಭಾರ ಮುಖ್ಯ ವಾಸ್ತುಶಿಲ್ಪಿ ಆರ್.ಶ್ರೀಧರ್ ಅವರು, ಉದ್ಧೇಶಿತ ಬಹುಮಹಡಿ ಕಟ್ಟಡದಲ್ಲಿ ಇರಬೇಕಾದ ಅಗತ್ಯತೆಗಳು, ವಿನ್ಯಾಸ ಮತ್ತಿತರ ವಿಷಯಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿದರು.
ಲೋಕೋಪಯೋಗಿ ಇಲಾಖೆಯ ಉಪ ವಾಸ್ತುಶಿಲ್ಪಿ ಶ್ರೀಮತಿ ಆಶಾ, ಬೆಳಗಾವಿಯ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎಸ್.ಸೊಬರದ, ಕಾರ್ಯನಿರ್ವಾಹಕ ಎಂಜಿನಿಯರ್ ಸುಭಾಸ್ ನಾಯ್ಕ, ರಮೇಶ್ ಮೇತ್ರಿ ಉಪಸ್ಥಿತರಿದ್ದರು.

https://pragati.taskdun.com/act-responsibly-according-to-peoples-expectations-lakshmi-hebbalkar/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button