ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಸಂಸತ್ತಿನಲ್ಲಿ ರಾಹುಲ್ ಗಾಂಧಿ ಅವರು ಫ್ಲಾಯಿಂಗ್ ಕಿಸ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಗರಂ ಆಗಿದ್ದು ಈ ಬಗ್ಗೆ ವ್ಯಾಪಕ ಆಕ್ಷೇಪಗಳು ವ್ಯಕ್ತವಾಗಿವೆ.
“ನನಗಿಂತ ಮೊದಲು ಮಾತನಾಡಿದ ರಾಹುಲ್ ಗಾಂಧಿ ಅನುಚಿತವಾಗಿ ವರ್ತಿಸಿದ್ದಾರೆ. ಸ್ತ್ರೀದ್ವೇಷಿಯಾಗಿರುವ ಪುರುಷ ಮಾತ್ರ ಮಹಿಳಾ ಸಂಸದರಿಗೆ ಫ್ಲಾಯಿಂಗ್ ಕಿಸ್ ನೀಡಬಹುದು. ಇದು ಅವರ ಕುಟುಂಬ ಮತ್ತು ಪಕ್ಷ ಮಹಿಳೆಯರ ಬಗ್ಗೆ ಹೊಂದಿರುವ ಭಾವನೆಯನ್ನು ತೋರಿಸುತ್ತದೆ. ಇಂತಹ ಅಮಾನವೀಯ ನಡವಳಿಕೆಯನ್ನು ದೇಶದ ಸಂಸತ್ತಿನಲ್ಲಿ ಹಿಂದೆಂದೂ ಕಂಡಿರಲಿಲ್ಲ” ಎಂದು ಸ್ಮೃತಿ ಇರಾನಿ ಆಕ್ರೋಶ ಹೊರಹಾಕಿದ್ದಾರೆ.
ಇನ್ನೊಂದೆಡೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಫ್ಲಾಯಿಂಗ್ ಕಿಸ್ ವಿರುದ್ಧ ಕೆಂಗಣ್ಣು ಬೀರಿದ್ದು, “ಇದು ಸಂಸದರೊಬ್ಬರ ಅನುಚಿತ ಮತ್ತು ಅಸಭ್ಯ ವರ್ತನೆ. ಭಾರತದ ಸಂಸತ್ತಿನ ಇತಿಹಾಸದಲ್ಲಿ ಇದುವರೆಗೆ ನಡೆದಿಲ್ಲ. ಇದರ ಸಿಸಿಟಿವಿ ದೃಶ್ಯಾವಳಿಗಳನ್ನು ತೆಗೆದುಕೊಂಡು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್‌ಗೆ ದೂರು ನೀಡಿದ್ದೇವೆ” ಎಂದು ಹೇಳಿದ್ದಾರೆ.
ಇದೇ ವೇಳೆ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಅವರು ರಾಹುಲ್ ಗಾಂಧಿಯವರ ಫ್ಲಾಯಿಂಗ್ ಕಿಸ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ಇದು ಈ ನಾಚಿಕೆಗೇಡಿನ ವರ್ತನೆ ಎಂದಿದ್ದಾರೆ. ಕಳೆದ ಬಾರಿ ಕಣ್ಣು ಮಿಟುಕಿಸಿದ್ದರು. ಇದೀಗ ಫ್ಲಾಯಿಂಗ್ ಕಿಸ್. ಇದು ಅವಮಾನಕರ ಮತ್ತು ಚಿಚೋರಾ ರೀತಿಯ ನಡವಳಿಕೆ. ಇಷ್ಟಕ್ಕೂ ಅವರು ಮಹಿಳೆಯರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ” ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ