
ಹೋಳಿ ಹಬ್ಬ ಬಹಳ ವಿಶೇಷವಾದ, ಬಣ್ಣ ಪ್ರಧಾನವಾದ ಹಬ್ಬ. ಈ ಹಬ್ಬದ ಸುತ್ತ ಹಲವಾರು ಧಾರ್ಮಿಕ, ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಕಥೆಗಳಿವೆ. ಇವೆಲ್ಲವೂ ಬಹಳ ಆಸಕ್ತಿದಾಯಕ ಕಥೆಗಳಾಗಿವೆ. ಇಲ್ಲಿವೆ ಕೆಲವು ಕಥೆಗಳು, ತಿಳಿದುಕೊಳ್ಳಿ
ಪೂತನಿಯ ಸಂಹಾರ
ಶ್ರೀಕೃಷ್ಣ ದೇವನು ಶಿಶುವಾಗಿರುವಾಗ ಕಂಸ ರಾಜನು ಪೂತನಿಯನ್ನು ಸಾಯಿಸಲು ಕಳುಹಿಸಿದ್ದನು. ಆಗ ಬಾಲ ಕೃಷ್ಣನು ರಾಕ್ಷಸಿಯ ಹಾಲಿನೊಂದಿಗೆ ರಕ್ತವನ್ನು ಹೀರಿದನು. ಆದ್ದರಿಂದಲೇ ಕೃಷ್ಣನ ಮೈಬಣ್ಣವು ನೀಲಿ ಬಣ್ಣಕ್ಕೆ ತಿರುಗಿತು. ನಂತರ ಪೂತನಿ ರಾಕ್ಷಸಿಯ ಸಂಹಾರವನ್ನು ಮಾಡಿದನು. ರಾಧೆಯು ಕೃಷ್ಣನ ಮೈಬಣ್ಣ ಬದಲಾಗಿರುವುದಕ್ಕೆ ಚಿಂತಿಸದೆ ಅವನ ಪ್ರೀತಿಯನ್ನು ಗೌರವಿಸಿದಳು. ಅವರಿಬ್ಬರ ಪ್ರೀತಿಯ ಪ್ರತೀಕವಾಗಿ ಹೋಳಿ ಹಬ್ಬದ ಆಚರಣೆ ಮಾಡಲಾಯಿತು ಎಂದು ಹೇಳಲಾಗುವುದು.
ಹಿರಣ್ಯಕಶಿಪು-ಹೋಲಿಕಾ
ಹಿರಣ್ಯ ಕಶಿಪು ಎನ್ನುವ ದುಷ್ಟ ರಾಜನಿಗೆ ವಿಷ್ಣು ಭಕ್ತನಾದ ಪ್ರಹ್ಲಾದ ಎನ್ನುವ ಮಗನಿದ್ದನು. ಅವನು ತಂದೆಯ ಮಾತನ್ನು ಕೆಳದೆ ಸದಾ ಕಾಲ ವಿಷ್ಣುವಿನ ಧ್ಯಾನ ಹಾಗೂ ಆರಾಧನೆಯನ್ನು ಮಾಡುತ್ತಿದ್ದನು. ಮಗನಿಗೆ ವಿಷ್ಣುವಿನ ಧ್ಯಾನ ಮಾಡದಂತೆ ಹಿರಣ್ಯ ಕಶ್ಯಪು ಆಜ್ಞೆಯನ್ನು ಮಾಡಿದನು. ಆದರೆ ಅದ್ಯಾವುದೂ ಸಫಲವಾಗದೆ ಹೋಯಿತು. ನಂತರ ಕೆಲವು ದುಷ್ಕೃತ್ಯವನ್ನು ಮಗನ ವಿರುದ್ಧವಾಗಿ ಮಾಡುವುದರ ಮೂಲಕ ಅವನಿಗೆ ಪಾಠ ಕಲಿಸಲು ಮುಂದಾದನು. ಆಗಲೂ ಸಹ ಯಾವುದೇ ಸಂಗತಿಗಳು ಫಲಕಾರಿಯಾಗಲಿಲ್ಲ. ನಂತರ ತನ್ನ ತಂಗಿ ಹೋಲಿಕಾಳ ಬಳಿ ಹೋದನು. ಹೋಲಿಕಾ ತನ್ನ ತೊಡೆಯ ಮೇಲೆ ಯಾರು ಕುಳಿತುಕೊಳ್ಳುತ್ತಾರೋ ಅವರನ್ನು ಸುಡುವ ಶಕ್ತಿಯನ್ನು ಪಡೆದುಕೊಂಡಿದ್ದಳು.
ಹಾಗಾಗಿ ಪ್ರಹ್ಲಾದನನ್ನು ಸಹ ತನ್ನ ತೊಡೆಯ ಮೇಲೆ ಕುಳಿಸಿಕೊಳ್ಳಲು ಹೇಳಿದನು. ಅಣ್ಣನ ಮಾತಿನಂತೆ ಹೋಲಿಕಾ ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡನು. ಆದರೆ ಪ್ರಹ್ಲಾದ ಹರಿಯ ಸ್ಮರಣೆಯನ್ನು ಮಾಡುತ್ತಲೇ ಇದ್ದುದರಿಂದ ಹೋಲಿಕಾ ಸುಟ್ಟು ಭಸ್ಮವಾದಳು. ಪ್ರಹ್ಲಾದ ಬೆಂಕಿಯಿಂದ ಹೊರಗೆ ಬಂದನು ಎಂದು ಹೇಳಲಾಗುವುದು. ಹೋಲಿಕಾಳ ದಹನದ ಹಿನ್ನೆಲೆಯಲ್ಲಿಯೇ ಹೋಳಿ ಹಬ್ಬವನ್ನು ಆಚರಿಸಲಾಯಿತು. ಹಬ್ಬಕ್ಕೆ ಹೋಳಿ ಎನ್ನುವ ಹೆಸರು ಬಂತು ಎಂದು ಧಾರ್ಮಿಕ ಕತೆಯು ತಿಳಿಸುತ್ತದೆ.
ಪಾರ್ವತಿ ಕಾಮದೇವನ ಮೊರೆ;
ಶಿವರಾತ್ರಿ ಅಮವಾಸೆಯಿಂದ ಹೋಳಿ ಹುಣ್ಣಿಮೆಗೆ ಹದಿನೈದರಿಂದ ಇಪ್ಪತ್ತು ದಿನಗಳ ಅಂತರ. ಪರಮಾತ್ಮನು ತುಂಗಭದ್ರಾ ನದಿಯ ದಡದಲ್ಲಿ ಇರುವ ಹೇಮಗಿರಿ ಪರ್ವತದ ಶಿಖರದಲ್ಲಿ ತಪಸ್ಸು ಮಾಡುವಾಗ ಅವನ ತಪಸ್ಸನ್ನು ಭಂಗ ಮಾಡಿ ಮದುವೆಯಾಗಲು ಪಾರ್ವತಿಯು ಕಾಮದೇವನಲ್ಲಿ ಮೊರೆ ಹೋಗುತ್ತಾಳೆ. ಆಗ ವಿಷ್ಣುವಿನ ಅಪ್ಪಣೆಯಂತೆ ಕಾಮದೇವನು ತನ್ನ ಸೈನ್ಯ ಸಮೇತ ಶಿವನಿದ್ದ ಸ್ಥಳಕ್ಕೆ ಬಂದು ತನ್ನ ಬಾಣಗಳಿಂದ ತಫೋಭಂಗಗೊಳಿಸುತ್ತಾನೆ ಇದರಿಂದ ಕೋಪಗೊಂಡ ಶಿವನು ತನ್ನ ಉರಿಗಣ್ಣಿನಿಂದ ಕಾಮನನ್ನು ಸುಟ್ಟು ಭಸ್ಮ ಮಾಡುತ್ತಾನೆ. ಗಂಡನನ್ನು ಕಳೆದುಕೊಂಡ ರತಿಯನ್ನು ಸಮಾಧಾನಪಡಿಸುವುದು ಪಾರ್ವತಿಗೆ ಕಷ್ಟವಾಗುತ್ತದೆ. ಆಗ ಪಾರ್ವತಿಯು ಕೂಡ ಘೋರ ತಪಸ್ಸನ್ನಾಚರಿಸಿ ಪರಶಿವನನ್ನು ಒಲಿಸಿಕೊಂಡಳಲ್ಲದೇ ಕಾಮನಿಗೆ ಮರುಜನ್ಮ ಕೊಡಿಸುವಳು. ತನ್ನಿಮಿತ್ತ ಹೋಳಿ ಆಚರಣೆ ಬಂದಿದೆ ಎಂಬುದು ಪ್ರತೀತಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ