
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಾಲೂಕಿನ ಸುಳೇಬಾವಿ ಗ್ರಾಮದಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಎಂ.ಬಿ. ಬೋರಲಿಂಗಯ್ಯ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರ ತಡ ರಾತ್ರಿ 6 ರಿಂದ 7 ಜನರ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಪ್ರಕಾಶ್ ಪಾಟೀಲ್ ಹಾಗೂ ಮಹೇಶ್ ಮುರಾರಿ ಎಂಬ ಯುವಕರನ್ನು ಹತ್ಯೆ ಮಾಡಿ ಪರಾರಿಯಾಗಿದೆ. ತಾವು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಳಗಾವಿ ಗ್ರಾಮೀಣ ಎಸಿಪಿ ಗಿರೀಶ್, ಮಾರಿಹಾಳ ಸಿಪಿಐ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದರು.
ಪ್ರಕರಣಕ್ಕೆ ಸಂಬಂಧಿಸಿ ವಶಕ್ಕೆ ಪಡೆಯಲಾದ ಆರೋಪಿಗಳು ಸಹ ಅದೇ ಊರಿನವರಾಗಿದ್ದು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಪೈಕಿ ಕೆಲವರು ಕೊಲೆಯಾದ ಯುವಕರ ದೂರ ಸಂಬಂಧಿಗಳು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಅವರು ಹೇಳಿದರು.
ವೈಯಕ್ತಿಕ ದ್ವೇಷಗಳಿಂದ ಗಲಾಟೆ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಎರಡು ಮೂರು ದಿನಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿತ್ತು. ವಶಕ್ಕೆ ಪಡೆದ ಆರೋಪಿಗಳು 20 ರಿಂದ 25 ವರ್ಷದ ವಯಸ್ಸಿನವರಾಗಿದ್ದಾರೆ. ಎಲ್ಲರೂ ಕಳೆದ ಎರಡು- ಮೂರು ವರ್ಷಗಳಿಂದ ಜೊತೆಯಲ್ಲಿ ಓಡಾಡಿಕೊಂಡಿದ್ದರು. ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದರು. ಕೆಲವರು ಬೆಳಗಾವಿಯಲ್ಲಿ ರೂಮ್ ಪಡೆದು ವಾಸವಿದ್ದರು ಎಂದು ಬೋರಲಿಂಗಯ್ಯ ಮಾಹಿತಿ ನೀಡಿದರು.
ಗುರುವಾರ ರಾತ್ರಿ 8.45 ರಿಂದ 9 ಗಂಟೆ ಮಧ್ಯೆ ಈ ಘಟನೆ ನಡೆದಿದ್ದು ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಲಾಗುತ್ತಿದೆ. ಕೊಲೆಯಾದ ಮಹೇಶ್ ಮುರಾರಿ ಗೋಕಾಕ್‌ನ ಟೈಗರ್ ಗ್ಯಾಂಗ್ ಜೊತೆ ಸಂಬಂಧ ಹೊಂದಿದ ಬಗ್ಗೆ ತನಿಖೆಯೂ ನಡೆಯುತ್ತಿದೆ. ವಶಕ್ಕೆ ಪಡೆದವರಲ್ಲಿ ಒಬ್ಬನಿಗೆ ಪ್ರಕಾಶ್ ಪಾಟೀಲ್ ಬೆದರಿಕೆಯೊಡ್ಡಿದ್ದ ಎಂಬ ಮಾಹಿತಿ ಲಭಿಸಿದೆ.
ಇವರೆಲ್ಲ ಸೇರಿ ಕ್ರೌರ್ಯದಿಂದ ಕೂಡಿದ ರೀಲ್ಸ್ ಮಾಡುತ್ತಿದ್ದರು ಎಂಬ ಮಾಹಿತಿ ಇದ್ದು ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಕೊಲೆಯಾದ ಮಹೇಶ್ ಮುರಾರಿ 2019ರಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯಾಗಿದ್ದ. ಕೊಲೆಗೂ ಮುನ್ನ ಖಾರದ ಪುಡಿ ಎರಚಿದ್ದಾಗಿ ಹೇಳಲಾಗುತ್ತಿದ್ದು ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದರು.
ಪ್ರಕರಣದ ತನಿಖೆ ಮುಂದುವರಿಯುತ್ತಿದ್ದು ಇನ್ನೂ ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ; ಶೀಘ್ರದಲ್ಲಿಯೇ ವಿವಿಧ ಯೋಜನೆಗಳು ಅನುಷ್ಠಾನಕ್ಕೆ; ಸಿಎಂ ಭರವಸೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ