Kannada NewsKarnataka NewsLatest

ನಡುಗಡ್ಡೆಯಾದ ಖಾನಾಪುರದ 60 ಗ್ರಾಮಗಳು

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಗುರುವಾರ ರಾತ್ರಿಯಿಂದ ಶುಕ್ರವಾರ ಸಂಜೆ ವರೆಗೆ ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಹರಿಯುವ ನದಿಗಳು ಮತ್ತು ಹಳ್ಳಗಳಲ್ಲಿ ಪ್ರವಾಹ ಏರ್ಪಟ್ಟಿದೆ. ಅರಣ್ಯಪ್ರದೇಶದಲ್ಲಿ ಸುರಿದ ಸತತಧಾರೆಯಿಂದಾಗಿ
ಗುಂಜಿ, ಲೋಂಡಾ, ಹೆಮ್ಮಡಗಾ, ನೇರಸೆ, ನೀಲಾವಡೆ, ಜಾಂಬೋಟಿ ಮತ್ತು ಕಣಕುಂಬಿ
ಅರಣ್ಯಪ್ರದೇಶದ ಅರವತ್ತು ಗ್ರಾಮಗಳು ಮುಖ್ಯ ವಾಹಿನಿಯಿಂದ ಸಂಪರ್ಕ ಕಡಿದುಕೊಂಡು
ನಡುಗಡ್ಡೆಯಾಗಿ ಮಾರ್ಪಟ್ಟಿವೆ.
ಕಳೆದ ಹಲವು ದಿನಗಳಿಂದ ತಾಲ್ಲೂಕಿನಾದ್ಯಂತ ಸತತವಾಗಿ ಸುರಿಯುತ್ತಿರುವ ಮಳೆಯ ಪ್ರಮಾಣ
ಶುಕ್ರವಾರ ಹಠಾತ್ತನೇ ಹೆಚ್ಚಿದ ಪರಿಣಾಮ ಹಲವೆಡೆ ಸಂಚಾರ ಸ್ಥಗಿತ, ಸೇತುವೆಗಳು, ಕೃಷಿ
ಭೂಮಿಗಳು, ಕಟ್ಟಡಗಳು ಜಲಾವೃತಗೊಳ್ಳುವುದು ಸೇರಿದಂತೆ ಹಲವು ಅವಘಡಗಳು ವರದಿಯಾಗಿವೆ.
ಶುಕ್ರವಾರದ ಮಳೆ ತಾಲ್ಲೂಕಿನಾದ್ಯಂತ ಹಲವು ಅವಾಂತರಗಳನ್ನು ಸೃಷ್ಟಿಸುವ ಮೂಲಕ
ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮಲಪ್ರಭಾ ನದಿಯಲ್ಲಿ ನೀರು ಉಕ್ಕಿ
ಹರಿಯುತ್ತಿರುವ ಕಾರಣ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆಗಳ
ಮೇಲೆ ಹಲವು ಅಡಿಗಳಷ್ಟು ನೀರು ಹರಿಯುತ್ತಿದೆ. ಪಟ್ಟಣದ ರಾಜ್ಯ ಪೊಲೀಸ್ ತರಬೇತಿ ಶಾಲೆಯ
ಕಟ್ಟಡ, ವಸತಿಗೃಹಗಳು ಮತ್ತು ದುರ್ಗಾನಗರ, ಮಾರುತಿನಗರ ಬಡಾವಣೆಯ ಕೆಲ ಜನವಸತಿ
ಪ್ರದೇಶಗಳು ಗುರುವಾರ ರಾತ್ರಿಯಿಂದಲೇ ಜಲಾವೃತಗೊಂಡಿವೆ. ಸ್ಥಳೀಯರು ಮತ್ತು ಪಟ್ಟಣ
ಪಂಚಾಯ್ತಿಯವರ ನೆರವಿನಿಂದ ಮನೆಗಳಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ
ರವಾನಿಸಲಾಗಿದೆ. ಪ್ರವಾಹ ಸಂತ್ರಸ್ತರಿಗೆ ಪಟ್ಟಣ ಪಂಚಾಯ್ತಿ ವತಿಯಿಂದ ಸುರಕ್ಷಿತ
ಸ್ಥಳಗಳಲ್ಲಿ ತಾತ್ಕಾಲಿಕವಾಗಿ ಆಶ್ರಯ ಕಲ್ಪಿಸಲಾಗಿದೆ. ಎಡೆಬಿಡದೇ ಮಳೆ
ಸುರಿಯುತ್ತಿರುವ ಸಂಪರ್ಕ ಸೇತುವೆಗಳ ಮೇಲೆ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿದೆ.
ಹಬ್ಬನಹಟ್ಟಿಯ ಆಂಜನೇಯ ದೇವಸ್ಥಾನ, ಪಟ್ಟಣದ ಇಸ್ಕಾನ್ ದೇವಾಲಯ, ರಾಮಮಂದಿರ ಮತ್ತು
ಇಟಗಿಯ ಮರುಳಶಂಕರ ದೇವಸ್ಥಾನಗಳು ಮಲಪ್ರಭಾ ನದಿಯಲ್ಲಿ ಸಂಪೂರ್ಣ ಮುಳುಗಿವೆ.
ಕಂದಾಯ ಇಲಾಖೆಯ ಮೂಲಗಳ ಪ್ರಕಾರ ಕಣಕುಂಬಿ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ
ಶುಕ್ರವಾರ ಬೆಳಗ್ಗೆಯವರೆಗೆ ದಾಖಲೆಯ 521 ಮಿ.ಮೀ, ಜಾಂಬೋಟಿಯಲ್ಲಿ 436 ಮಿಮೀ, ಲೋಂಡಾ
378 ಮಿಮೀ, ನಾಗರಗಾಳಿ 351 ಮಿಮೀ, ಖಾನಾಪುರ ನಗರ ಮತ್ತು ಕಕ್ಕೇರಿ 270 ಮಿಮೀ, ಅಸೋಗಾ
184 ಮಿಮೀ, ಗುಂಜಿ 337 ಮಿಮೀ, ಬೀಡಿ 175 ಮಿಮೀ ಹಾಗೂ ಉಳಿದೆಡೆ 160 ರಿಂದ 220 ಮಿಮೀ
ಮಳೆ ಸುರಿದ ವರದಿಯಾಗಿದೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ನೀಲಾವಡೆ ಗ್ರಾಮದ ಬಳಿ ಮಲಪ್ರಭಾ
ನದಿಯ ಸೇತುವೆಯ, ಪಾರಿಶ್ವಾಡ-ಇಟಗಿ ಮಾರ್ಗದ ಮಲಪ್ರಭಾ ನದಿಯ ಸೇತುವೆ,
ಖಾನಾಪುರ-ಹೆಮ್ಮಡಗಾ ಮಾರ್ಗದ ಅಲಾತ್ರಿ ಹಳ್ಳದ ಸೇತುವೆ, ಹಿರೇಮುನವಳ್ಳಿ-ಅವರೊಳ್ಳಿ,
ಚಿಕದಿನಕೊಪ್ಪ-ಕೊಡಚವಾಡ, ಖಾನಾಪುರ-ಹತ್ತರಗುಂಜಿ, ಕರಂಬಳ-ಜಳಗಾ, ಚಾಪಗಾಂವ-ಯಡೋಗಾ, ಕರೀಕಟ್ಟಿ-ಸುರಾಪುರ, ಬಂಕಿಬಸರಿಕಟ್ಟಿ-ಬೇಕವಾಡ, ಜಾಂಬೋಟಿ-ಮೋದೆಕೊಪ್ಪ,
ಅಸೋಗಾ-ಭೋಸಗಾಳಿ, ಜಾಂಬೋಟಿ-ಬೆಳಗಾವಿ, ತೋರಾಳಿ-ಹಬ್ಬನಹಟ್ಟಿ, ಅಮಟೆ-ಗೋಲ್ಯಾಳಿ,
ದೇಗಾಂವ-ಹೆಮ್ಮಡಗಾ, ಅಬನಾಳಿ-ಡೊಂಗರಗಾಂವ, ಶಿರೋಲಿ-ತಿವೋಲಿ, ಕುಪ್ಪಟಗಿರಿ-ಖಾನಾಪುರ,
ರುಮೇವಾಡಿ-ಖಾನಾಪುರ, ಲೋಂಡಾ-ಗುಂಜಿ, ಚಿಕ್ಕಹಟ್ಟಿಹೊಳಿ-ಚಿಕ್ಕಮುನವಳ್ಳಿ
ಮಾರ್ಗಗಳಲ್ಲಿರುವ ನದಿ, ಹಳ್ಳ-ಕೊಳ್ಳಗಳ ಸೇತುವೆಗಳ ಮೇಲೆ ನೀರು ಹರಿದು ರಸ್ತೆ
ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಭೂ ಕುಸಿತ: ವ್ಯಕ್ತಿ ರಕ್ಷಣೆ: ರೈತ ಸಾವು

ಸತತಧಾರೆಯ ಪರಿಣಾಮ ಕರ್ನಾಟಕ-ಗೋವಾ ಗಡಿಯ ಘಟ್ಟ ಪ್ರದೇಶದಲ್ಲಿ ಗುರುವಾರ ರಾತ್ರಿ
ಗುಡ್ಡವೊಂದು ರಸ್ತೆಯ ಮೇಲೆ ಕುಸಿದ ಪರಿಣಾಮ ಬೆಳಗಾವಿ-ಗೋವಾ ರಸ್ತೆ ಸಂಪರ್ಕ ಸಂಪೂರ್ಣ
ಸ್ಥಗಿತವಾಗಿದೆ. ಘಟ್ಟ ಪ್ರದೇಶದಲ್ಲಿ ಭಾರೀ ಪ್ರಮಾಣದ ಮಳೆ ಸುರಿಯುತ್ತಿರುವ ಕಾರಣ
ರಕ್ಷಣಾ ಕಾರ್ಯಗಳಿಗೆ ಅಡಚಣೆ ಉಂಟಾಗಿದೆ.
ತಾಲ್ಲೂಕಿನ ಲೋಂಡಾ ಗ್ರಾಮದ ಹೊರವಲಯದ ಫಾರ್ಮ್ ಹೌಸ್ ನಲ್ಲಿ ಸಿಲುಕಿದ್ದ
ವ್ಯಕ್ತಿಯೊಬ್ಬರನ್ನು ಗ್ರಾಮ ಪಂಚಾಯ್ತಿ, ಉತ್ತರ ಕನ್ನಡ ಜಿಲ್ಲಾಡಳಿತ ಮತ್ತು ಖಾನಾಪುರ
ಪೊಲೀಸರ ತಂಡದಿಂದ ರಕ್ಷಿಸಲಾಗಿದೆ. ಲೋಂಡಾ ಗ್ರಾಮದ ಹೊರವಲಯದ ಪೌಲ್ಟ್ರೀ ಫಾರ್ಮಿನಲ್ಲಿ
ಕೆಲಸ ನಿರ್ವಹಿಸುತ್ತಿದ್ದ ಲೋಂಡಾ ಗ್ರಾಮದ ಗಣಪತಿ ಮಿಠಾರಿ ಎಂಬ ವ್ಯಕ್ತಿ ಗ್ರಾಮದ
ಪಾಂಡರಿ ನದಿಯ ಮತ್ತೊಂದು ಬದಿಯಲ್ಲಿರುವ ಫಾರ್ಮ್ ಹೌಸಿಗೆ ಕೆಲಸಕ್ಕೆಂದು ತೆರಳಿದ್ದ
ಸಂದರ್ಭದಲ್ಲಿ ನದಿಯಲ್ಲಿ ಪ್ರವಾಹ ಏರ್ಪಟ್ಟಿತ್ತು. ಸುದ್ದಿ ತಿಳಿದ ಅಧಿಕಾರಿಗಳು
ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಣಪತಿ ಅವರನ್ನು ಗ್ರಾಮಕ್ಕೆ ಮರಳಿ
ಸುರಕ್ಷಿತವಾಗಿ ಕರೆತರುವಲ್ಲಿ ತಂಡ ಯಶಸ್ವಿಯಾದರು ಎಂದು ಲೋಂಡಾ ಗ್ರಾಮ ಪಂಚಾಯ್ತಿ
ಪಿಡಿಒ ಬಾಲರಾಜ್ ಭಜಂತ್ರಿ ಮಾಹಿತಿ ನೀಡಿದ್ದಾರೆ.
ಅದೇ ರೀತಿ ತಾಲ್ಲೂಕಿನ ಕಾಪೋಲಿ ಕೆಜಿ ಗ್ರಾಮದ ಹೊರವಲಯದ ತಮ್ಮ ಕೃಷಿ ಭೂಮಿಯಲ್ಲಿ
ಜಲಾವೃತಗೊಂಡಿದ್ದ ಮೋಟರ್ ಪಂಪಸೆಟ್ ತೆರವುಗೊಳಿಸಲು ತೆರಳಿದ್ದ ರೈತರೊಬ್ಬರು ವಿದ್ಯುತ್
ಸ್ಪರ್ಶಿಸಿ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ. ಕಾಪೋಲಿ ಗ್ರಾಮದ ರೈತ ಅರವಿಂದ
ಶಂಕರ ದೇಸಾಯಿ (38) ಮೃತ ರೈತ. ಈ ಕುರಿತು ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳ್ಳ ದಾಟುತ್ತಿದ್ದಾಗ ನೀರಿನ ಸೆಳೆತಕ್ಕೆ ಕೊಚ್ಚಿ ಹೋದ ಬಾಲಕಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button