ಕಾಲಮಿತಿಯಲ್ಲಿ ಸ್ಮಾರ್ಟ್ ಪಾರ್ಕಿಂಗ್ ಅನುಷ್ಠಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ರಸ್ತೆಗಳಲ್ಲಿ ಸುಗಮ ಸುವ್ಯವಸ್ಥಿತ ವಾಹನ ನಿಲುಗಡೆಗಾಗಿ ಕೈಗೊಂಡಿರುವ ಸ್ಮಾರ್ಟ್ ಪಾರ್ಕಿಂಗ್ ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೇಲ್ಮನೆಗೆ ತಿಳಿಸಿದರು.
ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಪಿ.ಆರ್. ರಮೇಶ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಬೆಂಗಳೂರು ನಗರದ ಸಂಚಾರಿ ದಟ್ಟಣೆ ಪ್ರದೇಶವನ್ನು ಕೇಂದ್ರೀಕರಿಸಿಕೊಂಡು 85 ರಸ್ತೆಗಳಲ್ಲಿ ಸುವ್ಯವಸ್ಥಿತ ವಾಹನ ನಿಲುಗಡೆಗಾಗಿ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಪೈಕಿ ಮೊದಲ ಹಂತದಲ್ಲಿ 10 ರಸ್ತೆಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಬಳಸಲಾಗುತ್ತದೆ. ಎರಡನೇ ಹಂತದಲ್ಲಿ 32 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ನೀಲಿ ನಕ್ಷೆ ತಯಾರಿಸಿ ಶೀಘ್ರವೇ ಅನುಷ್ಠಾನಗೊಳಿಸಲಾಗುವುದು. ಸ್ಮಾರ್ಟ್ ಪಾರ್ಕಿಂಗಿಗೆ ಅಗತ್ಯವಾದ ಉಪಕರಣಗಳ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಸ್ತೆ ಇತಿಹಾಸ: ಬೆಂಗಳೂರು ನಗರದ ಪ್ರಮುಖ ರಸ್ತೆಗಳ ಇತಿಹಾಸ ದಾಖಲಿಸಿ ರಸ್ತೆ ನಿರ್ವಹಣೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಕುರಿತಂತೆ ಶೀಘ್ರವೇ ಸಭೆ ನಡೆಸಲಾಗುವುದು. ಯಾವುದೇ ಒಂದು ರಸ್ತೆಯ ಸ್ಥಿತಿ ಯಾವ ಯಾವ ಯೋಜನೆಯಡಿ ಯಾವ ಯಾವ ಕಾಲದಲ್ಲಿ ದುರಸ್ತಿಯಾಗಿದೆ ಎಂಬ ಮಾಹಿತಿಯನ್ನು ದಾಖಲಿಸಲಾಗುವುದು. ಇದರಿಂದ ಒಂದೇ ರಸ್ತೆಯನ್ನು ಹಲವು ಯೋಜನೆಗಳಲ್ಲಿ ಪುನರಾವರ್ತಿತ ಅನುದಾನ ಬಳಸಿ ದುರಸ್ತಿ ಮಾಡುವುದನ್ನು ತಡೆಹಿಡಿಬಹುದಾಗಿದೆ. ಪಾರದರ್ಶಕತೆ ಕಾಪಾಡಿಕೊಳ್ಳಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಎಲ್ಲಾ ರೈತರಿಗೂ ಹನಿ ನೀರಾವರಿ ಯೋಜನೆಗೆ ಸಬ್ಸಿಡಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ