ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -5 ವರ್ಷದಿಂದ ಜಿಲ್ಲಾಡಳಿತಕ್ಕೆ ಮನವಿ ಮೇಲೆ ಮನವಿ ಸಲ್ಲಿಸಿದ್ದರೂ ಪರಿಹಾರವಾಗದ ಸಮಸ್ಯೆಯೊಂದು ಇಂದು ಕೆಲವೇ ಗಂಟೆಗಳಲ್ಲಿ ಬಗೆಹರಿದಿದೆ. ಬೆಳಗಾವಿ ತಾಲೂಕಿನ ಅತವಾಡ ಗ್ರಾಮದ ಕುಡಿಯುವ ನೀರಿನ ಸಮಸ್ಯೆಯನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ಇಂದು ಪರಿಹರಿಸಿದರು.
ಅತವಾಡ ಗ್ರಾಮದಲ್ಲಿ ಕುಡಿಯುವ ಮನೀರಿನ ಸಮಸ್ಯೆ ತಾಂಡವವಾಡುತ್ತಿತ್ತು. ಗ್ರಾಮದಲ್ಲಿರುವ ಕೊಳವೆ ಬಾವಿ ಕೊಟ್ಟು ಹೋಗಿ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರು. ಆದರೆ ಸಮಸ್ಯೆ ಮಾತ್ರ ಪರಿಹಾರವಾಗಿರಲಿಲ್ಲ.
ಗ್ರಾಮಸ್ಥರು ಮಂಗಳವಾರ ಜಿಲ್ಲಾಧಿಕಾರಿಗೆ ಮತ್ತೊಮ್ಮೆ ಮನವಿ ಸಲ್ಲಿಸಲು ನಿರ್ಧರಿಸಿದ್ದರು. ಗ್ರಾಮದ ಮುಖಂಡರೊಬ್ಬರು ಶಂಕರಗೌಡ ಪಾಟೀಲ ಅವರಿಗೆ ಕರೆ ಮಾಡಿ ತಾವು ಗ್ರಾಮಸ್ಥರ ನಿಯೋಗದೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಬರುತ್ತಿರುವುದಾಗಿ ತಿಳಿಸಿದರು. ತಕ್ಷಣ ಶಂಕರಗೌಡ ಪಾಟೀಲ ಸಹ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು.
ಗ್ರಾಮಸ್ಥರು ಹಾಗೂ ಶಂಕರಗೌಡ ಪಾಟೀಲ ಬಂದಿರುವುದನ್ನು ತಿಳಿದ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಳ್ಳಿ ಕೆಳಗಿಳಿದು ಬಂದರು. ಗ್ರಾಮಸ್ಥರ ಸಮಸ್ಯೆ ಆಲಿಸಿ, ಮನವಿ ಸ್ವೀಕರಿಸಿದರು. ಗ್ರಾಮದ ಸಮಸ್ಯೆಯ ಗಂಭೀರತೆಯನ್ನು ಶಂಕರಗೌಡ ಪಾಟೀಲ ಜಿಲ್ಲಾಧಿಕಾರಿಗೆ ಮನದಟ್ಟು ಮಾಡಿಕೊಟ್ಟರು.
ತಕ್ಷಣ ಸಂಬಂಧಿಸಿದವರಿಗೆ ಕರೆ ಮಾಡಿ ಸಮಸ್ಯೆ ಪರಿಹರಿಸಲು ಜಿಲ್ಲಾಧಿಕಾರಿ ಸೂಚಿಸಿದರು. ಪರಿಣಾಮವಾಗಿ ಸಂಜೆಯೊಳಗೆ ಕೊಳವೆ ಬಾವಿ ದುರಸ್ತಿಯಾಗಿದೆ. ಶಂಕರಗೌಡ ಪಾಟೀಲ ಗ್ರಾಮಕ್ಕೆ ತೆರಳಿ ದುರಸ್ತಿಯಾದ ಕೊಳವೆ ಬಾವಿಯನ್ನು ಪರಿಶೀಲನೆ ಮಾಡಿದರು. ತಕ್ಷಣ ಸಮಸ್ಯೆ ಪರಿಹರಿಸಿದ್ದಕ್ಕೆ ಗ್ರಾಮಸ್ಥರು ಧನ್ಯವಾದ ಸಲ್ಲಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ