ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಶ್ಚಿಮ ಬಂಗಾಳದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದ ಬಿಎಸ್ಎಫ್ ಯೋಧ ಸೂರಜ್ ಸುತಾರ್ ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ಬುಧವಾರ ಸ್ವಗ್ರಾಮದಲ್ಲಿ ನೆರವೇರಿತು.
ದೆಹಲಿ ಮೂಲಕ ಪಾರ್ಥಿವ ಶರೀರವನ್ನು ವಿಮಾನದ ಮೂಲಕ ತರಲಾಯಿತು. ಈ ವೇಳೆ ಇಡೀ ಗ್ರಾಮವೇ ಯೋಧನ ಸಾವಿಗೆ ಕಂಬನಿ ಮಿಡಿಯಿತು.
ಮೃತ ಯೋಧನ ಪಾರ್ಥಿವ ಶರೀರಕ್ಕೆ ಚಿಕ್ಕೋಡಿ ತಾಲೂಕು ಆಡಳಿತದ ವತಿಯಿಂದ ಚಿಕ್ಕೋಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅವರು ಅಂತಿಮ ಗೌರವ ಸಲ್ಲಿಸಿದರು. ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಗಣೇಶ ಹುಕ್ಕೇರಿ, ಮಾಜಿ ಎಂಎಲ್ ಸಿ ಮಹಾಂತೇಶ ಕವಟಗಿಮಠ, ವಿವಿಧ ಮಠಾಧೀಶರು, ಅನೇಕ ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಮೃತ ಯೋಧನ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಇದಕ್ಕೂ ಮುನ್ನ ಗ್ರಾಮದಲ್ಲಿ ಅವರ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು. ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸೂಚಿಸಿದರು.
2012ರಲ್ಲಿ ಭಾರತೀಯ ಗಡಿ ಭದ್ರತಾ ಪಡೆಗೆ ಸೇರ್ಪಡೆಯಾಗಿದ್ದ ಸೂರಜ್ ದೊಂಡಿರಾಮ್ ಸುತಾರ ಸುಮಾರು 10 ವರ್ಷ ಪಶ್ಚಿಮ ಬಂಗಾಳ, ಕಾಶ್ಮೀರದಲ್ಲಿ ಸೇವೆ ಸಲ್ಲಿಸಿ ಪುನಃ ಪಶ್ಚಿಮ ಬಂಗಾಳದ ಪನಜಿಪರಾದ ಉತ್ತರ ದೀನಜಪುರ್ ನ 152 ಬಟಾಲಿಯನ್ ಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪಶ್ಚಿಮ ಬಂಗಾಳದ ರುಬೀನಾ ಎಂಬ ಯುವತಿಯನ್ನು ಪ್ರೇಮಿಸಿ ಕುಟುಂಬದವರ ಸಮ್ಮುಖದಲ್ಲಿ ಯಡೂರವಾಡಿಯಲ್ಲಿ ವಿವಾಹವಾಗಿದ್ದರು.
ಜು.18 ರಂದು ಕರ್ತವ್ಯದ ಮೇಲೆ ತೆರಳುವ ಮುನ್ನ ಆಸ್ಸಾಂ ನ ಕಿಶನ್ ಗಂಜ್ ರೇಲ್ವೆ ಸ್ಟೇಷನ್ ಗೆ ತಮ್ಮ ಪತ್ನಿ- ಮಗುವನ್ನು ಕರೆ ತರಲು ಹೋದಾಗ ಆಟೋದಿಂದ ಇಳಿದು ರಸ್ತೆ ದಾಟುವಾಗ ಲಾರಿ ಡಿಕ್ಕಿಯಾಗಿ ಮೃತಪಟ್ಟಿದ್ದರು.
ಅನ್ನ, ನೀರು, ಆಹಾರದಷ್ಟೇ ಶಿಕ್ಷಣವೂ ಮುಖ್ಯ: ಚನ್ನರಾಜ ಹಟ್ಟಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ